ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್‌ಶಿಪ್‌ಗೆ ಕರೆದೊಯ್ದ ನಂತರ, ಕಿಂಗ್ ವಿರಾಟ್ ಕೊಹ್ಲಿ (Virat Kohli) ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರ ಜೊತೆ ಬೃಂದಾವನಕ್ಕೆ ತೆರಳಿ ಪ್ರೇಮಾನಂದ ಗುರೂಜಿ ಅವರ ಬಳಿ ಆಶೀರ್ವಾದ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳಲ್ಲಿ ದಂಪತಿ ಬಂಕೆ ಬಿಹಾರಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ, ಇನ್ನು ಕೆಲ ವಿಡಿಯೊಗಳಲ್ಲಿ ಅವರು ಪಾದರಕ್ಷೆಗಳು ಇಲ್ಲದೆ ರಾಧಾ ಕೇಲಿ ಕುಂಜ್ ಆಶ್ರಮದ ಒಳಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇದರ ಫೋಟೋಗಳು ಹಾಗೂ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಕಾದಾಟ ನಡೆಸಿತ್ತು. ಈ ಪಂದ್ಯದಲ್ಲಿ ಜಿಟಿ ನೀಡಿದ್ದ 156 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಅಜೇಯ 75 ರನ್‌ಗಳನ್ನು ಗಳಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೀಗ ಅವರು ಐಪಿಎಲ್ ವಿಜಯೋತ್ಸವವನ್ನು ಆಚರಿಸಲು ತಮ್ಮ ಪತ್ನಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ನೇರವಾಗಿ ಶ್ರೀಕೃಷ್ಣನ ವಾಸಸ್ಥಾನವಾದ ಬೃಂದಾವನಕ್ಕೆ ತೆರಳಿದರು.
ʻನೀವು ಆರ್‌ಸಿಬಿ ಡ್ರೆಸ್ಸಿಂಗ್ ರೂಂನ ಹೃದಯ ಬಡಿತʼ: ವಿರಾಟ್ ಕೊಹ್ಲಿಗೆ ಆಂಡಿ ಫ್ಲವರ್ ಮೆಚ್ಚುಗೆ!
ಆರ್‌ಸಿಬಿ ಹಾಗೂ ಜಿಟಿ ನಡುವಣ ಹೈ-ವೋಲ್ಟೇಜ್ ಫೈನಲ್ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿಯನ್ನು ಬೆಂಬಲಿಸಲು ಆಗಮಿಸಿದ ಅನುಷ್ಕಾ ಶರ್ಮಾ ಅವರ ನೋಟವು ದೊಡ್ಡ ಚರ್ಚೆಯ ವಿಷಯವಾಯಿತು. ಅನುಷ್ಕಾ ಬಿಳಿ ಉಡುಪನ್ನು ಧರಿಸಿ, ಕುತ್ತಿಗೆಗೆ ತುಳಸಿ ಮಾಲೆಯನ್ನು ಧರಿಸಿದ್ದರು. ಅಭಿಮಾನಿಗಳು ಈ ಸರಳತೆ ಮತ್ತು ಅವರ ಪ್ರಾರ್ಥನೆಗಳು ಆರ್‌ಸಿಬಿ ಗೆಲುವಿಗೆ ದಾರಿ ಮಾಡಿಕೊಟ್ಟವು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅನುಷ್ಕಾ ಮತ್ತು ವಿರಾಟ್ ತಮ್ಮ ಜೀವನದ ಹಲವು ಪ್ರಮುಖ ಸಂದರ್ಭಗಳಲ್ಲಿ ಪ್ರೇಮಾನಂದ ಮಹಾರಾಜರ ಆಶೀರ್ವಾದವನ್ನು ಪಡೆಯುವುದು ರೂಢಿಯಾಗಿದೆ. ಇದಕ್ಕೂ ಮೊದಲು, ಅಕ್ಷಯ ತೃತೀಯ ಮತ್ತು ಅವರ ಮಗ ಅಕಾಯ್ ಅವರ ಹುಟ್ಟುಹಬ್ಬದಂದು ಇಬ್ಬರೂ ಆಶ್ರಮಕ್ಕೆ ಭೇಟಿ ನೀಡಿದ್ದರು.
ಸೋಮವಾರ ಮಧ್ಯಾಹ್ನ ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡದ ವಿಜಯವನ್ನು ವಿಶೇಷ ಪೋಸ್ಟ್‌ನೊಂದಿಗೆ ಸಂಭ್ರಮಿಸಿದ್ದರು. ಕೊಹ್ಲಿ ಟ್ರೋಫಿಯನ್ನು ಹಿಡಿದಿರುವ ಹೃದಯಸ್ಪರ್ಶಿ ಚಿತ್ರವನ್ನು ಹಂಚಿಕೊಂಡಿದ್ದರು.
ವಿರಾಟ್ ಕೊಹ್ಲಿಯ ಮುಂದಿನ ಪಂದ್ಯ ಯಾವಾಗ?
2026ರ ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಮುಗಿಸಿರುವ ವಿರಾಟ್ ಕೊಹ್ಲಿ, ಇನ್ನೂ ಕೆಲವು ದಿನಗಳವರೆಗೂ ವಿರಾಮ ತೆಗೆದುಕೊಳ್ಳಲಿದ್ದಾರೆ. ಜೂನ್ ಮಧ್ಯದಲ್ಲಿ ಅವರು ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿರುವ ಕೊಹ್ಲಿ, 2027ರ ಏಕದಿನ ವಿಶ್ವಕಪ್ ಟೂರ್ನಿಯ ಸದ್ಯ 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.