ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs NZ: ನಾಲ್ಕನೇ ಒಡಿಐಗೆ ಭಾರತಕ್ಕೆ 3 ಬದಲಾವಣೆ ಸೂಚಿಸಿದ ಅಂಬಾಟಿ ರಾಯುಡು, ಮುರಳಿ ಕಾರ್ತಿಕ್!

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಣ ಮೂರನೇ ಪಂದ್ಯ ಮಳೆಯಿಂದ ಒಂದೂ ಎಸೆತ ಕಾಣದೇ ರದ್ದಾಗಿತ್ತು. ಕೊನೆಯ ಎರಡು ಪಂದ್ಯಗಳಿಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಶುಭಮನ್‌ ಗಿಲ್‌, ಕೆಎಲ್‌ ರಾಹುಲ್‌ ಸೇರಿದಂತೆ ಟೆಸ್ಟ್‌ ತಂಡದ ಆಟಗಾರರು ಕೊನೆಯ ಎರಡು ಪಂದ್ಯಗಳಿಂದ ಹೊರ ನಡೆಯಲಿದ್ದಾರೆ.

ಭಾರತ ತಂಡಕ್ಕೆ 3 ಬದಲಾವಣೆ ಸೂಚಿಸಿದ ಕಾರ್ತಿಕ್‌, ರಾಯುಡು.

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯಕ್ಕೆ (IND vs NZ) ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುವಂತೆ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು (Ambati Rayudu) ಹಾಗೂ ಕ್ರಿಕೆಟ್ ವಿಶ್ಲೇಷಕ ಮುರಳಿ ಕಾರ್ತಿಕ್ (Murali karthik) ಸಲಹೆ ನೀಡಿದ್ದಾರೆ. ನವೆಂಬರ್ 13ರಂದು ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕೆ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ.

ಶುಭಮನ್ ಗಿಲ್, ಕೆಎಲ್ ರಾಹುಲ್ ಮತ್ತು ಅನ್ಶುಲ್‌ ಕಾಂಬೋಜ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಟ್ಟು ಈ ಇಬ್ಬರು ಆಟಗಾರರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದಾರೆ. ಸರಣಿಯ ಕೊನೆಯ ಹಂತದಲ್ಲಿ ಹೊಸ ಬ್ಯಾಟಿಂಗ್ ಆಯ್ಕೆಗಳನ್ನು ಪರೀಕ್ಷಿಸುವುದು ಹಾಗೂ ಎಡಗೈ-ಬಲಗೈ ಬ್ಯಾಟರ್‌ಗಳ ಸಂಯೋಜನೆ ರೂಪಿಸುವುದು ಭಾರತದ ಪಾಲಿಗೆ ಮುಖ್ಯವಾಗಿದೆ ಎಂಬುದು ಅವರ ಅಭಿಪ್ರಾಯ.

IND vs NZ: ಮಳೆಯಿಂದ ಹ್ಯಾಮಿಲ್ಟನ್ ಪಂದ್ಯ ರದ್ದು; ಏಕದಿನ ಸರಣಿಯಲ್ಲಿ ಗಿಲ್‌-ರಾಹುಲ್ ಅಭಿಯಾನ ಅಂತ್ಯ!

ರೋಹಿತ್ ಜೊತೆ ಇಶಾನ್ ಕಿಶನ್ ಆರಂಭಿಕ?

ಮಾಜಿ ಭಾರತ ಬ್ಯಾಟರ್ ಅಂಬಟಿ ರಾಯುಡು ಅವರು ಇಶಾನ್ ಕಿಶನ್ ಅವರನ್ನು ಆರಂಭಿಕ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ ಜೊತೆ ಇಶಾನ್ ಇನಿಂಗ್ಸ್ ಆರಂಭಿಸಿದರೆ ತಂಡಕ್ಕೆ ಎಡಗೈ-ಬಲಗೈ ಆರಂಭಿಕ ಜೋಡಿಯ ಆಯ್ಕೆ ಸಿಗಲಿದೆ. ಋತುರಾಜ್ ಗಾಯಕ್ವಾಡ್ ಕೂಡ ಆಡುವ ಹನ್ನೊಂದರ ಬಳಗದಲ್ಲಿ ಇರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಶುಭಮನ್ ಗಿಲ್ ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಸುತ್ತೇನೆ. ಋತುರಾಜ್ ಗಾಯಕ್ವಾಡ್ ಶತಕ ಗಳಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಭಾರತ ಪರ ಆರಂಭಿಕರಾಗಿ ಆಡಿಲ್ಲ. ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಇಬ್ಬರೂ ತಂಡಕ್ಕೆ ಬರಬೇಕು. ತಂಡದ ಅಗತ್ಯಕ್ಕೆ ಅನುಗುಣವಾಗಿ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಬಹುದು," ಎಂದು ರಾಯುಡು ಕ್ರಿಕ್‌ಬಜ್‌ನಲ್ಲಿ ತಿಳಿಸಿದ್ದಾರೆ.

U19 Asia Cup 2026: ಯುಎಇ ವಿರುದ್ಧ ಭರ್ಜರಿ ಶತಕ ಬಾರಿಸಿದ ಜೂನಿಯರ್‌ ಸೆಹ್ವಾಗ್‌!

ಕೆಎಲ್ ರಾಹುಲ್ ಬದಲಿಗೆ ಋತುರಾಜ್‌ಗೆ ಅವಕಾಶ

ಕ್ರಿಕೆಟ್ ವಿಶ್ಲೇಷಕ ಮುರಳಿ ಕಾರ್ತಿಕ್ ಕೂಡ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ ಅವರ ಪ್ರಕಾರ ಇಶಾನ್ ಆರಂಭಿಕ ಸ್ಥಾನದಲ್ಲಿ ಆಡಿದರೆ, ಋತುರಾಜ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು.

"ಇಶಾನ್ ಕಿಶನ್ ಅವರನ್ನು ಆರಂಭಿಕ ಕ್ರಮಾಂಕದಲ್ಲಿ ಆಡಿಸಬಹುದು. ಋತುರಾಜ್ ಗಾಯಕ್ವಾಡ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಬೇಕು. ಅವರು ಕೆ.ಎಲ್ ರಾಹುಲ್ ಬದಲಿಗೆ ತಂಡಕ್ಕೆ ಬರಬಹುದು. ಇದರಿಂದ ತಂಡಕ್ಕೆ ಎಡಗೈ ಮತ್ತು ಬಲಗೈ ಬ್ಯಾಟರ್‌ಗಳ ಉತ್ತಮ ಸಂಯೋಜನೆ ಸಿಗಲಿದೆ," ಎಂದು ಮುರಳಿ ಕಾರ್ತಿಕ್ ಹೇಳಿದ್ದಾರೆ.

ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ಸಾಧ್ಯತೆ

ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆಗಳ ಜೊತೆಗೆ ಬೌಲಿಂಗ್ ವಿಭಾಗದಲ್ಲೂ ಹೊಸ ಆಟಗಾರರಿಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆದಿದೆ. ಅನ್ಶುಲ್ ಕಾಂಬೋಜ್ ಹೊರಗುಳಿಯುವ ಸಾಧ್ಯತೆಯಿರುವುದರಿಂದ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಎದುರಾಗಿದೆ.

ಯಶ್ ಠಾಕೂರ್ ಅಥವಾ ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ನೀಡಬಹುದೇ ಎಂಬುದನ್ನು ಮುರಳಿ ಕಾರ್ತಿಕ್ ಪ್ರಸ್ತಾಪಿಸಿದ್ದಾರೆ. ವಿಶೇಷವಾಗಿ ಸಿರಾಜ್‌ಗೆ ಪಂದ್ಯವೊಂದರಲ್ಲಿ ಆಡುವ ಅವಕಾಶ ಸಿಗಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.

"ನನ್ನ ಪ್ರಕಾರ ಇಲ್ಲಿ ಅತ್ಯಂತ ಮುಖ್ಯವಾದದ್ದು ಋತುರಾಜ್ ಗಾಯಕ್ವಾಡ್‌ಗೆ ಅವಕಾಶ ಸಿಗಬೇಕು ಎಂಬುದು. ಯಶ್ ಠಾಕೂರ್ ಆಡುತ್ತಾರೆಯೇ ಅಥವಾ ಮೊಹಮ್ಮದ್ ಸಿರಾಜ್ ತಂಡಕ್ಕೆ ಬರುತ್ತಾರೆಯೇ ಎಂಬುದನ್ನು ನೋಡಬೇಕು. ಸಿರಾಜ್‌ಗೆ ಒಂದು ಪಂದ್ಯ ಆಡುವ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ. ಗಿಲ್, ರಾಹುಲ್ ಮತ್ತು ಕಾಂಬೋಜ್ ಹೊರಗುಳಿದಿರುವುದರಿಂದ ಅವರ ಸ್ಥಾನಗಳಿಗೆ ಬದಲಿಯಾಗಿ ಮೂವರು ಆಟಗಾರರು ಸಿದ್ಧವಾಗಿದ್ದಾರೆ," ಎಂದು ಕಾರ್ತಿಕ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಸಲಹೆಯೇ ನಿವೃತ್ತಿ ನಿರ್ಧಾರಕ್ಕೆ ಕಾರಣ: ಕೇನ್ ವಿಲಿಯಮ್ಸನ್ ಮನದಾಳ!

ಸರಣಿ ಗೆಲುವಿನತ್ತ ಭಾರತದ ಗಮನ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಮಳೆಯಿಂದಾಗಿ ರದ್ದಾಗಿರುವುದರಿಂದ ನಾಲ್ಕನೇ ಪಂದ್ಯ ಭಾರತದ ಪಾಲಿಗೆ ಸರಣಿ ಗೆಲುವು ಖಚಿತಪಡಿಸಿಕೊಳ್ಳುವ ಮಹತ್ವದ ಅವಕಾಶವಾಗಿದೆ.

ಗಿಲ್ ಮತ್ತು ರಾಹುಲ್ ಸೇರಿದಂತೆ ಪ್ರಮುಖ ಆಟಗಾರರು ಟೆಸ್ಟ್ ಸರಣಿಯ ಸಿದ್ಧತೆಗಾಗಿ ತಂಡದಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್ ಹಾಗೂ ಇತರ ಆಟಗಾರರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಆದರೆ ಅಂತಿಮ ಆಡುವ ಹನ್ನೊಂದರ ಬಳಗವನ್ನು ತಂಡದ ಆಡಳಿತ ಮಂಡಳಿ ನಿರ್ಧರಿಸಲಿದೆ.