ನವದೆಹಲಿ: ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ (Andrew Flintoff) ಅವರ 18 ವರ್ಷದ ಪುತ್ರ ರಾಕಿ ಫ್ಲಿಂಟಾಫ್ (Rocky Flintoff) ಹಿರಿಯರ ಮಟ್ಟದ ವೃತ್ತಿಪರ ಕ್ರಿಕೆಟ್‌ನಲ್ಲಿ ಮೊದಲ ಶತಕವನ್ನು ಸಿಡಿಸಿದ್ದಾರೆ. ಟಾಂಟನ್‌ನಲ್ಲಿ ಸೋಮರ್‌ಸೆಟ್ ವಿರುದ್ಧ ನಡೆದಿದ್ದ ಒನ್-ಡೇ ಕಪ್ ಪಂದ್ಯದಲ್ಲಿ ಅವರು 76 ಎಸೆತಗಳಲ್ಲಿ 123 ರನ್ ಸಿಡಿಸಿ ಲ್ಯಾಂಕಾಶೈರ್ ತಂಡವನ್ನು ದಾಖಲೆಯ 443/6 ಮೊತ್ತಕ್ಕೆ ಮುನ್ನಡೆಸಿದರು. ಲ್ಯಾಂಕಾಶೈರ್ 138 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ವೇಳೆ ಕ್ರೀಸ್‌ಗೆ ಬಂದ ರಾಕಿ, ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸೋಮರ್‌ಸೆಟ್ ಬೌಲರ್‌ಗಳನ್ನು ಬೆಚ್ಚಿಬೀಳಿಸಿದರು. ಅವರ ಇನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿದ್ದವು.
ರಾಕಿ, ಕೀಟನ್ ಜೆನಿಂಗ್ಸ್ ಅವರೊಂದಿಗೆ 214 ರನ್‌ಗಳ ಮಹತ್ವದ ಜೊತೆಯಾಟ ನಡೆಸಿದರು. ಕೇವಲ 65 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ ರಾಕಿ, ತಮ್ಮ ಮೊದಲ ಹಿರಿಯರ ಶತಕವನ್ನು ಸಿಡಿಸಿ ಐತಿಹಾಸಿಕ ದಾಖಲೆಯನ್ನು ಬರೆದರು. ಇನ್ನೊಂದೆಡೆ, ಟಾಂಟನ್‌ನ ಬ್ಯಾಟಿಂಗ್‌ಗೆ ಅನುಕೂಲಕರ ಪಿಚ್‌ನ ಸಂಪೂರ್ಣ ಲಾಭ ಪಡೆದ ಜೆನಿಂಗ್ಸ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ದಿ ಹಂಡ್ರೆಡ್ ಟೂರ್ನಿಗೆ ಕೆಲ ಆಟಗಾರರು ತೆರಳಿದ್ದರಿಂದ ದುರ್ಬಲಗೊಂಡಿದ್ದ ಸೋಮರ್‌ಸೆಟ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು 156 ರನ್ ಗಳಿಸಿ ಲ್ಯಾಂಕಾಶೈರ್ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಲ್ಯಾಂಕಾಶೈರ್ ತಂಡದ 443/6 ಮೊತ್ತವು ಕೌಂಟಿಯ ಇತಿಹಾಸದಲ್ಲೇ ಅತ್ಯಧಿಕ ಲಿಸ್ಟ್ ಎ ಸ್ಕೋರ್ ಎಂಬ ದಾಖಲೆ ನಿರ್ಮಿಸಿದೆ. 2024ರಲ್ಲಿ ರಾಕಿ ಫ್ಲಿಂಟಾಫ್ ಕೇವಲ 16 ವರ್ಷ 113 ದಿನಗಳ ವಯಸ್ಸಿನಲ್ಲಿ ಒನ್-ಡೇ ಕಪ್‌ಗೆ ಪದಾರ್ಪಣೆ ಮಾಡುವ ಮೂಲಕ ಲ್ಯಾಂಕಾಶೈರ್ ಪರ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದರು. ಅದಕ್ಕೂ ಕೇವಲ ಒಂದು ವಾರ ಮೊದಲು, ಇಂಗ್ಲೆಂಡ್ ಅಂಡರ್-19 ತಂಡದ ಪರ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನೂ ಅವರು ನಿರ್ಮಿಸಿದ್ದರು.
ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಮೂವರು ಸ್ಪಿನ್ನರ್‌ಗಳನ್ನು ಹೆಸರಿಸಿದ ವಾಸೀಮ್ ಜಾಫರ್!
2025ರ ಜನವರಿಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ಪರ ಶತಕ ಸಿಡಿಸುವ ಮೂಲಕ ರಾಕಿ ಮತ್ತೊಂದು ಮಹತ್ವದ ದಾಖಲೆ ಬರೆದರು. ಈ ಮೂಲಕ ತಮ್ಮ ತಂದೆ ಆಂಡ್ರ್ಯೂ ಫ್ಲಿಂಟಾಫ್ ಅವರ ದಾಖಲೆಯನ್ನು ಹಿಂದಿಕ್ಕಿ ಇಂಗ್ಲೆಂಡ್ ಲಯನ್ಸ್ ಪರ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ಆದರೆ ಗಾಯದ ಸಮಸ್ಯೆಗಳು ಅವರ ಬೆಳವಣಿಗೆಗೆ ಆಗಾಗ್ಗೆ ಅಡ್ಡಿಯಾಗಿವೆ. ಕಳೆದ ಚಳಿಗಾಲದಲ್ಲಿ ನಡೆದಿದ್ದಅಂಡರ್-19 ವಿಶ್ವಕಪ್ ಟೂರ್ನಿಯಿಂದ ಗಾಯದ ಕಾರಣ ಹೊರಗುಳಿದಿದ್ದ ರಾಕಿ, 2025ರಲ್ಲಿ ನಾರ್ಥರ್ನ್ ಸೂಪರ್‌ಚಾರ್ಜರ್ಸ್ ತಂಡಕ್ಕೆ ಸಹಿ ಹಾಕಿದ ಬಳಿಕವೂ ಗಾಯದ ಕಾರಣ ದಿ ಹಂಡ್ರೆಡ್ ಟೂರ್ನಿಯಿಂದ ಹಿಂದೆ ಸರಿದಿದ್ದರು.
ಮಾರ್ಚ್‌ನಲ್ಲಿ ಲ್ಯಾಂಕಾಶೈರ್ ತಂಡದೊಂದಿಗೆ ಎರಡು ವರ್ಷಗಳ ಒಪ್ಪಂದ ವಿಸ್ತರಣೆ ಮಾಡಿಕೊಂಡ ಬಳಿಕ ರಾಕಿ ಫ್ಲಿಂಟಾಫ್ ತಮ್ಮ ಭವಿಷ್ಯವನ್ನು ಕೌಂಟಿ ತಂಡದೊಂದಿಗೆ ಮುಂದುವರಿಸಲು ನಿರ್ಧರಿಸಿದ್ದರು. ನಂತರ ಸೆಕೆಂಡ್ XI ಪಂದ್ಯಗಳು ಮತ್ತು ಇಂಗ್ಲೆಂಡ್ ಅಂಡರ್-19 ತಂಡದ ಪರ ಆಡಿದ ಪಂದ್ಯಗಳ ಮೂಲಕ ಫಾರ್ಮ್‌ಗೆ ಮರಳಿದ ಅವರು, ಹಿರಿಯರ ತಂಡದಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ.
ಬುಧವಾರದ ಶತಕಕ್ಕೂ ಮುನ್ನ, ಈ ಋತುವಿನಲ್ಲಿ ಹಿರಿಯರ ತಂಡದ ಪರ ಆಡಿದ ಆರು ಪಂದ್ಯಗಳಲ್ಲಿ ರಾಕಿ 33, 41, 34, 61*, 0 ಮತ್ತು 1** ರನ್ ಗಳಿಸಿದ್ದರು. ಸೋಮರ್‌ಸೆಟ್ ಬೌಲಿಂಗ್ ದಾಳಿಯ ವಿರುದ್ಧ ರಾಕಿ ನಡೆಸಿದ ಸ್ಫೋಟಕ ಬ್ಯಾಟಿಂಗ್, ವಿಶೇಷವಾಗಿ ಮಿಡ್‌ವಿಕೆಟ್ ಪ್ರದೇಶದಲ್ಲಿ ಆಡಿದ ಅದ್ಭುತ ಶಾಟ್‌ಗಳು, ಅವರ ತಂದೆ ಆಂಡ್ರ್ಯೂ ಫ್ಲಿಂಟಾಫ್ ಅವರ ಇಂಗ್ಲೆಂಡ್ ವೃತ್ತಿಜೀವನದ ಬ್ಯಾಟಿಂಗ್ ಶೈಲಿಯನ್ನು ನೆನಪಿಸುವಂತಿತ್ತು. ಹೀಗಾಗಿ ತಂದೆ-ಮಗನ ಬ್ಯಾಟಿಂಗ್ ಶೈಲಿಯ ಹೋಲಿಕೆಗಳು ಸಹಜವಾಗಿಯೇ ಕೇಳಿಬಂದವು.
ಸೋಮರ್‌ಸೆಟ್ ತಂಡದಲ್ಲೂ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅವರ ಪುತ್ರ ಹಾಗೂ ಸ್ಪಿನ್ನರ್ ಆರ್ಚಿ ವಾನ್ ಕೂಡ ಈ ಪಂದ್ಯದಲ್ಲಿ ಆಡಿದ್ದರು. ಆಂಡ್ರ್ಯೂ ಫ್ಲಿಂಟಾಫ್ ಇಂಗ್ಲೆಂಡ್ ಪರ 79 ಟೆಸ್ಟ್, 141 ಏಕದಿನ ಮತ್ತು 7 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2005ರ ಐತಿಹಾಸಿಕ ಆಶಸ್ ಸರಣಿ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗಷ್ಟೇ ಫ್ಲಿಂಟಾಫ್ ಅವರು ಇಂಗ್ಲೆಂಡ್ ಲಯನ್ಸ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.