ದುಬೈ: ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯುವ ಮೂಲಕ ಭಾರತ ತಂಡ, 2025ರ ಏಷ್ಯಾ ಕಪ್ ಟೂರ್ನಿಯಲ್ಲಿ (Asia Cup 2025) ಶುಭಾರಂಭ ಕಂಡಿದೆ. ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ (IND vs UAE) ಮೊದಲು ಬ್ಯಾಟ್ ಮಾಡಿದ್ದ ಯುಎಇ ತಂಡ ಹೀನಾಯ ಸೋಲು ಕಂಡಿತು. ಸ್ಪಿನ್ನರ್ ಕುಲ್ದೀಪ್ ಯಾದವ್ ರವರ ಸ್ಪಿನ್ ಮೋಡಿಗೆ ತತ್ತರಿಸಿದ ಯುಎಇ ಪಡೆ, ಕೇವಲ 57 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಚೇಸ್ ಟೀಮ್ ಇಂಡಿಯಾ 4.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 60 ರನ್‌ಗಳಿಸಿ ಜಯ ಸಾಧಿಸಿ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಿತು. ಪಂದ್ಯದ ಬಳಿಕ ಮಾತನಾಡಿದ ಶಿವಂ ದುಬೆ (Shivam Dube), ಮೂರು ವಿಕೆಟ್ ಕಬಳಿಸಿ ತಮ್ಮ ಬೌಲಿಂಗ್ ಯಶಸ್ಸಿನ ಶ್ರೇಯ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್‌ಗೆ ಸಲ್ಲಬೇಕೆಂದು ತಿಳಿಸಿದ್ದಾರೆ.
ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅವರ ಜೊತೆಗೆ ಶಿವಂ ದುಬೆ ಕೂಡ ಉತ್ತಮವಾಗಿ ಬೌಲ್ ಮಾಡಿದರು. ಇವರು ಮೂರು ವಿಕೆಟ್‌ಗಳನ್ನು ಕಬಳಿಸಿದರು. ಈ ಪಂದ್ಯದಲ್ಲಿ 2 ಓವರ್‌ಗಳಲ್ಲಿ ನಾಲ್ಕು ರನ್ ನೀಡಿ 3 ವಿಕೆಟ್ ಕಬಳಿಸಿದ ಶಿವಂ ದುಬೆ, ತಮ್ಮ ಈ ಅದ್ಭುತ ಪ್ರದರ್ಶನಕ್ಕೆ ಮುಖ್ಯ ಕಾರಣ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಎಂದು ಹೇಳಿದ್ದಾರೆ. ಅಲ್ಲದೆ, ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಹೇಳಿದ್ದ ಮಾತುಗಳನ್ನು ಕೂಡ ದುಬೆ ಬಹಿರಂಗ ಪಡಿಸಿದ್ದಾರೆ.
Asia Cup 2025: ಕುಲ್ದೀಪ್ ಯಾದವ್ ಸ್ಪಿನ್ ಮೋಡಿಯಿಂದ ಭಾರತಕ್ಕೆ ಸುಲಭ ತುತ್ತಾದ ಯುಎಇ!
"ಇಂಗ್ಲೆಂಡ್ ಸರಣಿಯನ್ನು ಮುಗಿಸಿ ಭಾರತಕ್ಕೆ ಮರಳಿದಾಗಿನಿಂದ ಮಾರ್ನೆ ಮಾರ್ಕೆಲ್ ಅವರು ನನ್ನ ಜೊತೆ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಅವರು ನನಗೆ ಕೆಲವು ನಿರ್ದಿಷ್ಟ ಸಲಹೆಗಳನ್ನು ನೀಡಿದ್ದಾರೆ. ನಾನು ಅವುಗಳ ಮೇಲೆ ಕೆಲಸ ಮಾಡುತ್ತಿದ್ದೇನೆ. ಆಫ್ ಸ್ಟಂಪ್‌ನಿಂದ ಸ್ವಲ್ಪ ಹೊರಗೆ ಬೌಲ್ ಮಾಡಲು ಅವರು ನನಗೆ ಹೇಳಿದ್ದರು. ನಿಧಾನಗತಿಯ ಎಸೆತವನ್ನು ಅಭಿವೃದ್ದಿಪಡಿಸುವಲ್ಲಿ ಅವರು ನನ್ನೊಂದಿಗೆ ಕೆಲಸ ಮಾಡಿದ್ದಾರೆ. ನನ್ನ ರನ್‌ಅಪ್ ಅನ್ನೂ ಕೂಡ ಸ್ವಲ್ಪ ತಿರುಚಿದ್ದಾರೆ. ಮುಖ್ಯ ಕೋಚ್ ಮತ್ತು ನಾಯಕ ನನ್ನ ಬೌಲಿಂಗ್ ಕೂಡ ಈ ಟೂರ್ನಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಹೇಳಿದ್ದಾರೆ," ಎಂದು ಶಿವಂ ದುಬೆ ತಿಳಿಸಿದ್ದಾರೆ.
Asia Cup 2025: ಆರ್. ಅಶ್ವಿನ್ ದಾಖಲೆ ಮುರಿದ ಕುಲ್‌ದೀಪ್ ಯಾದವ್
ಫಿಟ್‌ನೆಸ್ ಕಡೆಗೆ ಹೆಚ್ಚು ಗಮನ
ಶಿವಂ ದುಬೆ ಅವರು ಕಳೆದ ಎರಡು ತಿಂಗಳಿನಿಂದ ಸತತ ಫಿಟ್ನೆಸ್ ಮತ್ತು ಶಾರ್ಟ್ ಬಾಲ್ ಆಡುವ ಸಾಮಾರ್ಥ್ಯದ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ದುಬೆ, "ಕಳೆದ ಎರಡು ತಿಂಗಳಿನಿಂದ ನಾನು ನನ್ನ ಫಿಟ್‌ನೆಸ್ ಮೇಲೆ ಹೆಚ್ಚು ಕೆಲಸ ಮಾಡಿದ್ದೇನೆ. ನನ್ನ ಬ್ಯಾಟಿಂಗ್ ವಿಷಯಕ್ಕೆ ಬಂದರೆ ಮಧ್ಯಮ ಓವರ್‌ಗಳಲ್ಲಿ ಪವರ್ ಹಿಟ್ಟಿಂಗ್ ಬಾರಿಸುವ ಸಾಮರ್ಥ್ಯ ಇದೆ. ಇತ್ತೀಚಿನ ವರ್ಷಗಳಲ್ಲಿ ಬೌಲರ್‌ಗಳು ನನ್ನ ವಿರುದ್ಧ ಶಾರ್ಟ್ ಬಾಲ್ ಅಸ್ತ್ರ ಉಪಯೋಗಿಸಿದ್ದರು. ಹಾಗಾಗಿ ಶಾರ್ಟ್ ಬಾಲ್ ವಿರುದ್ಧ ಉತ್ತಮವಾದ ಹೊಡೆತಗಳನ್ನು ಹೊಡೆಯಲು ನಾನು ಕೆಲಸ ಮಾಡಿದ್ದೇನೆ," ಎಂದು ಬ್ಯಾಟಿಂಗ್ ಆಲ್‌ರೌಂಡರ್ ಹೇಳಿದ್ದಾರೆ.
Asia Cup 2025: ಕುಲ್ದೀಪ್ ಯಾದವ್‌ಗೆ ಅನ್ಯಾಯವಾಗಿದೆ ಎಂದ ಅಜಯ್ ಜಡೇಜಾ!
ಮುಂದಿನ ಎದುರಾಳಿ ಪಾಕಿಸ್ತಾನ
ಯುಎಇ ವಿರುದ್ಧ ಗೆದ್ದು ಏಷ್ಯಾ ಕಪ್ ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಸೆಪ್ಟಂಬರ್ 14 ರಂದು ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿಯೂ ಇದೇ ಬೌಲಿಂಗ್ ಪ್ರದರ್ಶನವನ್ನು ತೋರಲು ಶಿವಂ ದುಬೆ ಎದುರು ನೋಡುತ್ತಿದ್ದಾರೆ.