ದುಬೈ: 2025ರ ಏಷ್ಯಾ ಕಪ್ ಟೂರ್ನಿಯ ಪಂದ್ಯದ ವೇಳೆ ಭಾರತ ಮತ್ತು ಪಾಕಿಸ್ತಾನ (IND vs PAK) ಆಟಗಾರರು ಕೈಕುಲುಕುವುದನ್ನು ತಡೆದಿದ್ದಕ್ಕಾಗಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ (Andy PyCroft) ರಾಷ್ಟ್ರೀಯ ತಂಡಕ್ಕೆ ಕ್ಷಮೆಯಾಚಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬುಧವಾರ ತಿಳಿಸಿದೆ. ಐಸಿಸಿ ಆಂಡಿ ಪೈಕ್ರಾಫ್ಟ್ ಅವರನ್ನು ತಂಡದಿಂದ ತೆಗೆದುಹಾಕಲು ನಿರಾಕರಿಸಿದ್ದನ್ನು ಪ್ರತಿಭಟಿಸಿ, ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ಬುಧವಾರದ ಪಂದ್ಯಕ್ಕೆ ಪಾಕಿಸ್ತಾನ ಹೊರಡುವುದನ್ನು ವಿಳಂಬಗೊಳಿಸಿತು, ಇದರಿಂದಾಗಿ ಪಂದ್ಯದ ಟಾಸ್ ತಡವಾಗಿ ನಡೆಯಿತು.
ಈ ಘಟನೆಗೆ ಜಿಂಬಾಬ್ವೆಯ ರೆಫರಿ ಪೈಕ್ರಾಫ್ಟ್ ಕ್ಷಮೆಯಾಚಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ತನ್ನ ಎಕ್ಸ್ ಖಾತೆಯ ಹೇಳಿಕೆಯಲ್ಲಿ ಪಿಸಿಬಿ, "ವಿವಾದಾತ್ಮಕ ಐಸಿಸಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪಾಕಿಸ್ತಾನ ಕ್ರಿಕೆಟ್ ತಂಡದ ವ್ಯವಸ್ಥಾಪಕ ಮತ್ತು ನಾಯಕನಿಗೆ ಕ್ಷಮೆಯಾಚಿಸಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಎರಡೂ ತಂಡಗಳ ನಾಯಕರು ಕೈಕುಲುಕುವುದನ್ನು ಆಂಡಿ ಪೈಕ್ರಾಫ್ಟ್ ತಡೆದಿದ್ದರು," ಎಂದು ತಿಳಿಸಿದೆ.
Asia Cup 2025: ಬಹಿಷ್ಕಾರದ ಬೆದರಿಕೆಯಿಂದ ಹಿಂದೆ ಸರಿದ ಪಾಕ್; ಯುಎಇ ವಿರುದ್ಧ ಕಣಕ್ಕೆ
"ಆಂಡಿ ಪೈಕ್ರಾಫ್ಟ್ ಅವರ ಕ್ರಮಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ಸೆಪ್ಟೆಂಬರ್ 14 ರಂದು ನಡೆದಿದ್ದ ಘಟನೆಯನ್ನು ತಪ್ಪು ತಿಳುವಳಿಕೆಯ ಪರಿಣಾಮವಾಗಿ ಆಂಡಿ ಪೈಕ್ರಾಫ್ಟ್ ವಿವರಿಸಿದರು ಮತ್ತು ಕ್ಷಮೆಯಾಚಿಸಿದರು," ಎಂದು ಪಿಸಿಬಿ ಹೇಳಿದೆ. ಪೈಕ್ರಾಫ್ಟ್ ವಿರುದ್ಧದ ದೂರನ್ನು ಐಸಿಸಿ ತನಿಖೆ ಮಾಡುತ್ತದೆ ಎಂದು ಪಾಕಿಸ್ತಾನ ಮಂಡಳಿ ಹೇಳಿಕೊಂಡಿದೆ. "ಸೆಪ್ಟೆಂಬರ್ 14 ರಂದು ನಡೆದ ಪಂದ್ಯದ ಸಮಯದಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ತನಿಖೆ ಮಾಡಲು ಐಸಿಸಿ ತನ್ನ ಸಿದ್ಧತೆಯನ್ನು ವ್ಯಕ್ತಪಡಿಸಿದೆ," ಎಂದು ಅದು ತಿಳಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಾಕಿಸ್ತಾನ
ಇನ್ನು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಒಂದು ಗಂಟೆ ತಡವಾಗಿ ಆರಂಭವಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 146 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಯುಎಇ ತಂಡಕ್ಕೆ 147 ರನ್‌ಗಳ ಗುರಿಯನ್ನು ನೀಡಿತು. ಪಾಕ್ ಪರ ಫಖಾರ್ ಝಮಾನ್ ಅರ್ಧಶತಕವನ್ನು ಸಿಡಿಸಿದರು. ಯುಎಇ ಪರ ಜುನೈದ್ ಸಿದ್ದಿಕ್ 4 ವಿಕೆಟ್ ಕಿತ್ತರೆ, ಸಿಮ್ರಾನ್‌ಜೀತ್ ಸಿಂಗ್ 3 ವಿಕೆಟ್‌ಗಳನ್ನು ಪಡೆದರು.