ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

AUS vs SA: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ!

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ಪ್ರಮುಖ ವೇಗಿ ಕಗಿಸೊ ರಬಾಡ ಹ್ಯಾಮ್‌ಸ್ಟ್ರಿಂಗ್‌ಗೆ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ತವರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಅವರು ಲಭ್ಯರಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೆ ಕಗಿಸೊ ರಬಾಡ ಅನುಮಾನ.

ನವದೆಹಲಿ: ಸತತ ಎರಡನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025-27) ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನದಲ್ಲಿದ್ದ ದಕ್ಷಿಣ ಆಫ್ರಿಕಾ (South Africa) ತಂಡಕ್ಕೆ ಇದೀಗ ದೊಡ್ಡ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ತವರು ಟೆಸ್ಟ್‌ ಸರಣಿಗೆ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ವೇಗಿ ಕಗಿಸೊ ರಬಾಡ (Kagiso Rabada) ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಬಲಗೈ ವೇಗಿಯ ಬಲಗಾಲಿನಲ್ಲಿ ಹ್ಯಾಮ್‌ಸ್ಟ್ರಿಂಗ್‌ ಆಗಿದ್ದು, ಅವರು ಟೆಸ್ಟ್‌ ಸರಣಿಯ ಹೊತ್ತಿಗೆ ಸಂಪೂರ್ಣ ಫಿಟ್‌ ಆಗಿ ತಂಡಕ್ಕೆ ಮರಳುವುದು ಅನುಮಾನ ಎಂದು ವರದಿಯಾಗಿದೆ.

ರಬಾಡ ಈಗಾಗಲೇ ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇದೀಗ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಫಿಟ್ ಆಗಲು ಅವರು ಸಮಯದ ವಿರುದ್ಧ ಹೋರಾಡಬೇಕಾಗಿದೆ.

ಈ ತಿಂಗಳ ಆರಂಭದಲ್ಲಿ ತರಬೇತಿ ವೇಳೆ ರಬಾಡ ಅವರ ಬಲ ತೊಡೆಯ ಹ್ಯಾಮ್‌ಸ್ಟ್ರಿಂಗ್‌ಗೆ ಗಾಯವಾಗಿತ್ತು. ಆಗಸ್ಟ್ 21ರಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ, ಅವರ ಚಳಿಗಾಲದ ತರಬೇತಿ ಕಾರ್ಯಕ್ರಮಕ್ಕೆ ಗಾಯದಿಂದ ಅಡ್ಡಿಯಾಗಿದೆ ಮತ್ತು ಹರಿಣ ಪಡೆಯ ವೈದ್ಯಕೀಯ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ ಎಂದು ತಿಳಿಸಿತ್ತು.

IND vs SL: ಭಾರತ ತಂಡದ ವೈಡ್‌ಬಾಲ್‌ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಸುನೀಲ್‌ ಗವಾಸ್ಕರ್‌!

ಭಾನುವಾರ ಅವರ ಗಾಯದ ಗಂಭೀರತೆ ಮತ್ತಷ್ಟು ಸ್ಪಷ್ಟವಾಯಿತು. ಆಫ್ರಿಕನ್ಸ್ ಭಾಷೆಯ ಪತ್ರಿಕೆ ರ್ಯಾಪೋರ್ಟ್‌ಗೆ ನೀಡಿದ ಹೇಳಿಕೆಯಲ್ಲಿ, ಲಯನ್ಸ್ ತಂಡದ ರಬಾಡ ಅವರ ಬೌಲಿಂಗ್ ಕೋಚ್ ಅಲಾನ್ ಡೊನಾಲ್ಡ್, ಗ್ರೇಡ್-3 ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ರಬಾಡ 9ರಿಂದ 10 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಇದರ ಪ್ರಕಾರ ಆಸ್ಟ್ರೇಲಿಯಾ ವಿರುದ್ಧದ ದಕ್ಷಿಣ ಆಫ್ರಿಕಾದ ಮೂರು ಟೆಸ್ಟ್‌ಗಳ ಪೈಕಿ ಬಹುತೇಕ ಎಲ್ಲಾ ಪಂದ್ಯಗಳನ್ನು ರಬಾಡ ಕಳೆದುಕೊಳ್ಳುವ ಸಾಧ್ಯತೆಯಿದೆ. ಆಗಸ್ಟ್ 21ರಿಂದ 10 ವಾರಗಳ ಚೇತರಿಕೆಯ ಅವಧಿ ಅಕ್ಟೋಬರ್ 30ರವರೆಗೆ ಸಾಗಲಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಅಕ್ಟೋಬರ್ 9ರಂದು ಕಿಂಗ್ಸ್‌ಮೀಡ್‌ನಲ್ಲಿ ಆರಂಭವಾಗಲಿದೆ. ಮೂರು ಪಂದ್ಯಗಳ ಸರಣಿಯ ಅಂತಿಮ ಟೆಸ್ಟ್ ಅಕ್ಟೋಬರ್ 31ರಂದು ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿದೆ.

ರಬಾಡ 9ರಿಂದ 10 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬಹುದು ಎಂಬ ವರದಿಯನ್ನು ಕ್ರಿಕೆಟ್ ಸೌತ್ ಆಫ್ರಿಕಾ (CSA) ಅಧಿಕೃತವಾಗಿ ಖಚಿತಪಡಿಸಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಅವರು ಲಭ್ಯರಾಗುವುದು ಅವರ ಚೇತರಿಕೆಯ ಪ್ರಗತಿಯನ್ನು ಅವಲಂಬಿಸಿರುತ್ತದೆ ಎಂದು ಕ್ರಿಕೆಟ್‌ ದಕ್ಷಿಣ ಆಫ್ರಿಕಾ ತಿಳಿಸಿದೆ.

Duleep Trophy: ಇಶಾನ್‌ ಕಿಶನ್‌ಗೆ ಗಾಯ, ಪೂರ್ವ ವಲಯ ತಂಡಕ್ಕೆ ವೈಭವ್‌ ಸೂರ್ಯವಂಶಿ ನಾಯಕ!

“ಕಗಿಸೊ ರಬಾಡ ಬಲ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಚೇತರಿಸಿಕೊಳ್ಳುವ ಆರಂಭಿಕ ಹಂತದಲ್ಲಿದ್ದಾರೆ. ಸಿಎಸ್‌ಎ ವೈದ್ಯಕೀಯ ತಂಡ ಅವರ ಚೇತರಿಕೆಯ ಮೇಲೆ ನಿಗಾ ವಹಿಸಿದೆ. ಸೆಪ್ಟೆಂಬರ್ 24ರಿಂದ 30ರವರೆಗೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಆಡುವುದಿಲ್ಲ. ಟೆಸ್ಟ್ ಸರಣಿಗೆ ಅವರು ಲಭ್ಯರಾಗುವುದು ಚೇತರಿಕೆಯ ಪ್ರಗತಿಯನ್ನು ಅವಲಂಬಿಸಿರುತ್ತದೆ. ಸರಣಿಯ ಸಮೀಪದಲ್ಲಿ ಅವರ ಆಯ್ಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ತನ್ನ ಪ್ರಕಟಣೆಯಲ್ಲಿ ಸಿಎಸ್‌ಎ ಹೇಳಿದೆ.

ಸಕ್ರಿಯ ಬೌಲರ್‌ಗಳ ಪೈಕಿ ರಬಾಡ ದಕ್ಷಿಣ ಆಫ್ರಿಕಾದ ಪ್ರಮುಖ ವಿಕೆಟ್‌ಟೇಕರ್ ಆಗಿದ್ದಾರೆ. 73 ಟೆಸ್ಟ್ ಪಂದ್ಯಗಳಲ್ಲಿ ಅವರು 22.03ರ ಸರಾಸರಿಯಲ್ಲಿ 340 ವಿಕೆಟ್‌ಗಳನ್ನು ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರವಾಗಿರುವ ರಬಾಡ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದರೆ, ಅದು ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.