ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS 1st T20I: ಆಸ್ಟ್ರೇಲಿಯಾ ಎದುರು ಟಾಸ್‌ ಸೋತ ಭಾರತ ಮೊದಲ ಬ್ಯಾಟಿಂಗ್‌!

India vs Australia 1st T20I Match: ಕ್ಯಾನ್‌ಬೆರಾದ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ಇದೀಗ ಆರಂಭವಾದ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ, ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನ ನೀಡಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲನೇ ಟಿ20ಐ ಪಂದ್ಯ.

ಕ್ಯಾನ್‌ಬೆರಾ: ಇಲ್ಲಿನ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು (IND vs AUS) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡ, ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಆ ಮೂಲಕ ಎದುರಾಳಿ ಟೀಮ್‌ ಇಂಡಿಯಾಗೆ (India) ಮೊದಲ ಬ್ಯಾಟಿಂಗ್‌ಗೆ ಆಹ್ವಾನ ನೀಡಿದೆ. ಸಂಜು ಸ್ಯಾಮ್ಸನ್‌ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ಆಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ ಗಾಯದ ಕಾರಣ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ (Nitish Kumar Reddy) ಅವರು ಆರಂಭಿಕ ಮೂರು ಪಂದ್ಯಗಳಿಂದ ಹೊರ ನಡೆದಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇದಕ್ಕೂ ಮುನ್ನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸಿದ್ದವು. ಈ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ2-1 ಅಂತರದಲ್ಲಿ ಏಕದಿನ ಸರಣಿಯನ್ನು ಮುಡಿಗೇರಿಸಿಕೊಂಡಿದ್ದವು. ಇದೀಗ ಉಭಯ ತಂಡಗಳು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಾದಾಟ ನಡೆಸುತ್ತಿವೆ. ಈ ಸರಣಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್‌ ಯಾದವ್‌ ಮುನ್ನಡೆಸುತ್ತಿದ್ದಾರೆ.

IND vs AUS: ʻವಿರಾಟ್‌ ಕೊಹ್ಲಿ 50ನೇ ವಯಸ್ಸಿನವರೆಗೂ ಕ್ರಿಕೆಟ್‌ ಆಡಬಹುದುʼ-ಡೇವಿಡ್‌ ವಾರ್ನರ್‌!

ಇದಕ್ಕೂ ಮುನ್ನ ಭಾರತ ತಂಡ 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡಿತ್ತು. ಈ ಟೂರ್ನಿಯಲ್ಲಿ ಭಾರತ ತಂಡ, ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್‌ ಆಗಿತ್ತು. ಇದೀಗ ಅದೇ ಲಯವನ್ನು ಆಸ್ಟ್ರೇಲಿಯಾದಲ್ಲಿಯೂ ಮುಂದುವರಿಸಲು ಭಾರತ ಎದುರು ನೋಡುತ್ತಿದೆ. ಟಾಸ್‌ ವೇಳೆ ಮಾತನಾಡಿದ ಸೂರ್ಯಕುಮಾರ್‌ ಯಾದವ್‌, ನಾವು ಕೂಡ ಮೊದಲು ಬ್ಯಾಟ್‌ ಮಾಡಬೇಕೆಂದು ಬಯಸಿದ್ದೆವು, ಏಕೆಂದರೆ ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಕಠಿಣವಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಪ್ಲೇಯಿಂಗ್‌ XI ಆರಿಸುವುದು ದೊಡ್ಡ ತಲೆನೋವಾಗಿದೆ ಎಂದ ಅವರು, ರಿಂಕು ಸಿಂಗ್‌, ಜಿತೇಶ್‌ ಶರ್ಮಾ, ವಾಷಿಂಗ್ಟನ್‌ ಸುಂದರ್‌, ಅರ್ಷದೀಪ್‌ ಸಿಂಗ್‌ ಹಾಗೂ ನಿತೀಶ್‌ ರೆಡ್ಡಿ ಹೊರಗುಳಿದಿದ್ದಾರೆಂದು ತಿಳಿಸಿದ್ದಾರೆ.



ಇನ್ನು ಆಸ್ಟ್ರೇಲಿಯಾ ತಂಡ, ಏಕದಿನ ಸರಣಿಯಂತೆ ಟಿ20ಐ ಸರಣಿಯನ್ನು ಕೂಡ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ಮುಂದಿನ ವರ್ಷ ನಡೆಯಲಿರುವ 2026ರ ಐಸಿಸಿ ಟಿ20ಐ ವಿಶ್ವಕಪ್‌ ಟೂರ್ನಿಯ ನಿಮಿತ್ತ ಈ ಸರಣಿಯು ಎರಡು ತಂಡಗಳಿಗೆ ತುಂಬಾ ಮುಖ್ಯವಾಗಿವೆ.

ಮೂರು ಪಂದ್ಯಗಳಿಂದ ನಿತೀಶ್‌ ರೆಡ್ಡಿ ಔಟ್‌

ಗಾಯದ ಕಾರಣ ನಿತೀಶ್‌ ಕುಮಾರ್‌ ರೆಡ್ಡಿ ಅವರು ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆಂದು ಬಿಸಿಸಿಐ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಷರ್‌ ಪಟೇಲ್‌ ಅವರನ್ನು ಹೆಚ್ಚುವರಿ ಸ್ಪಿನ್ನರ್‌ ಆಗಿ ಆರಿಸಲಾಗಿದೆ.

ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ವಿಕೆಟ್‌ ಕೀಪರ್‌), ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್‌ ಬುಮ್ರಾ

ಆಸ್ಟ್ರೇಲಿಯಾ:ಮಿಚೆಲ್ ಮಾರ್ಷ್(ನಾಯಕ), ಟ್ರಾವಿಸ್ ಹೆಡ್, ಜಾಶ್ ಇಂಗ್ಲಿಸ್(ವಿಕೆಟ್ ಕೀಪರ್), ಟಿಮ್ ಡೇವಿಡ್, ಮಿಚೆಲ್ ಓವನ್, ಮಾರ್ಕಸ್ ಸ್ಟೊಯ್ನಿಸ್, ಜಾಶ್ ಫಿಲಿಪ್, ಕ್ಸೇವಿಯರ್ ಬಾರ್ಟ್ಲೆಟ್, ನೇಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಜಾಶ್ ಹೇಝಲ್‌ವುಡ್‌