ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (WPL) 2027ರ ಹರಾಜಿಗೂ ಮುನ್ನ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಮಹಿಳಾ ಬಿಗ್ ಬ್ಯಾಷ್ ಲೀಗ್ನಲ್ಲಿ (WBBL) ಬ್ರಿಸ್ಬೇನ್ ಹೀಟ್ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಅವರು, ಸಿಡ್ನಿ ಥಂಡರ್ ವಿರುದ್ಧ ಕೇವಲ 59 ಎಸೆತಗಳಲ್ಲಿ ಅಜೇಯ 102 ರನ್ ಸಿಡಿಸಿದ್ದಾರೆ.
ನವೆಂಬರ್ 19ರ ಗುರುವಾರ ಬ್ರಿಸ್ಬೇನ್ನ ಅಲನ್ ಬಾರ್ಡರ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಗ್ರೇಸ್ ಹ್ಯಾರಿಸ್ ಅವರ ಬ್ಯಾಟಿಂಗ್ನಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್ಗಳು ಸೇರಿದ್ದವು. ಅವರ ಈ ಸ್ಫೋಟಕ ಇನಿಂಗ್ಸ್ ನೆರವಿನಿಂದ ಬ್ರಿಸ್ಬೇನ್ ಹೀಟ್ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಗ್ರೇಸ್ಗೆ ಚಾರ್ಲಿ ನಾಟ್ ಉತ್ತಮ ಸಾಥ್ ನೀಡಿದರು. ಅವರು 34 ಎಸೆತಗಳಲ್ಲಿ 62 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್ಗೆ ಶತಕದ ಜೊತೆಯಾಟವಾಡಿತು. ಕೇವಲ 9.5 ಓವರ್ಗಳಲ್ಲಿ ಬ್ರಿಸ್ಬೇನ್ ತಂಡ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿತ್ತು.
32ರ ವಯಸ್ಸಿನ ಗ್ರೇಸ್ ಹ್ಯಾರಿಸ್ ಅವರ ಡಬ್ಲ್ಯುಬಿಬಿಎಲ್ ವೃತ್ತಿಜೀವನದ ನಾಲ್ಕನೇ ಶತಕ ಇದಾಗಿದೆ. ಅವರು 172.88ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದರು. ಆದರೆ, ಅವರ ಅಮೋಘ ಶತಕದ ಹೊರತಾಗಿಯೂ ಬ್ರಿಸ್ಬೇನ್ ಹೀಟ್ ತಂಡಕ್ಕೆ ಗೆಲುವು ಸಿಗಲಿಲ್ಲ. 226 ರನ್ಗಳ ಗುರಿ ಬೆನ್ನಟ್ಟಿದ ಸಿಡ್ನಿ ಥಂಡರ್ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
2027ರ WPLನಲ್ಲಿ ಯುಪಿ ವಾರಿಯರ್ಸ್ ಪರ ಆಡಲಿರುವ ಗ್ರೇಸ್
ಮುಂಬರುವ 2027ರ WPLಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಗ್ರೇಸ್ ಹ್ಯಾರಿಸ್ ಅವರನ್ನು ಬಿಡುಗಡೆ ಮಾಡಿತ್ತು. ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆದಿದ್ದ ಹರಾಜಿನಲ್ಲಿ ಯುಪಿ ವಾರಿಯರ್ಸ್ ಫ್ರಾಂಚೈಸಿ ಅವರನ್ನು 30 ಲಕ್ಷ ರು. ಗಳಿಗೆ ಖರೀದಿಸಿತ್ತು.
WPLನ ಮೊದಲ ಮೂರು ಆವೃತ್ತಿಗಳಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದ ಗ್ರೇಸ್, 2026ರ ಆವೃತ್ತಿಯಲ್ಲಿ ಆರ್ಸಿಬಿ ಪರ ಆಡಿದ್ದರು. ಇದೀಗ ಮತ್ತೆ ತಮ್ಮ ಹಳೆಯ ತಂಡಕ್ಕೆ ಮರಳುತ್ತಿರುವ ಅವರು, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಸ್ಫೋಟಕ ಬ್ಯಾಟಿಂಗ್ ಬಲ ತುಂಬುವ ನಿರೀಕ್ಷೆಯಿದೆ.
15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ವಿಶ್ವ ದಾಖಲೆ ಬರೆದ ಲಾರಾ ಹ್ಯಾರಿಸ್
ಗ್ರೇಸ್ ಹ್ಯಾರಿಸ್ ಶತಕ ಸಿಡಿಸಿ ಮಿಂಚಿದರೆ, ಅವರ ಸಹೋದರಿ ಲಾರಾ ಹ್ಯಾರಿಸ್ ಕೂಡ ಸಿಡ್ನಿ ಥಂಡರ್ ಪರ ಅಬ್ಬರದ ಬ್ಯಾಟಿಂಗ್ ನಡೆಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. 30ರ ವಯಸ್ಸಿನ ಲಾರಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಮಹಿಳಾ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಅಂತಿಮವಾಗಿ ಅವರು ಕೇವಲ 20 ಎಸೆತಗಳಲ್ಲಿ ಅಜೇಯ 63 ರನ್ ಗಳಿಸಿದರು. ಈ ಇನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ಗಳು ಸೇರಿದ್ದವು. ಅವರ ಸ್ಟ್ರೈಕ್ರೇಟ್ ಬರೋಬ್ಬರಿ 315 ಆಗಿತ್ತು. ಮತ್ತೊಂದೆಡೆ ಅನಿಕಾ ಲಿಯರ್ರಾಯ್ಡ್ ಅಜೇಯ 60 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಈ ಇಬ್ಬರ ಅಮೋಘ ಬ್ಯಾಟಿಂಗ್ ನೆರವಿನಿಂದ ಸಿಡ್ನಿ ಥಂಡರ್ 226 ರನ್ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಇದಕ್ಕೂ ಮುನ್ನ ಟೆಸ್ಸ್ ಫ್ಲಿಂಟಾಫ್ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು WBBLನ ದಾಖಲೆಯಾಗಿತ್ತು. ಇದೀಗ ಲಾರಾ 15 ಎಸೆತಗಳಲ್ಲಿ ಈ ಸಾಧನೆ ಮಾಡುವ ಮೂಲಕ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.