ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಯ್ಕೆ ಸಮಿತಿ, 2027ರ ಒಡಿಐ ವಿಶ್ವಕಪ್ (ODI World Cup 2027) ಟೂರ್ನಿಗೆ ಸುಮಾರು 20 ಸಂಭಾವ್ಯ ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ ಎಂದು ವರದಿಯಾಗಿದೆ. 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಆಟಗಾರರ ಪ್ರದರ್ಶನವನ್ನು ಬಿಸಿಸಿಐ ಆಯ್ಕೆದಾರರು ವೀಕ್ಷಿಸಲಿದ್ದಾರೆ. ಮಾರ್ಚ್ 28 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯದ ಮೂಲಕ ಐಪಿಎಲ್ ಟೂರ್ನಿ ಆರಂಭವಾಗಲಿದೆ.
PTI ವರದಿ ಪ್ರಕಾರ, ಬಿಸಿಸಿಐ, ಆಯ್ಕೆ ಸಮಿತಿಗೆ ತಾತ್ಕಾಲಿಕ ಆಟಗಾರರ ಪಟ್ಟಿಯನ್ನು ರಚಿಸಲು ಸೂಚಿಸಿದೆ. ಆಯ್ಕೆ ಸಮಿತಿಯ ಸದಸ್ಯರಾದ ಎಸ್ಎಸ್ ದಾಸ್, ಆರ್ ಪಿ ಸಿಂಗ್, ಅಜಯ್ ರಾತ್ರಾ ಮತ್ತು ಪ್ರಗ್ಯಾನ್ ಓಜಾ ಹಲವು ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬಹುದೆಂದು ನಿರೀಕ್ಷಿಸಲಾಗಿದೆ.
“ಪ್ರತಿಯೊಬ್ಬ ಆಯ್ಕೆಗಾರರು ವಾರಕ್ಕೆ ಕನಿಷ್ಠ ಒಂದು ಪಂದ್ಯ ವೀಕ್ಷಿಸಬೇಕೆಂದು ಬಿಸಿಸಿಐ ಬಯಸುತ್ತಿದೆ. ಇದರಿಂದ ಪ್ರತಿಯೊಬ್ಬರು ವಾರಕ್ಕೆ ಐದು ಪಂದ್ಯಗಳನ್ನು ವೀಕ್ಷಿಸಬಹುದು. ಇದು ಸಾಧ್ಯವಾಗಿಲ್ಲವಾದರೆ ಕನಿಷ್ಠ ಟಿವಿ ಮೂಲಕವಾದರೂ ನೋಡಬಹುದೆಂದು," ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಯ್ಕೆಗಾರರು ಸದ್ಯ 2028ರ ಲಾಸ್ ಏಂಜೆಲ್ಸ್ ಒಲಿಂಪಿಕ್ಸ್ ಅಥವಾ 2028 T20ವಿಶ್ವಕಪ್ ತಂಡ ಆಯ್ಕೆಗೆ ಗಮನ ಕೊಡುತ್ತಿಲ್ಲ. ಒಡಿಐ ವಿಶ್ವಕಪ್ ಟೂರ್ನಿಗೆ ಹೊಸ ಆಟಗಾರರ ಕಡೆಗೂ ಗಮನವನ್ನು ನೀಡುತ್ತಿಲ್ಲ. ವೇಗದ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ ಮತ್ತು ಅರ್ಷದೀಪ್ ಸಿಂಗ್ ಸೇರಿದಂತೆ ನಾಲ್ಕು ಬೌಲರ್‌ಗಳನ್ನು ಆಯ್ಕೆಗಾರರು ನಿಜಕ್ಕೂ ಗಮನಿಸುತ್ತಿದ್ದಾರೆ. ಇದರ ಜೊತೆಗೆ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಕಣ್ಗಾವಲಿನಲ್ಲಿದ್ದಾರೆ.
ಇದರ ನಡುವೆ ಆಯ್ಕೆ ಸಮಿತಿಯು ಟೆಸ್ಟ್ ತಂಡದ ಮೇಲೆ ಗಮನವನ್ನು ಕಡಿಮೆ ಮಾಡುವ ಸಾಧ್ಯತೆ ಕಡಿಮೆ, ಏಕೆಂದರೆ ಭಾರತ ತಂಡ ಜೂನ್ 6 ರಿಂದ 10 ರವರೆಗೆ ಅಫ್ಘಾನಿಸ್ತಾನದ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದೆ. ಈ ಪಂದ್ಯದಿಂದ ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್ ಸಿಗುವುದಿಲ್ಲ.
ಭಾರತ ಆಗಸ್ಟ್ 2026 ರಿಂದ ಮಾರ್ಚ್ 2027 ರವರೆಗೆ ಒಟ್ಟು 9 ಟೆಸ್ಟ್ ಪಂದ್ಯಗಳನ್ನು ಆಡಲಿದೆ ಮತ್ತು ಮುಖ್ಯ ರೆಡ್-ಬಾಲ್ ಆಟಗಾರರು, ಮುಂಚೂಣಿ ಬೌಲರ್‌ಗಳು ಈ ಪಂದ್ಯಗಳಲ್ಲಿ ಲಭ್ಯರಾಗಿರುತ್ತಾರೆ. ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಕೂಡ ಐಪಿಎಲ್ ಸಮಯದಲ್ಲಿ ಯಾವುದೇ ಗಾಯ ಅಥವಾ ಸಮಸ್ಯೆ ಎದುರಾದಿಲ್ಲದಿದ್ದರೆ ಟೆಸ್ಟ್ ಪಂದ್ಯಗಳಲ್ಲಿ ಆಡಬಹುದು.