ನವದೆಹಲಿ: ಎಲ್ಲರ ಗಮನವನ್ನು ಸೆಳೆಯಲು ಹಾಗೂ ಸದಾ ಸುದ್ದಿಯಲ್ಲಿರಲು ಭಾರತ ತಂಡವನ್ನು ಟೀಕಿಸುತ್ತಿದ್ದಾರೆಂದಿದ್ದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್‌ಗೆ (Mohammad Kaif) ಇದೀಗ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್ ಆಮಿರ್ (Mohammad Amir) ತಿರುಗೇಟು ನೀಡಿದ್ದಾರೆ. ಭಾರತ ತಂಡ ಸೆಮಿಫೈನಲ್‌ಗೆ ಪ್ರವೇಶಿಸುವುದಿಲ್ಲ ಹಾಗೂ ಅಭಿಷೇಕ್ ಶರ್ಮಾ ಅವರನ್ನು ಸ್ಲಾಗರ್ ಎಂದು ಕರೆದಿದ್ದ ಬಳಿಕ ಆಮಿರ್ ಹಾಗೂ ಕೈಫ್ ನಡುವೆ ಮಾತಿನ ಸಮರ ಶುರುವಾಗಿತ್ತು. ಅಂದ ಹಾಗೆ ಆಮಿರ್ ಭವಿಷ್ಯಗಳು ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಲ್ಲಿ ಸುಳ್ಳಾದವು. ಭಾರತ ತಂಡ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಿದೆ ಹಾಗೂ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಮೂರನೇ ಚುಟಕು ವಿಶ್ವಕಪ್‌ಗಾಗಿ ಕಾದಾಟ ನಡೆಸಲಿದೆ.
ನಂತರ ಮೊಹಮ್ಮದ್ ಕೈಫ್, ಆಮಿರ್ ಭಾರತದ ಬಗ್ಗೆ ಅಥವಾ ಕ್ರಿಕೆಟ್ ಕುರಿತು ನೀಡುವ ಅಭಿಪ್ರಾಯಗಳಿಗೆ ಹೆಚ್ಚಿನ ಗಮನ ನೀಡುವ ಅಗತ್ಯವಿಲ್ಲ ಎಂದು ಹೇಳಿದರು. ಅವು ನಿಜವಾದ ವಿಶ್ಲೇಷಣೆಯಿಂದ ಬಂದವುಗಳಲ್ಲ ಎಂದು ಅವರು ಸೂಚಿಸಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಆಮಿರ್, ಟಿ20 ಕ್ರಿಕೆಟ್‌ನಲ್ಲಿ ಕೈಫ್‌ಗಿಂತ ತಮಗೆ ಹೆಚ್ಚು ಅನುಭವವಿದೆ ಎಂದು ಹೇಳಿದ್ದಾರೆ. ಜೊತೆಗೆ ಗಮನ ಸೆಳೆಯುವ ಉದ್ದೇಶದಿಂದ ಮಾತ್ರ ತಾವು ಭಾರತದ ಬಗ್ಗೆ ಮಾತನಾಡುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
IND vs NZ: ಫೈನಲ್ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ತರಬೇಕೆಂದ ಮೊಹಮ್ಮದ್ ಕೈಫ್!
ಮೊಹಹಮ್ಮದ್ ಕೈಫ್‌ಗೆ ಆಮಿರ್ ತಿರುಗೇಟು
“ಅವರ (ಕೈಫ್) ಕ್ರಿಕೆಟ್ ವೃತ್ತಿಜೀವನ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ, ಅವರು ಎಷ್ಟು ಪಂದ್ಯಗಳನ್ನು ಆಡಿದ್ದಾರೆ ಎಂಬುದೂ ತಿಳಿದಿಲ್ಲ. ಅವರ ಅಂಕಿಅಂಶಗಳನ್ನು ನೋಡಿದಾಗ ಐಪಿಎಲ್‌ನಲ್ಲಿ ಕೇವಲ 29 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರ ಸ್ಟ್ರೈಕ್ ರೇಟ್ 103 (103.60) ಇದೆ. ನಾನು ಭಾರತದ ಬಗ್ಗೆ ಮಾತನಾಡುವುದು ಗಮನ ಸೆಳೆಯಲು ಎಂದು ಅವರು ಹೇಳಿದ್ದಾರೆ. ಮೊದಲನೆಯದಾಗಿ, ಭಾರತದ ಬಗ್ಗೆ ಮಾತನಾಡಿ ನಾನು ಗಮನ ಸೆಳೆಯುವ ಅಗತ್ಯವಿಲ್ಲ. ಮಿಸ್ಟರ್ ಕೈಫ್, ನಾನು 350 ಟಿ20 ಪಂದ್ಯಗಳನ್ನು ಆಡಿದ್ದೇನೆ, ನೀವು ನನ್ನ ಅಂಕಿಅಂಶಗಳನ್ನು ಪರಿಶೀಲಿಸಬಹುದು,” ಎಂದು ಮೊಹಮ್ಮದ್ ಆಮಿರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕೈಫ್‌ಗೆ ತಿರುಗೇಟು ಕೊಟ್ಟಿದ್ದಾರೆ.
ʻನೀವು ಫೀಲ್ಡಿಂಗ್‌ನಿಂದಲೇ ಕ್ರಿಕೆಟ್ ಆಡಿದ್ದೀರಂತೆ’: ಆಮಿರ್
ಆಮಿರ್, ಕೈಫ್ ವಿರುದ್ಧ ಮತ್ತೊಮ್ಮೆ ಟೀಕೆ ಮಾಡಿದರು. ನಿಮ್ಮ ರೀತಿ ನಾನು ಕೇವಲ ಫೀಲ್ಡಿಂಗ್‌ನಿಂದ ಮಾತ್ರ ರಾಷ್ಟ್ರೀಯ ತಂಡ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ ಎಂದು ಹೇಳಿದರು. ತಾವು ಬೌಲಿಂಗ್ ಪ್ರದರ್ಶನದ ಮೂಲಕವೇ ತಂಡದಲ್ಲಿ ಸ್ಥಾನ ಪಡೆದಿದ್ದಾಗಿ ಅವರು ತಿಳಿಸಿದರು. ಇದರ ಜೊತೆಗೆ, ಕೈಫ್ ತಮ್ಮ ವೃತ್ತಿಜೀವನದಲ್ಲಿ ಸಿಕ್ಕ ಅವಕಾಶಗಳಿಗೆ ಸೌರವ್ ಗಂಗೂಲಿ ಅವರಿಗೆ ಧನ್ಯವಾದ ಹೇಳಬೇಕು ಎಂದೂ ಆಮಿರ್ ಅಭಿಪ್ರಾಯಪಟ್ಟರು.
T20 World Cup 2026: ಭಾರತದ ಪಂದ್ಯಗಳನ್ನು ನೋಡಲ್ಲ ಎಂದ ಮೊಹಮ್ಮದ್ ರಿಝ್ವಾನ್!
“ಇನ್ನೂ ಮುಖ್ಯವಾಗಿ, ನಾನು ಕೇವಲ ಫೀಲ್ಡಿಂಗ್‌ನಿಂದ ಮಾತ್ರ ಕ್ರಿಕೆಟ್ ಆಡಿಲ್ಲ. ಉತ್ತಮ ಪ್ರದರ್ಶನ ನೀಡಿದ ನಂತರವೇ ನಾನು ಆಡಿದ್ದೇನೆ. ಈ ಕಾರಣದಿಂದಾಗಿ ನೀವು ‘ದಾದಾ’ಗೆ (ಸೌರವ್ ಗಂಗೂಲಿ) ಧನ್ಯವಾದ ಹೇಳಬೇಕು,” ಎಂದು ಆಮೀರ್ ಹೇಳಿದರು.
“ನೀವು ಕೇವಲ ಫೀಲ್ಡಿಂಗ್‌ನಿಂದಲೇ ಕ್ರಿಕೆಟ್ ಆಡಿದ್ದೀರಂತೆ ಎಂದು ನಾನು ಕೇಳಿದ್ದೇನೆ. ನೀವು ಕ್ರಿಕೆಟಿಗರು; ಇಂತಹ ಹೇಳಿಕೆಗಳು ನಿಮಗೆ ಸೂಕ್ತವಲ್ಲ,” ಎಂದು ಅವರು ತಮ್ಮ ಮಾತನ್ನು ಮುಗಿಸಿದರು.
ನ್ಯೂಜಿಲೆಂಡ್ ಎದುರು ಫೈನಲ್ ಆಡಲಿರುವ ಭಾರತ
ಮತ್ತೊಂದೆಡೆ, ಭಾರತ ತಂಡ ಪುರುಷರ ಮೂರನೇ ಬಾರಿ ಟಿ20 ವಿಶ್ವಕಪ್ ಗೆಲ್ಲಲು ಎದುರು ನೋಡುತ್ತಿದೆ. ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡ ನಂತರ, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಬಲವಾಗಿ ಕಮ್‌ಬ್ಯಾಕ್ ಮಾಡಿದೆ. 2007 ಮತ್ತು 2024ರ ಜಯಗಳ ನಂತರ ಇದೀಗ ಮೂರನೇ ಟಿ20 ವಿಶ್ವಕಪ್ ಗೆಲ್ಲುವ ಸನಿಹದಲ್ಲಿದೆ. ಫೈನಲ್ ಪಂದ್ಯ ಮಾರ್ಚ್ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿದೆ.