ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭುವನೇಶ್ವರ್‌, ಸೂರ್ಯವಂಶಿ ಔಟ್‌; ಮೂರನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು (IND vs NZ) ಅಕ್ಟೋಬರ್‌ 27 ರಂದು ಮಂಗಳವಾರ ವೆಲ್ಲಿಂಗ್ಟನ್‌ನ ಹೆನ್ರಿ ಕ್ರೀಡಂಣಗಣದಲ್ಲಿ ನಡೆಯುವ ಮೂರನೇ ಟಿ20ಐ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿರುವ ಟೀಮ್‌ ಇಂಡಿಯಾ ಇದೀಗ ಸರಣಿಯಲ್ಲಿ 2-0 ಮುನ್ನಡೆಯನ್ನು ಕಾಯ್ದುಕೊಂಡಿವೆ.

ಮೂರನೇ ಟಿ20ಐಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ವಿವರ.

ವೆಲ್ಲಿಂಗ್ಟನ್‌: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯ (IND vs NZ) ಅಕ್ಟೋಬರ್ 27ರಂದು ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ, ಮೂರನೇ ಪಂದ್ಯದಲ್ಲೂ ಜಯ ಸಾಧಿಸಿ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಳ್ಳುವ ಗುರಿ ಹೊಂದಿದೆ. ಈ ಪಂದ್ಯಕ್ಕೆ ಭಾರತ ತಂಡದ (India's Probable Playing XI) ಆಡುವ ಬಳಗದಲ್ಲಿ ಎರಡು ಬದಲಾವಣೆಗಳಾಗುವ ಸಾಧ್ಯತೆಯಿದೆ.

ಮೊದಲ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಮೂರನೇ ಪಂದ್ಯದಿಂದ ಕೈಬಿಡುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ಅವರು 49 ರನ್ ಬಿಟ್ಟುಕೊಟ್ಟಿದ್ದರು. ಎರಡನೇ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 50 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಭುವನೇಶ್ವರ್ ಬದಲಿಗೆ ಮಯಾಂಕ್ ಯಾದವ್ ತಂಡಕ್ಕೆ ಮರಳಬಹುದು. ಮೊದಲ ಟಿ20 ಪಂದ್ಯದಲ್ಲಿ ಆಡಿದ್ದ ಮಯಾಂಕ್, ನಾಲ್ಕು ಓವರ್‌ಗಳಲ್ಲಿ 40 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಎರಡನೇ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಿ ಪ್ರಿನ್ಸ್ ಯಾದವ್‌ಗೆ ಅವಕಾಶ ನೀಡಲಾಗಿತ್ತು.

ವೈಭವ್ ಸೂರ್ಯವಂಶಿಗೆ ಮತ್ತೆ ನಿರಾಸೆ?

15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಕೂಡ ಮೂರನೇ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆಯಿದೆ. ಗಾಯಗೊಂಡಿದ್ದ ಇಶಾನ್ ಕಿಶನ್ ಬದಲಿಗೆ ಎರಡನೇ ಪಂದ್ಯದಲ್ಲಿ ಅವಕಾಶ ಪಡೆದಿದ್ದ ವೈಭವ್, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿ ಎಂಟು ಎಸೆತಗಳಲ್ಲಿ ಕೇವಲ ನಾಲ್ಕು ರನ್ ಗಳಿಸಿದ್ದರು. ಈ ವರ್ಷದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿರುವ ಇಶಾನ್ ಕಿಶನ್ ಮೂರನೇ ಪಂದ್ಯಕ್ಕೆ ಮರಳುವ ನಿರೀಕ್ಷೆಯಿದೆ. ಹೀಗಾಗಿ ವೈಭವ್ ಅವರಿಗೆ ಸ್ಥಾನ ಬಿಟ್ಟುಕೊಡಬೇಕಾಗಬಹುದು.

ಅಕ್ಷರ್ ಪಟೇಲ್‌ಗೆ ವಿಶ್ರಾಂತಿ ಸಾಧ್ಯತೆ?

ಮೊದಲ ಎರಡು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಶ್ರೇಯಸ್ ಅಯ್ಯರ್, ನಮನ್ ಧೀರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಬ್ಯಾಟಿಂಗ್‌ನಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಹೀಗಾಗಿ ಈ ಆಟಗಾರರು ತಮ್ಮ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಗೆ ವಿಶ್ರಾಂತಿ ನೀಡಿ ಕುಲ್‌ದೀಪ್ ಯಾದವ್ ಅಥವಾ ವರುಣ್ ಚಕ್ರವರ್ತಿ ಅವರನ್ನು ಆಡಿಸುವ ಸಾಧ್ಯತೆಯೂ ಇದೆ. ಆದರೆ, ಈ ಬದಲಾವಣೆಯ ಸಾಧ್ಯತೆ ಕಡಿಮೆ ಎಂದು ವರದಿ ತಿಳಿಸಿದೆ.

ಮೂರನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್, ಆರಂಭಿಕ ಬ್ಯಾಟ್ಸ್‌ಮನ್‌)

ಅಭಿಷೇಕ್ ಶರ್ಮಾ (ಆರಂಭಿಕ ಬ್ಯಾಟ್ಸ್‌ಮನ್‌)

ಇಶಾನ್ ಕಿಶನ್ (ಬ್ಯಾಟ್ಸ್‌ಮನ್‌)

ಶ್ರೇಯಸ್ ಅಯ್ಯರ್ (ನಾಯಕ, ಬ್ಯಾಟ್ಸ್‌ಮನ್‌)

ತಿಲಕ್ ವರ್ಮಾ (ಉಪ ನಾಯಕ, ಬ್ಯಾಟ್ಸ್‌ಮನ್‌)

ನಿತೀಶ್ ಕುಮಾರ್ ರೆಡ್ಡಿ (ಆಲ್‌ರೌಂಡರ್‌)

ನಮನ್ ಧೀರ್ (ಆಲ್‌ರೌಂಡರ್‌)

ಅಕ್ಷರ್ ಪಟೇಲ್ (ಆಲ್‌ರೌಂಡರ್‌)

ಪ್ರಿನ್ಸ್ ಯಾದವ್ (ವೇಗದ ಬೌಲರ್‌)

ಅರ್ಷದೀಪ್ ಸಿಂಗ್ (ವೇಗದ ಬೌಲರ್‌)

ಮಯಾಂಕ್ ಯಾದವ್ (ವೇಗದ ಬೌಲರ್‌)