ನವದೆಹಲಿ: ಭಾರತ ತಂಡದಲ್ಲಿ ಮತ್ತೊಮ್ಮೆ ಅವಕಾಶ ಪಡೆಯಲು ಹಿರಿಯ ವೇಗಿಗಳಾದ ಭುವನೇಶ್ವರ್ ಕುಮಾರ್ (Bhuvneshwar Kumar) ಹಾಗೂ ಮೊಹಮ್ಮದ್ ಶಮಿ (Mohammad Shami) ಅರ್ಹರಿದ್ದಾರೆಂದು ದೆಹಲಿ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ವೇಗಿ ನವದೀಪ್ ಸೈನಿ (Navdeep Saini) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶಿ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ಮುಂದುವರಿಸಿದರೂ ಈ ಇಬ್ಬರನ್ನೂ ರಾಷ್ಟ್ರೀಯ ತಂಡದಿಂದ ದೂರ ಇಡಲಾಗಿದೆ. ಅಲ್ಲದೆ ಮೊಹಮ್ಮದ್ ಶಮಿ ಗಾಯದಿಂದ ಗುಣಮುಖರಾಗಿ ಅತ್ಯುತ್ತಮ ಪ್ರದರ್ಶನವನ್ನು ತೋರಿದರೂ ಅವರನ್ನು ನಿರಂತರವಾಗಿ ಭಾರತ ತಂಡಕ್ಕೆ ಕಡೆಗಣಿಸಲಾಗುತ್ತಿಲ್ಲ.
ಭುವನೇಶ್ವರ್ ಕುಮಾರ್ ಇತ್ತೀಚಿನ ಐಪಿಎಲ್ ಆವೃತ್ತಿಗಳಲ್ಲಿ ಗಮನಾರ್ಹ ಪ್ರದರ್ಶನವನ್ನು ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ಅವರು ಕಳೆದ ಎರಡು ಆವೃತ್ತಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ಆರ್‌ಸಿಬಿ ಸತತ ಎರಡು ಬಾರಿ ಪ್ರಶಸ್ತಿಗಳನ್ನು ಗೆಲ್ಲಲ್ಲು ನೆರವು ನೀಡಿದ್ದರು. 36ರ ವಯಸ್ಸಿನ ಅವರು 2026ರ ಟೂರ್ನಿಯಲ್ಲಿ 28 ವಿಕೆಟ್ ಕಬಳಿಸಿ, ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಗುಜರಾತ್ ಟೈಟನ್ಸ್‌ನ ಕಗಿಸೊ ರಬಾಡಾ ಅಗ್ರಸ್ಥಾನದಲ್ಲಿದ್ದರು. ಭುವನೇಶ್ವರ್ ಉತ್ತಮ ಫಾರ್ಮ್‌ನಲ್ಲಿದ್ದರೂ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳ ಭಾರತ ತಂಡದಲ್ಲಿ ಭುವನೇಶ್ವರ್‌ಗೆ ಬಿಸಿಸಿಐ ಆಯ್ಕೆ ಮಾಡಿರಲಿಲ್ಲ.
IND vs SL: ಭಾರತ ಟೆಸ್ಟ್ ತಂಡದ ಮುಂದಿನ ದೊಡ್ಡ ಗುರಿ ಯಾವುದೆಂದು ತಿಳಿಸಿದ ಶುಭಮನ್ ಗಿಲ್!
ಇನ್ನು ಮೊಹಮ್ಮದ್ ಶಮಿ ಅವರ ಪರಿಸ್ಥಿತಿ ಸ್ವಲ್ಪ ವಿಭಿನ್ನವಾಗಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹಲವು ಬಾರಿ ಅವರ ಫಿಟ್‌ನೆಸ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಬಂಗಾಳದ ಈ ವೇಗಿ ರಣಜಿ ಟ್ರೋಫಿ ಸೇರಿದಂತೆ ದೇಶಿ ಕ್ರಿಕೆಟ್‌ನಲ್ಲಿ ನಿರಂತರವಾಗಿ ಆಡುತ್ತಿದ್ದಾರೆ. ರೆಡ್-ಬಾಲ್ ಕ್ರಿಕೆಟ್ ಆಡುವುದು ದೈಹಿಕವಾಗಿ ಎಷ್ಟು ಕಠಿಣ ಎಂಬುದನ್ನು ಉಲ್ಲೇಖಿಸಿದ ಸೈನಿ, ಶಮಿ ಅವರ ಮೇಲಿರುವ ಕೆಲಸದ ಹೊರೆಯನ್ನು ಕಡೆಗಣಿಸಬಾರದು ಎಂದು ಹೇಳಿದ್ದಾರೆ.
“ಆಯ್ಕೆಗಾರರು ಏನು ಯೋಚಿಸುತ್ತಿದ್ದಾರೆ ಎಂಬುದರ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ಆಟಗಾರನಾಗಿ ನೋಡಿದರೆ, ಮೊಹಮ್ಮದ್ ಶಮಿ ಅಥವಾ ಭುವನೇಶ್ವರ್ ಕುಮಾರ್ ದೇಶಿ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ,” ಎಂದು ನದೀಪ್ ಸೈನಿ ತಿಳಿಸಿದ್ದಾರೆ.
ಶುಭಮನ್ ಗಿಲ್ ಅಲ್ಲವೇ ಅಲ್ಲ; ಸರ್ಫರಾಝ್ ಖಾನ್ ಉಪಖಂಡದ ರಾಜ ಎಂದ ಆರ್ ಅಶ್ವಿನ್! ಏಕೆ ಗೊತ್ತೆ?
“ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ದೇಶಿ ಕ್ರಿಕೆಟ್, ವಿಶೇಷವಾಗಿ ರಣಜಿ ಟ್ರೋಫಿ ಆಡುವುದು ಸುಲಭದ ಕೆಲಸವಲ್ಲ. ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಲು ಸಾಕಷ್ಟು ಪರಿಶ್ರಮ ಬೇಕಾಗುತ್ತದೆ. ಶಮಿ ಭಾಯ್ ಉತ್ತಮವಾಗಿ ಆಡುತ್ತಿದ್ದಾರೆ ಮತ್ತು ಭುವಿ ಭಾಯ್ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಯುಪಿ ಟಿ20 ಲೀಗ್‌ನಲ್ಲೂ ಆಡಲಿದ್ದಾರೆ. ಹಾಗಾಗಿ ಅವರಿಗೆ ಭಾರತ ತಂಡದಲ್ಲಿ ಮತ್ತೊಂದು ಅವಕಾಶ ಸಿಗಬೇಕು ಎಂದು ನಾನು ಭಾವಿಸುತ್ತೇನೆ,” ಎಂದು ನವದೀಪ್ ಸೈನಿ ಇಂಡಿಯಾ ಟಿವಿಯ ಪ್ರಶ್ನೆಗೆ ಉತ್ತರಿಸಿದ್ದಾರೆ.
ನವದೀಪ್ ಸೈನಿ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಔಟರ್ ಡೆಲ್ಲಿ ವಾರಿಯರ್ಸ್ ತಂಡದ ಪರ ಆಡುತ್ತಿದ್ದಾರೆ. ಅವರು ಇಲ್ಲಿಯವರೆಗೂ ಆರು ಪಂದ್ಯಗಳನ್ನು ಆಡಿದ್ದು, 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರು ಪ್ರತಿನಿಧಿಸುವ ತಂಡ ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿದ ಏಳು ಪಂದ್ಯಗಳಲ್ಲಿ ಡೆಲ್ಲಿ ವಾರಿಯರ್ಸ್ ನಾಲ್ಕರಲ್ಲಿ ಗೆಲುವು ಪಡೆದಿದೆ.