ಸೇಂಟ್ ಲೂಸಿಯಾ: ವಯಸ್ಸು ಹೆಚ್ಚಾದರೂ ವಿಕೆಟ್‌ಗಳ ಮೇಲಿನ ಹಸಿವು ಮಾತ್ರ ಕಡಿಮೆಯಾಗಿಲ್ಲ ಎಂಬುದನ್ನು ದಕ್ಷಿಣ ಆಫ್ರಿಕಾದ ಹಿರಿಯ ಸ್ಪಿನ್ನರ್ ಇಮ್ರಾನ್ ತಾಹಿರ್ (Imran Tahir) ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) ಟೂರ್ನಿಯಲಲಿ ಗಯಾನಾ ಅಮೆಜಾನ್ ವಾರಿಯರ್ಸ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ 47ರ ವಯಸ್ಸಿನ ತಾಹಿರ್, ಪುರುಷರ ಟಿ20 ಕ್ರಿಕೆಟ್‌ನಲ್ಲಿ ಐದು ವಿಕೆಟ್‌ಗಳ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವದಾಖಲೆಯನ್ನು ಬರೆದಿದ್ದಾರೆ.
ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧ ತಾಹಿರ್ 17 ರನ್ ನೀಡಿ 5 ವಿಕೆಟ್ ಕಬಳಿಸಿದರು. ಅವರ ಸ್ಪಿನ್ ಮೋಡಿಯಿಂದ ಸೇಂಟ್ ಲೂಸಿಯಾ ಕಿಂಗ್ಸ್ ತಂಡ 119 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯದಲ್ಲಿ ಎದುರಾಳಿ ತಂಡ ಆರಂಭದಲ್ಲಿ ವೇಗವಾಗಿ ರನ್ ಗಳಿಸುತ್ತಿದ್ದರೂ, ತಾಹಿರ್ ಅವರ ಪ್ರವೇಶ ಪಂದ್ಯದ ಚಿತ್ರಣವನ್ನೇ ಬದಲಿಸಿತು.
ಪವರ್‌ಪ್ಲೇನಲ್ಲಿ ಕಮಿಲ್ ಪೂರನ್ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಸೇಂಟ್ ಲೂಸಿಯಾ ಕಿಂಗ್ಸ್ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಇಮ್ರಾನ್ ತಾಹಿರ್ ಮತ್ತು ಮೆಹಿದಿ ಹಸನ್ ಮಿರಾಜ್ ಜೋಡಿ ಬೌಲಿಂಗ್ ಆರಂಭಿಸಿದ ಬಳಿಕ ಕಿಂಗ್ಸ್ ತಂಡದ ಬ್ಯಾಟಿಂಗ್ ವಿಭಾಗ ಕ್ರಮೇಣ ಕುಸಿಯಿತು.
ENG vs PAK: ಮೊದಲ ಮಹಾಯುದ್ಧದ ಬಳಿಕ ಅತ್ಯುತ್ತಮ ಟೆಸ್ಟ್ ಸರಾಸರಿಯಲ್ಲಿ 100 ವಿಕೆಟ್ ಕಿತ್ತ ಓಲ್ಲಿ ರಾಬಿನ್ಸನ್!
ಅನುಭವಿ ಲೆಗ್ ಸ್ಪಿನ್ನರ್ ತಾಹಿರ್ ತಮ್ಮ ಮೊದಲ ಎರಡು ಓವರ್‌ಗಳಲ್ಲೇ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಕಮಿಲ್ ಪೂರನ್ ಮತ್ತು ರಾಸ್ಟನ್ ಚೇಸ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಮೆಕೆನ್ನಿ ಕ್ಲಾರ್ಕ್ ಮತ್ತು ಮ್ಯಾಥ್ಯೂ ಫೋರ್ಡ್ ಒಂದೇ ಓವರ್‌ನಲ್ಲಿ ತಾಹಿರ್ ಬೌಲಿಂಗ್‌ಗೆ ಬಲಿಯಾದರು. ಬಳಿಕ ಜೋಶುವಾ ಬಿಷಪ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ ತಮ್ಮ ಐದನೇ ವಿಕೆಟ್ ಪಡೆದರು. ಇದಷ್ಟೇ ಅಲ್ಲದೆ, ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಇನಿಂಗ್ಸ್ ಅಂತ್ಯಗೊಳಿಸಿದ ಕ್ಯಾಚ್‌ನ್ನೂ ತಾಹಿರ್ ಅವರೇ ಹಿಡಿದು ಸ್ಮರಣೀಯ ಪ್ರದರ್ಶನಕ್ಕೆ ತೆರೆ ಎಳೆದರು.
2022ರ ದಾಖಲೆ ಮುರಿದ ತಾಹಿರ್
ಪುರುಷರ ಟಿ20 ಕ್ರಿಕೆಟ್‌ನಲ್ಲಿ ಐದು ವಿಕೆಟ್‌ಗಳ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರನ ದಾಖಲೆಯು ಇದುವರೆಗೆ ಕುಕ್ ಐಲ್ಯಾಂಡ್ಸ್‌ನ ಸ್ಪಿನ್ನರ್ ಟೊಮಕಾನುಟೆ ರಿತಾವಾ ಅವರ ಹೆಸರಿನಲ್ಲಿತ್ತು. 2022ರಲ್ಲಿ ಫಿಜಿ ವಿರುದ್ಧ 46 ವರ್ಷ 299 ದಿನಗಳ ವಯಸ್ಸಿನಲ್ಲಿ 5/19 ಬೌಲಿಂಗ್ ಪ್ರದರ್ಶನ ನೀಡಿದ್ದ ರಿತಾವಾ ಈ ದಾಖಲೆ ನಿರ್ಮಿಸಿದ್ದರು.
ಇಮ್ರಾನ್ ತಾಹಿರ್ ಕಳೆದ ವರ್ಷವೇ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದರು. ಆಂಟಿಗುವಾ ಮತ್ತು ಬಾರ್ಬುಡಾ ಫಾಲ್ಕನ್ಸ್ ವಿರುದ್ಧ 46 ವರ್ಷ 148 ದಿನಗಳ ವಯಸ್ಸಿನಲ್ಲಿ 5/21 ಬೌಲಿಂಗ್ ಮಾಡಿದ್ದರು. ಇದೀಗ 47 ವರ್ಷ 167 ದಿನಗಳ ವಯಸ್ಸಿನಲ್ಲಿ 5/17ರ ಅದ್ಭುತ ಸ್ಪೆಲ್ ಮೂಲಕ ತಾಹಿರ್ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
IND vs WI: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ತಯಾರಿ ಆರಂಭಿಸಿದ ರೋಹಿತ್ ಶರ್ಮಾ!
ಪುರುಷರ ಟಿ20 ಕ್ರಿಕೆಟ್‌ನಲ್ಲಿ 5 ವಿಕೆಟ್ ಸಾಧನೆ ಮಾಡಿದ ಅತ್ಯಂತ ಹಿರಿಯ ಬೌಲರ್‌ಗಳು
ಇಮ್ರಾನ್ ತಾಹಿರ್ — 47 ವರ್ಷ, 167 ದಿನ — 5/17 ವಿರುದ್ಧ ಸೇಂಟ್ ಲೂಸಿಯಾ ಕಿಂಗ್ಸ್, 2026
ಟೊಮಕಾನುಟೆ ರಿತಾವಾ — 46 ವರ್ಷ, 299 ದಿನ — 5/19 ವಿರುದ್ಧ ಫಿಜಿ, 2022
ಇಮ್ರಾನ್ ತಾಹಿರ್ — 46 ವರ್ಷ, 148 ದಿನ — 5/21 ವಿರುದ್ಧ ಆಂಟಿಗುವಾ ಮತ್ತು ಬಾರ್ಬುಡಾ ಫಾಲ್ಕನ್ಸ್, 2025
ಇಮ್ರಾನ್ ತಾಹಿರ್ — 44 ವರ್ಷ, 323 ದಿನ — 5/26 ವಿರುದ್ಧ ಖುಲ್ನಾ ಟೈಗರ್ಸ್, 2024
ಪ್ರಕಾಶ್ ಮಿಶ್ರಾ — 44 ವರ್ಷ, 165 ದಿನ — 5/16 ವಿರುದ್ಧ ಕ್ರೊಯೇಷಿಯಾ, 2023