ನವದೆಹಲಿ: ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿರುವ ಯುವ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Sooryanshi) ಅವರಿಗೆ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಡ್ಯಾರಿಲ್ ಕುಲ್ಲಿನನ್ (Daryll Cullinan) ಅವರು ಅಚ್ಚರಿ ಸಲಹೆಯೊಂದನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದಕ್ಕೂ ಮುನ್ನ ಶಾಲಾ ದಿನಗಳನ್ನು ಆನಂದಿಸಿ ಎಂದು ಹೇಳಿದ್ದಾರೆ. ವೈಭವ್‌ಗೆ ಇನ್ನೂ 15 ವರ್ಷ ವಯಸ್ಸು, ಹಾಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದೆ ಶಾಲೆಗೆ ಮರಳಿ, ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಭಾರತ ತಂಡದಲ್ಲಿ ವೈಭವ್ ಸೂರ್ಯವಂಶಿ ಇದ್ದಾರೆ. ಆದರೆ, ಅವರಿಗೆ ಆರಂಭಿಕ ಪಂದ್ಯಗಳಲ್ಲಿ ಅವಕಾಶ ನೀಡುವುದು ಅನುಮಾನ.
ಡ್ಯಾರಿಲ್ ಕಲ್ಲಿನನ್ ಅವರು ಕ್ರಿಕ್‌ಇನ್ಪೋಗೆ ಬರೆದ ಅಂಕಣದಲ್ಲಿ,"ವೈಭವ್ ಸೂರ್ಯವಂಶಿಯಲ್ಲಿ ನಾವು ನೋಡುತ್ತಿರುವುದು ಕೇವಲ ತನ್ನ ವಯಸ್ಸಿಗಿಂತ ಮೀರಿದ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಒಬ್ಬ ಬಾಲಕನನ್ನು ಮಾತ್ರವಲ್ಲ. ಕ್ರಿಕೆಟ್ ಇತಿಹಾಸದಲ್ಲಿ ಈ ಹಿಂದೆ ಎಂದಿಗೂ ಎದುರಾಗದಂತಹ ಒಂದು ವಿಶಿಷ್ಟ ಪರಿಸ್ಥಿತಿ ಇದು. ಜಾಗತಿಕ ಮಟ್ಟದಲ್ಲಿ ಅಪಾರ ವಾಣಿಜ್ಯ ಪ್ರಭಾವ, ಭಾರೀ ಜನಪ್ರಿಯತೆ ಮತ್ತು ಸಾಮಾಜಿಕ ಮಾಧ್ಯಮಗಳ ನಿರಂತರ ಗಮನ ಸೆಳೆಯುವ ಭಾರತೀಯ ಕ್ರಿಕೆಟ್ ಹಾಗೂ ಐಪಿಎಲ್‌ನಂತಹ ವೇದಿಕೆಯ ಕೇಂದ್ರಬಿಂದುವಿನಲ್ಲಿ ಒಬ್ಬ ಬಾಲಕ ನಿಂತಿರುವುದನ್ನು ನಾವು ನೋಡುತ್ತಿದ್ದೇವೆ," ಎಂದು ಹೇಳಿದ್ದಾರೆ.
ಭಾರತ ಟಿ20 ತಂಡದ ನಾಯಕತ್ವ ಅಲಂಕರಿಸಿದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ಶ್ರೇಯಸ್ ಅಯ್ಯರ್!
"ಕ್ರಿಕೆಟ್‌ನಲ್ಲಿ ಪ್ರತಿಭಾವಂತ ಬಾಲಕರು ಬಂದಿರುವುದನ್ನು ನಾವು ನೋಡಿದ್ದೇವೆ. ಅತಿ ಚಿಕ್ಕ ವಯಸ್ಸಿನಲ್ಲಿ ಅಂಗಳಕ್ಕಿಳಿದ ಆಟಗಾರರನ್ನೂ ನಾವು ಕಂಡಿದ್ದೇವೆ. ಆದರೆ ಮುಗ್ಧತೆ, ಅಪಾರ ಪ್ರತಿಭೆ ಮತ್ತು ಲಕ್ಷಾಂತರ ಜನರ ಅಭಿಪ್ರಾಯಗಳ ನಡುವೆ ಇರುವ ಅಂತರವನ್ನು ಬಹುತೇಕ ಅಳಿಸಿ ಹಾಕಿರುವ ಸಾಮಾಜಿಕ ಮಾಧ್ಯಮದ ಜಗತ್ತನ್ನು ನಾವು ಈ ಹಿಂದೆ ಎಲ್ಲಿಯೂ ನೋಡಿಲ್ಲ. ಸೂರ್ಯವಂಶಿ ಕೇವಲ 15 ವರ್ಷದವರು. ಅವರು ಸಾಮಾನ್ಯ ಬೆಳವಣಿಗೆಯ ವೇಗದಲ್ಲಿ ಸಾಗುತ್ತಿಲ್ಲ. ತುಂಬಾ ತಡವಾಗುವ ಮೊದಲು ಅವರನ್ನು ಎಚ್ಚರಿಕೆಯಿಂದ ಪರಿಗಣಿಸಬೇಕಾದ ವಿಷಯ," ಎಂದು ಅವರು ಸೇರಿಸಿದ್ದಾರೆ.
ಕುಲ್ಲಿನನ್ ಅವರ ಅಭಿಪ್ರಾಯದಲ್ಲಿ ಸೂರ್ಯವಂಶಿಯ ಕ್ರಿಕೆಟ್ ವೃತ್ತಿಜೀವನವನ್ನು ಸರಿಯಾಗಿ ಯೋಜಿಸಿ ನಿರ್ವಹಿಸುವುದು ತುಂಬಾ ಅಗತ್ಯ. ಅತಿ ಚಿಕ್ಕ ವಯಸ್ಸಿನಲ್ಲಿ ಯಶಸ್ಸು ಕಂಡು ಬಳಿಕ ತಮ್ಮ ವೃತ್ತಿಜೀವನ ಹಿನ್ನಡೆಯಾದ ಇತರ ಬಾಲ ಪ್ರತಿಭೆಗಳ ಉದಾಹರಣೆಗಳನ್ನು ಅವರು ಉಲ್ಲೇಖಿಸಿದ್ದಾರೆ.
IND vs ENG: ಇಂಗ್ಲೆಂಡ್‌ಗೆ ಭೀತಿ ಹುಟ್ಟಿಸಿರುವ ಆಟಗಾರನನ್ನು ಹೆಸರಿಸಿದ ಗ್ರೇಮ್ ಸ್ವಾನ್!
“ನನ್ನ ಅಭಿಪ್ರಾಯದಲ್ಲಿ ಅವರು ಈಗ ಮನೆಯಲ್ಲಿದ್ದು ಪರೀಕ್ಷೆಗಳಿಗಾಗಿ ತಯಾರಿ ಮಾಡಿಕೊಳ್ಳಬೇಕು, ತನ್ನ ಸ್ನೇಹಿತರೊಂದಿಗೆ ಗಲ್ಲಿ ಕ್ರಿಕೆಟ್ ಆಡಬೇಕು ಮತ್ತು ಇನ್ನೂ ಬಾಲಕನಾಗಿ ತನ್ನ ಸಮಯವನ್ನು ಕಳೆಯಬೇಕು. ಅವರ ಪ್ರತಿಭೆಯನ್ನು ನಿರ್ಲಕ್ಷಿಸಬೇಕು ಎಂಬುದಲ್ಲ. ಆದರೆ ಆ ಪ್ರತಿಭೆಯನ್ನು ಹೊತ್ತಿರುವ ವ್ಯಕ್ತಿಯೇ ಸಮಗ್ರವಾಗಿ ಬೆಳೆಯಲು ಅವಕಾಶ ನೀಡಿದಾಗ ಮಾತ್ರ ಆ ಪ್ರತಿಭೆ ನಿಜವಾಗಿ ಫಲಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು,” ಎಂದು ಕುಲ್ಲಿನನ್ ಬರೆದಿದ್ದಾರೆ.