ನವದೆಹಲಿ: ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ (PSL) ಟೂರ್ನಿಯಲ್ಲಿ ಕರಾಚಿ ಕಿಂಗ್ಸ್ (Karachi Kings) ತಂಡವನ್ನು ಮುನ್ನಡೆಸುತ್ತಿರುವ ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (David Warner), ಟೂರ್ನಿಯ ವೇಳಾಪಟ್ಟಿಯ ನಡುವಿನ ವಿರಾಮದ ಸಂದರ್ಭದಲ್ಲಿ ನಾಲ್ಕು ದಿನಗಳ ವಿಶ್ರಾಂತಿಗಾಗಿ ತಮ್ಮ ಸ್ವಂತ ನಗರ ಸಿಡ್ನಿಗೆ ಮರಳಿದ್ದರು. ಆದರೆ, ಅವರು ಇಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣ ಎಡಗೈ ಬ್ಯಾಟ್ಸ್‌ಮನ್ ಅನ್ನು ಅರೆಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ಏಪ್ರಿಲ್ 5ರಂದು ರಾತ್ರಿ ಸುಮಾರು 11:20ಕ್ಕೆ ಸೌತ್ ಡೌಲಿಂಗ್ ಸ್ಟ್ರೀಟ್‌ನಲ್ಲಿ 39ರ ವಯಸ್ಸಿನ ಡೇವಿಡ್ ವಾರ್ನರ್ ಅವರನ್ನು ಯಾದೃಚ್ಛಿಕ ಉಸಿರಾಟ ಪರೀಕ್ಷೆ (random breath test)ಗಾಗಿ ತಡೆಯಲಾಯಿತು. ಅವರ ಪ್ರಾಥಮಿಕ ರಸ್ತೆ ಪರೀಕ್ಷೆಯಲ್ಲಿ ಮದ್ಯಪಾನ ಮಾಡಿರುವುದು ದೃಡವಾಗಿದ್ದು, ನಂತರ ಅವರನ್ನು ಸರ್ರೆ ಹಿಲ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಎರಡನೇ ಬಾರಿ ಉಸಿರಾಟ ವಿಶ್ಲೇಷಣೆ ನಡೆಸಲಾಗಿದೆ ಎಂದು ನ್ಯೂ ಸೌಥ್ ವೇಲ್ಸ್ ಪೊಲೀಸರು ಮಾಹಿತಿ ನೀಡಿದ್ದಾರೆ.
IPL 2026: ಅಧಿಕ ಪ್ರಸಂಗ ತೋರಿದ ಆವೇಶ್ ಖಾನ್‌ಗೆ ಬುದ್ದಿ ಕಲಿಸುತ್ತಾ ಬಿಸಿಸಿಐ? ಇಲ್ಲಿದೆ ವಿಡಿಯೊ
ಪೊಲೀಸ್ ದಾಖಲೆಗಳ ಪ್ರಕಾರ, ಡೇವಿಡ್ ವಾರ್ನರ್ ಅವರಲ್ಲಿ 0.104 ಪ್ರಮಾಣದ ಮದ್ಯಾಂಶ ಪತ್ತೆಯಾಗಿದೆ. ಇದು ಆಸ್ಟ್ರೇಲಿಯಾದಲ್ಲಿ ಅನುಮತಿಸಿರುವ 0.05 ಕಾನೂನು ಮಿತಿಗಿಂತ ಎರಡರಷ್ಟು ಹೆಚ್ಚು. ಅವರಿಗೆ Prescribed Concentration of Alcohol - PCA ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಜೊತೆಗೆ, ಅವರ ನ್ಯೂ ಸೌತ್ ವೇಲ್ಸ್ ಚಾಲನಾ ಪರವಾನಗಿ ಅಮಾನತು ಮಾಡುವ ಸಾಧ್ಯತೆಯೂ ಇದೆ.
“ಚಾಲಕನಿಗೆ ಮೇ 7 ರಂದು ಗುರುವಾರ ಡಾನಿಂಗ್ ಸೆಂಟರ್ ಲೋಕಲ್ ಕೋರ್ಟ್‌ಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ದಿನಾಂಕದವರೆಗೆ ಆ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗಿದೆ," ಎಂದು ನ್ಯೂ ಸೌಥ್ ವೇಲ್ಸ್ ವಕ್ತಾರರು ತಿಳಿಸಿದ್ದಾರೆ.
ಪಿಎಸ್‌ಎಲ್‌ಗೆ ಡೇವಿಡ್ ವಾರ್ನರ್ ಮರಳುತ್ತಾರಾ?
ಡೇವಿಡ್ ವಾರ್ನರ್‌ಗೆ ಸಂಬಂಧಿತ ಈ ಘಟನೆಯಿಂದ ಪಾಕಿಸ್ತಾನ ಸೂಪರ್ ಲೀಗ್ ನಿರ್ಣಾಯಕ ಹಂತ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕರಾಚಿ ಕಿಂಗ್ಸ್ ಶಿಬಿರದಲ್ಲಿ ಆತಂಕ ಹುಟ್ಟಿಸಿದೆ. ಆದಾಗ್ಯೂ, ವರದಿಗಳ ಪ್ರಕಾರ ಟೂರ್ನಿಯ ಇನ್ನುಳಿದ ಭಾಗದಲ್ಲಿ ವಾರ್ನರ್ ಅವರ ಭಾಗವಹಿಸುವಿಕೆ ತಕ್ಷಣದ ಮಟ್ಟದಲ್ಲಿ ಅಪಾಯದಲ್ಲಿಲ್ಲ.
IPL 2026: ಟಿಮ್ ಡೇವಿಡ್ ಅಬ್ಬರಕ್ಕೆ ಕೊಚ್ಚಿಹೋದ ಸಿಎಸ್‌ಕೆ, ಆರ್‌ಸಿಬಿಗೆ ಭರ್ಜರಿ ಜಯ!
ಆಸ್ಟ್ರೇಲಿಯಾದ ಕಾನೂನು ಪ್ರಕಾರ, ಮಧ್ಯಮ ಮಟ್ಟದ ಮದ್ಯಪಾನ ಚಾಲನೆ (drink-driving) ಆರೋಪ ಸಾಮಾನ್ಯವಾಗಿ ಪ್ರಯಾಣ ನಿಷೇಧ ಅಥವಾ ಪಾಸ್‌ಪೋರ್ಟ್ ವಶಪಡಿಸಿಕೊಳ್ಳುವಂತಹ ಕ್ರಮಗಳಿಗೆ ಕಾರಣವಾಗುವುದಿಲ್ಲ. ಆದರೆ, ವ್ಯಕ್ತಿ ಪರಾರಿಯಾಗುವ ಅಪಾಯ ಹೆಚ್ಚಿದೆ ಎಂದು ಕಂಡುಬಂದರೆ ಅಥವಾ ಪ್ರಕರಣದಲ್ಲಿ ಗಂಭೀರ ಅಂಶಗಳಿದ್ದರೆ ಮಾತ್ರ ಇಂತಹ ಕ್ರಮ ಕೈಗೊಳ್ಳಲಾಗುತ್ತದೆ. ವಾರ್ನರ್ ಮೇಲೆ ಯಾವುದೇ ಕಠಿಣ ಜಾಮೀನು ಷರತ್ತುಗಳನ್ನು ವಿಧಿಸದಿರುವುದರಿಂದ, ಅವರಿಗೆ ಆಸ್ಟ್ರೇಲಿಯಾವನ್ನು ತೊರೆಯಲು ಸ್ವಾತಂತ್ರ್ಯವಿದೆ.