ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಪಂಜಾಬ್ ಕಿಂಗ್ಸ್ ಹೆಡ್ ಕೋಚ್ ರಿಕಿ ಪಾಂಟಿಂಗ್ (Ricky Ponting) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಂದ ಹಾಗೆ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ದುಬಾರಿ ಮೊತ್ತಕ್ಕೆ ಖರೀದಿಸಲು ಇದೇ ಪ್ರಮುಖ ಕಾರಣ ಎಂದು ಅವರು ರಿವೀಲ್ ಮಾಡಿದ್ದಾರೆ. ಶನಿವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ 265 ರನ್‌ಗಳ ಗುರಿಯನ್ನು ಪಂಜಾಬ್ ಕಿಂಗ್ಸ್ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ತಲುಪಿ ದಾಖಲೆ ಬರೆದಿತ್ತು.
ಪಂದ್ಯದ ಬಳಿಕ ಮಾತನಾಡಿದ ರಿಕಿ ಪಾಂಟಿಂಗ್, ಶ್ರೇಯಸ್ ಅಯ್ಯರ್ ಅವರ ವ್ಯಕ್ತಿತ್ವ ಮತ್ತು ಚೇಸ್‌ಗಳನ್ನು ಯಶಸ್ವಿಯಾಗಿ ಮುಗಿಸುವ ಅವರ ಸಾಮರ್ಥ್ಯವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು.
“ಅವರು ಒಬ್ಬ ಅದ್ಭುತ ವ್ಯಕ್ತಿ ಮತ್ತು ಅದೇ ಕಾರಣಕ್ಕೆ ಹರಾಜಿನಲ್ಲಿ ಅವರನ್ನು ಪಡೆಯಲು ನಾನು ತುಂಬಾ ಪ್ರಯತ್ನಿಸಿದ್ದೆ. ನಾವು ಈ ತಂಡ ಮತ್ತು ಫ್ರಾಂಚೈಸಿಯನ್ನು ಪುನರ್‌ನಿರ್ಮಿಸಲು ನೋಡುತ್ತಿರುವಾಗ, ಅವರು ನಮಗೆ ಉತ್ತಮ ನಾಯಕನಾಗುತ್ತಾರೆ ಎಂದು ನನಗೆ ಗೊತ್ತಿತ್ತು,” ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.
DC vs PBKS: ಕೆಎಲ್ ರಾಹುಲ್ ಶತಕ ವ್ಯರ್ಥ, ಹೈಸ್ಕೋರಿಂಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ಗೆ 6 ವಿಕೆಟ್ ರೋಚಕ ಜಯ!
“ಒಂದು ವಿಷಯ ನನಗೆ ಖಚಿತ — ರನ್ ಚೇಸ್ ವೇಳೆ ಅವರು ಕೊನೆಯವರೆಗೂ ಕ್ರೀಸ್‌ನಲ್ಲಿ ಇದ್ದರೆ, ನಾವು ಹೆಚ್ಚು ಪಂದ್ಯಗಳನ್ನು ಸೋಲುವುದಿಲ್ಲ. ಇಂದೂ ಕೂಡ, ನಾನು ಸುಮಾರು 11ನೇ ಅಥವಾ 12ನೇ ಓವರ್ ವೇಳೆಗೆ ಮೈದಾನಕ್ಕೆ ಹೋಗಿ, ಅವರ ಬಳಿ ‘ನೀವು ಕೊನೆಯವರೆಗೂ ಇದ್ದರೆ, ನಾವು ಈ ಪಂದ್ಯವನ್ನು ಗೆಲ್ಲುತ್ತೇವೆ’ ಎಂದು ಹೇಳಿದ್ದೆ. ಅವರು ಮತ್ತೆ ಅದನ್ನೇ ಮಾಡಿದ್ದಾರೆ. ಈ ಪಂದ್ಯದ ಗೆಲುವಿನ ಶ್ರೇಯ ಅವರಿಗೆ ಸಲ್ಲಬೇಕು. ಹಾಗೆಯೇ ಅವರ ಮೇಲೆ ನಂಬಿಕೆ ಇಟ್ಟ ಎಲ್ಲಾ ಆಟಗಾರರಿಗೂ ಶ್ರೇಯ ಸಲ್ಲಬೇಕು,” ಎಂದು ಅವರು ಹೊಗಳಿದ್ದಾರೆ.
ದಾಖಲೆಯ ರನ್ ಚೇಸ್ ಮಾಡಿ ಗೆದ್ದ ಪಂಜಾಬ್ ಕಿಂಗ್ಸ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಕೆಎಲ್ ರಾಹುಲ್ (152 ರನ್) ಅವರ ದಾಖಲೆಯ ಶತಕ ಹಾಗೂ ನಿತೀಶ್ ರಾಣಾ (91 ರನ್) ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 264 ರನ್‌ಗಳನ್ನು ಕಲೆ ಹಾಕಿತ್ತು. ಆದರೂ ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್‌ಗಳು ಇನಿಂಗ್ಸ್ ಬೇಕ್ ವೇಳೆ ವಿಶ್ವಾಸವನ್ನು ಕಳೆದುಕೊಳ್ಳುವ ರೀತಿ ಕಾಣಲಿಲ್ಲ.
ಅಗ್ರಸ್ಥಾನ ಉಳಿಸಿಕೊಂಡ ಪಂಜಾಬ್, ಮೂರಕ್ಕೇರಿದ ಸನ್‌ರೈಸಸರ್ಸ್
ಪಂಜಾಬ್ ಪರ ಇನಿಂಗ್ಸ್ ಆರಂಭಿಸಿದ ಪ್ರಿಯಾಂಶ್ ಆರ್ಯ (43 ರನ್) ಹಾಗೂ ಪ್ರಭ್ ಸಿಮ್ರಾನ್‌ಸಿಂಗ್ (76 ರನ್) ಅವರು ಮುರಿಯದ ಮೊದಲನೇ ವಿಕೆಟ್‌ಗೆ 6.5 ಓವರ್‌ಗಳಿಗೆ 126 ರನ್‌ಗಳನ್ನು ಕಲೆ ಹಾಕಿತು. ತಮ್ಮ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿತು. ಪ್ರಿಯಾಂಶ್ ಬೇಗ ವಿಕೆಟ್ ಒಪ್ಪಿಸಿದರೂ, ಪ್ರಭ್ ಸಿಮ್ರಾನ್ ಸಿಂಗ್ ಹೆಚ್ಚು ಹೊತ್ತು ಬ್ಯಾಟ್ ಮಾಡಿ ಪಂಜಾಬ್ ತಂಡವನ್ನು ಗೆಲ್ಲುವ ಹಾದಿಯಲ್ಲಿಟ್ಟಿದ್ದರು. ಸಿಮ್ರಾನ್‌ಸಿಂಗ್ ಔಟ್ ಆದ ಬಳಿಕ ಶ್ರೇಯಸ್ ಅಯ್ಯರ್ ಅವರು 36 ಎಸೆತಗಳಲ್ಲಿ ಅಜೇಯ 71 ರನ್ ಸಿಡಿಸಿ ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ಗೆಲ್ಲಿಸಿದರು.