ವಡೋದರಾ: ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL 2026) ಮತ್ತೊಮ್ಮೆ ಫೈನಲ್ ತಲುಪಿದೆ. ಲೀಗ್‌ನ ಮೊದಲ ಮೂರು ಋತುಗಳಲ್ಲಿ ಡೆಲ್ಲಿ ತಂಡ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಫೈನಲ್ ತಲುಪಿದೆ. ಈ ಬಾರಿ, ಎಲಿಮಿನೇಟರ್ ಅನ್ನು ಗೆಲ್ಲುವ ಮೂಲಕ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ದೆಹಲಿ ತಂಡವು ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧದ ಎಲಿಮಿನೇಟರ್ ಅನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಜೆಮಿಮಾ ರೊಡ್ರಿಗಸ್ ನಾಯಕತ್ವದ ಡೆಲ್ಲಿ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಫೆಬ್ರವರಿ 5 ರಂದು ನಡೆಯಲಿದೆ.
ಬುಧವಾರ ಇಲ್ಲಿನ ಬಿಸಿಐ ಕ್ರೀಡಾಂಗಣದಲ್ಲಿ ನಡೆದಿದ್ದ ಎಲಿಮಿನೇಟರ್ ಪಂದ್ಯದಲಿ ಡೆಲ್ಲಿ ನಾಯಕಿ ಜೆಮಿಮಾ ರೊಡ್ರಿಗಸ್ ಟಾಸ್ ಗೆದ್ದು ಮೊದಲು ಬೌಲ್ ಮಾಡಲು ಆಯ್ಕೆ ಮಾಡಿಕೊಂಡರು. ಗುಜರಾತ್ ಜಯಂಟ್ಸ್ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿತು. ಡೆಲ್ಲಿ ತಂಡವು ಸ್ಫೋಟಕ ಬ್ಯಾಟಿಂಗ್ ಮೂಲಕ ಪ್ರತಿಕ್ರಿಯಿಸಿ 16ನೇ ಓವರ್‌ನಲ್ಲಿ ಗುರಿಯನ್ನು ತಲುಪಿತು. ಆ ಮೂಲಕ ಡೆಲ್ಲಿ ನಾಲ್ಕನೇ ಬಾರಿ ಫೈನಲ್ ತಲುಪಿದ್ದರೂ, ತಂಡವು ಇನ್ನೂ ಲೀಗ್ ಪ್ರಶಸ್ತಿಯನ್ನು ಗೆದ್ದಿಲ್ಲ. ಹಿಂದಿನ ಮೂರು ಫೈನಲ್‌ಗಳಲ್ಲಿ ಸೋತಿತ್ತು.
ಬೆಥ್ ಮೂನಿ ಅಜೇಯ ಅರ್ಧಶತಕ
ಗುಜರಾತ್ ತಂಡ ಕಳಪೆ ಆರಂಭವನ್ನು ಪಡೆಯಿತು. ಈ ತಂಡ 59 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು, ಆದರೆ ಆರಂಭಿಕ ಆಟಗಾರ್ತಿ ಬೆಥ್ ಮೂನಿ, ಜಾರ್ಜಿಯಾ ವೇರ್‌ಹ್ಯಾಮ್ ಜೊತೆ ಐದನೇ ವಿಕೆಟ್‌ಗೆ 61 ರನ್‌ಗಳ ಪಾಲುದಾರಿಕೆಯೊಂದಿಗೆ ಇನಿಂಗ್ಸ್ ಅನ್ನು ಸ್ಥಿರಗೊಳಿಸಿದರು. 25 ಎಸೆತಗಳಲ್ಲಿ 35 ರನ್ ಗಳಿಸಿದ ನಂತರ ವೇರ್‌ಹ್ಯಾಮ್ ನಿರ್ಗಮಿಸಿದರು, ಮೂನಿ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು 51 ಎಸೆತಗಳಲ್ಲಿ ಆರು ಬೌಂಡರಿಗಳು ಸೇರಿದಂತೆ ಅಜೇಯ 62 ರನ್ ಗಳಿಸಿದರು. ಕಾಶ್ವಿ ಗೌತಮ್ 10 ಎಸೆತಗಳಲ್ಲಿ ಮೂರು ಬೌಂಡರಿಗಳು ಸೇರಿದಂತೆ 18 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಚಿನೆಲ್ಲೆ ಹೆನ್ರಿ ಮೂರು ವಿಕೆಟ್ ಪಡೆದರೆ, ನಂದಿನಿ ಶರ್ಮಾ ಎರಡು ವಿಕೆಟ್ ಪಡೆದರು.
ಡೆಲಿ ಕ್ಯಾಪಿಟಲ್ಸ್‌ಗೆ ಭರ್ಜರಿ ಆರಂಭ
ಡೆಲ್ಲಿ ಕ್ಯಾಪಿಟಲ್ಸ್ ಪರ ಲಿಜೆಲ್ಲೆ ಲೀ ಮತ್ತು ಶಫಾಲಿ ವರ್ಮಾ ಭರ್ಜರಿ ಆರಂಭ ನೀಡಿದರು. ಆರಂಭಿಕ ಜೋಡಿ 7.1 ಓವರ್‌ಗಳಲ್ಲಿ 89 ರನ್ ಸೇರಿಸಿತು. ಲಿಜೆಲ್ಲೆ ಲೀ 24 ಎಸೆತಗಳಲ್ಲಿ 1 ಸಿಕ್ಸ್ ಮತ್ತು 8 ಬೌಂಡರಿ ಸೇರಿದಂತೆ 43 ರನ್ ಗಳಿಸಿ ಔಟಾದರು, ಆದರೆ ಶಫಾಲಿ 21 ಎಸೆತಗಳಲ್ಲಿ 7 ಬೌಂಡರಿ ಸೇರಿದಂತೆ 31 ರನ್ ಗಳಿಸಿದರು. ಕ್ಯಾಪಿಟಲ್ಸ್ ತಂಡವು ಆರಂಭಿಕ ಆಟಗಾರ್ತಿಯರಿಬ್ಬರನ್ನೂ 92 ರನ್‌ಗಳಿಗೆ ಕಳೆದುಕೊಂಡಿತು. ಅಲ್ಲಿಂದ ನಾಯಕಿ ಜೆಮಿಮಾ ರೊಡ್ರಿಗಸ್, ಲಾರಾ ವೋಲ್ವಾರ್ಡ್ಟ್ ಅವರೊಂದಿಗೆ 41 ಎಸೆತಗಳಲ್ಲಿ ಮೂರನೇ ವಿಕೆಟ್‌ಗೆ 68 ರನ್ ಸೇರಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
ಜೆಮಿಮಾ 23 ಎಸೆತಗಳಲ್ಲಿ ಒಂದು ಸಿಕ್ಸ್ ಮತ್ತು 4 ಬೌಂಡರಿ ಸೇರಿದಂತೆ 41 ರನ್ ಗಳಿಸಿದರು, ಆದರೆ ಲಾರಾ 24 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 32 ರನ್ ಗಳಿಸಿ ಅಜೇಯರಾಗಿ ಉಳಿದರು. ಜಾರ್ಜಿಯಾ 2 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ ಒಂದು ವಿಕೆಟ್ ಪಡೆದರು. ಗುಜರಾತ್ ಎಕ್ಸ್‌ಟ್ರಾ ಆಗಿ 18 ರನ್ ಬಿಟ್ಟುಕೊಟ್ಟಿತು.