ನವದೆಹಲಿ: ಮುಂಬರುವ 2027ರ ಮಹಿಳಾ ಪ್ರೀಮಿಯರ್ ಲೀಗ್ (WPL 2027) ಟೂರ್ನಿಯ ನಿಮಿತ್ತ ಶ್ರೀಲಂಕಾ ಮಾಜಿ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ಹೆಡ್ ಕೋಚ್ ಮಹೇಲಾ ಜಯವರ್ಧನೆ (Mahela Jayawardene) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೂತನ ಕ್ರಿಕೆಟ್ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಆ ಮೂಲಕ ನಾಲ್ಕು ಬಾರಿ ರನ್ನರ್ ಅಪ್ ಆಗಿ ಚೊಚ್ಚಲ ಕಪ್ಗಾಗಿ ಎದುರು ನೋಡುತ್ತಿರುವ ತಂಡದಲ್ಲಿ ಕ್ರಿಕೆಟ್ ಕಾರ್ಯಾಚರಣೆಗಳನ್ನು ಅವರು ನೋಡಿಕೊಳ್ಳಲಿದ್ದಾರೆ.
ತಂಡದ ಕಾರ್ಯತಂತ್ರ ರೂಪಿಸುವುದು, ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯ ಅಭಿವೃದ್ಧಿಯ ಮೇಲ್ವಿಚಾರಣೆ ಮಾಡುವುದು ಜಯವರ್ಧನೆ ಅವರ ಪ್ರಮುಖ ಜವಾಬ್ದಾರಿಗಳಾಗಿವೆ. ಅವರು ಮುಖ್ಯ ಕೋಚ್ ಜೊನಾಥನ್ ಬ್ಯಾಟಿ ಮತ್ತು ನಾಯಕಿ ಜೆಮಿಮಾ ರೋಡ್ರಿಗಸ್ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಜನವರಿ 14ರಿಂದ ಆರಂಭವಾಗಲಿರುವ ಮುಂದಿನ WPL ಟೂರ್ನಿಗೆ ತಂಡವನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಈ ನೇಮಕಾತಿಯೊಂದಿಗೆ ಒಂದು ದಶಕಕ್ಕೂ ಹೆಚ್ಚು ಸಮಯದ ಬಳಿಕ ಜಯವರ್ಧನೆ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಡಳಿತಕ್ಕೆ ಮರಳಿದ್ದಾರೆ. ಈ ಹಿಂದೆ 2012 ಮತ್ತು 2013ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳಲ್ಲಿ ಅವರು ಡೆಲ್ಲಿ ಡೇರ್ಡೆವಿಲ್ಸ್ ಪರ ಆಟಗಾರನಾಗಿ ಆಡಿದ್ದರು. 2013ರ ಆವೃತ್ತಿಯಲ್ಲಿ ತಂಡದ ನಾಯಕತ್ವವನ್ನೂ ವಹಿಸಿದ್ದರು.
ಕುತೂಹಲಕಾರಿ ಸಂಗತಿಯೆಂದರೆ, ಕಳೆದ ತಿಂಗಳಷ್ಟೇ ಮುಂಬೈ ಇಂಡಿಯನ್ಸ್ ತಂಡ ಜಯವರ್ಧನೆ ಅವರೊಂದಿಗಿನ ಒಪ್ಪಂದವನ್ನು ಅಂತ್ಯಗೊಳಿಸಿತ್ತು. 2017, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಜಯವರ್ಧನೆ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಅವರು ತಂಡದ ಕ್ರಿಕೆಟ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಮಾರ್ಕ್ ಬೌಷರ್ ನಿರ್ಗಮನದ ನಂತರ ಮತ್ತೆ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸುವ ಗುರಿ: ಜಯವರ್ಧನೆ
ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡದ ಹೊಸ ಜವಾಬ್ದಾರಿ ಕುರಿತು ಮಾತನಾಡಿದ ಜಯವರ್ಧನೆ, ತಂಡದೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.
“ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನದೇ ಆದ ಬಲವಾದ ಗುರುತನ್ನು ಹೊಂದಿದ್ದು, ಮಹಿಳಾ ಕ್ರಿಕೆಟ್ನ ಭವಿಷ್ಯದ ಬಗ್ಗೆ ಉತ್ತಮ ದೃಷ್ಟಿಕೋನ ಹೊಂದಿದೆ. WPL ತಂಡದ ಕ್ರಿಕೆಟ್ ನಿರ್ದೇಶಕರ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದಕ್ಕೆ ಸಂತೋಷವಾಗಿದೆ. ಮಹಿಳಾ ಕ್ರಿಕೆಟ್ನ ಭವಿಷ್ಯವನ್ನು ರೂಪಿಸುವಲ್ಲಿ ಈ ಟೂರ್ನಿಗೆ ಅಪಾರ ಸಾಮರ್ಥ್ಯವಿದೆ. ಪ್ರತಿಭಾವಂತ ಆಟಗಾರರು ಮತ್ತು ಅನುಭವಿ ಸಹಾಯಕ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ."
"ತಂಡದ ಈಗಿರುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದು, ಪ್ರದರ್ಶನದಲ್ಲಿ ಸ್ಥಿರತೆ ತರುವುದು ಮತ್ತು ಪ್ರಶಸ್ತಿಗಾಗಿ ಪೈಪೋಟಿ ನಡೆಸುವಂತೆ ತಂಡವನ್ನು ಅಭಿವೃದ್ಧಿಪಡಿಸುವುದು ನನ್ನ ಪ್ರಮುಖ ಗುರಿಯಾಗಿದೆ. ಒಟ್ಟಾಗಿ ನಾವು ಏನೆಲ್ಲ ಸಾಧಿಸಬಹುದು ಎಂಬ ಕುತೂಹಲವಿದೆ,” ಎಂದು ಜಯವರ್ಧನೆ ಹೇಳಿದ್ದಾರೆ.
ಇನ್ನು ಜಯವರ್ಧನೆ ಅವರು GMR ತಂಡಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಸ್ಪಷ್ಟಪಡಿಸಿದೆ. ಹೀಗಾಗಿ 2027 ಮತ್ತು 2028ರ WPL ಆವೃತ್ತಿಗಳಲ್ಲಿ ಮಾತ್ರ ಅವರು ಮಹಿಳಾ ತಂಡದ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಒಪ್ಪಂದ ವಿಸ್ತರಣೆಯಾದರೆ, JSW ಜೊತೆಗಿನ ಎರಡು ವರ್ಷಗಳ ಅವಧಿ ಮುಗಿದ ಬಳಿಕ 2029ರಲ್ಲಿ ಅವರು ಮತ್ತೆ ಐಪಿಎಲ್ ತಂಡದ ಜವಾಬ್ದಾರಿಗೆ ಮರಳುವ ಸಾಧ್ಯತೆಯಿದೆ.