ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2027: ಮಿನಿ ಹರಾಜಿಗೆ ಬಿಡುಗಡೆಯಾದ ಟಾಪ್‌ 10 ಸ್ಟಾರ್‌ ಆಟಗಾರರ ವಿವರ!

2027ರ ಐಪಿಎಲ್ ರಿಟೆನ್ಷನ್ ಪಟ್ಟಿ ನವೆಂಬರ್‌ 17 ರಂದು ಪ್ರಕಟವಾಗಿದ್ದು, ಗುಜರಾತ್ ಟೈಟನ್ಸ್ 22 ಆಟಗಾರರನ್ನು ಉಳಿಸಿಕೊಂಡಿದೆ. ಕೆಕೆಆರ್, ಮುಂಬೈ ಸೇರಿದಂತೆ ಹಲವು ತಂಡಗಳು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿವೆ. ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಸೇರಿದಂತೆ ಹಲವು ಆಟಗಾರರ ಟ್ರೇಡ್ ಕೂಡ ನಡೆದಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು ನಡೆಯಲಿದೆ.

ಮಿನಿ ಹರಾಜಿಗೆ ರಿಲೀಸ್‌ ಆದ ಟಾಪ್‌ 10 ಸ್ಟಾರ್‌ ಆಟಗಾರರು.

ನವದೆಹಲಿ: ಮುಂಬರುವ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ತಂಡಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ಮಿನಿ ಹರಾಜಿಗೆ ಬಿಡುಗಡೆ ಮಾಡಿವೆ. 10 ಐಪಿಎಲ್ ತಂಡಗಳ ಪೈಕಿ ಗುಜರಾತ್ ಟೈಟನ್ಸ್ ಅತಿ ಹೆಚ್ಚು ಆಟಗಾರರನ್ನು ಉಳಿಸಿಕೊಂಡಿದ್ದು, ಒಟ್ಟು 22 ಆಟಗಾರರಿಗೆ ಮಣೆ ಹಾಕಿದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ 16 ಆಟಗಾರರನ್ನು ಮಾತ್ರ ಉಳಿಸಿಕೊಂಡಿವೆ.

ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಒಟ್ಟು 12 ಆಟಗಾರರನ್ನು ಬಿಡುಗಡೆ ಮಾಡಿದೆ. ಈ ಪೈಕಿ ಶ್ರೀಲಂಕಾದ ವೇಗದ ಬೌಲರ್ ಮಥೀಶ ಪತಿರಣ (18 ಕೋಟಿ ರು) ಪ್ರಮುಖರಾಗಿದ್ದಾರೆ. ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ, ಮುಸ್ತಫಿಝುರ್ ರಹಮಾನ್ (9.2 ಕೋಟಿ ರು) ಹಾಗೂ ರಚಿನ್ ರವೀಂದ್ರ ಕೂಡ ತಂಡದಿಂದ ಹೊರಬಿದ್ದಿದ್ದಾರೆ.

ಮುಂಬೈ ಇಂಡಿಯನ್ಸ್ ಕೂಡ 13 ಆಟಗಾರರಿಗೆ ಗೇಟ್‌ಪಾಸ್ ನೀಡಿದೆ. ವೇಗದ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್ (12.5 ಕೋಟಿ) ಮತ್ತು ದೀಪಕ್ ಚಹರ್ (9.25 ಕೋಟಿ ರು) ಕೂಡ ಬಿಡುಗಡೆಯಾಗಿದ್ದಾರೆ. ಈ ಇಬ್ಬರ ಬಿಡುಗಡೆಯಿಂದ ಮುಂಬೈ ತಂಡಕ್ಕೆ ಒಟ್ಟು 21.75 ಕೋಟಿ ರು ಹಣ ಉಳಿದಿದೆ.

IPL 2027 Retention: ಟ್ರಾವಿಸ್‌ ಹೆಡ್‌, ಧೋನಿ ಸೇರಿದಂತೆ ಹಲವು ಸ್ಟಾರ್‌ಗಳಿಗೆ ಕೊಕ್‌, ಎಲ್ಲಾ 10 ತಂಡಗಳಿಂದ ರಿಲೀಸ್‌ ಆಟಗಾರರ ವಿವರ!

ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಟ್ರಾವಿಸ್ ಹೆಡ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮಿಚೆಲ್ ಸ್ಟಾರ್ಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬಿಡುಗಡೆ ಮಾಡಿವೆ. ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ 2027ರ ಐಪಿಎಲ್ ಆವೃತ್ತಿಗೂ ಮುನ್ನ ಆಟಗಾರನಾಗಿ ಟೂರ್ನಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

2026ರ ಐಪಿಎಲ್ ಪ್ರಶಸ್ತಿಯನ್ನು ಸತತ ಎರಡನೇ ಬಾರಿಗೆ ಗೆದ್ದಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಆವೃತ್ತಿಯ ತಂಡದಿಂದ ಒಟ್ಟು 20 ಆಟಗಾರರನ್ನು ಉಳಿಸಿಕೊಂಡಿದೆ. ಇಂಗ್ಲೆಂಡ್‌ನ ಆಲ್‌ರೌಂಡರ್ ಜೇಕಬ್ ಬೆಥೆಲ್ ಅವರನ್ನು ಆರ್‌ಸಿಬಿ ಬಿಡುಗಡೆ ಮಾಡಿದೆ.

ಮೆಗಾ ಹರಾಜಿಗೂ ಮುನ್ನ ನಡೆಯುವ ರಿಟೆನ್ಷನ್ ಪ್ರಕ್ರಿಯೆಯಲ್ಲಿ ತಂಡಗಳು ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡಿ ಹೊಸ ತಂಡವನ್ನು ಕಟ್ಟಬೇಕಾಗುತ್ತದೆ. ಆದರೆ ಮಿನಿ ಹರಾಜಿಗೂ ಮುನ್ನ ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶವಿರುತ್ತದೆ. ಇದಕ್ಕೆ ಸಂಬಳದ ಮಿತಿ ಹಾಗೂ ತಂಡದ ಆಟಗಾರರ ಸಂಖ್ಯೆಗೆ ಸಂಬಂಧಿಸಿದ ನಿಯಮಗಳು ಅನ್ವಯವಾಗುತ್ತವೆ.

IPL 2027: ಎಲ್ಲಾ 10 ತಂಡಗಳು ಉಳಿಸಿಕೊಂಡ ಆಟಗಾರರ ವಿವರ!

2027ರ ಐಪಿಎಲ್‌ಗೆ ಪ್ರತಿ ಫ್ರಾಂಚೈಸಿಯ ಒಟ್ಟು ವೇತನ ಮಿತಿ 157 ಕೋಟಿ ರು ಆಗಿದೆ. ಪ್ರತಿ ತಂಡದಲ್ಲಿ ಕನಿಷ್ಠ 18ರಿಂದ ಗರಿಷ್ಠ 25 ಆಟಗಾರರು ಇರಬಹುದು. ಈ ಪೈಕಿ ಗರಿಷ್ಠ 8 ವಿದೇಶಿ ಆಟಗಾರರಿಗೆ ಅವಕಾಶವಿದೆ. ಐಪಿಎಲ್ 2027ರ ಆಟಗಾರರ ಮಿನಿ ಹರಾಜು ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿದೆ.

2027ರ ಐಪಿಎಲ್‌ ಮಿನಿ ಹರಾಜಿಗೆ ರಿಲೀಸ್‌ ಆದ ಸ್ಟಾರ್‌ ಆಟಗಾರರು

  1. ಮತೀಶ ಪತಿರಣ: ಕೋಲ್ಕತಾ ನೈಟ್‌ ರೈಡರ್ಸ್‌, 18 ಕೋಟಿ ರು
  2. ಪ್ರಶಾಂತ್‌ ವೀರ್‌: ಚೆನ್ನೈ ಸೂಪರ್‌ ಕಿಂಗ್ಸ್‌, 14.2 ಕೋಟಿ ರು.
  3. ಟ್ರಾವಿಸ್‌ ಹೆಡ್‌: ಸನ್‌ರೈಸರ್ಸ್‌ ಹೈದರಾಬಾದ್‌, 14 ಕೋಟಿ ರು.
  4. ಟ್ರೆಂಟ್‌ ಬೌಲ್ಟ್‌: ಮುಂಬೈ ಇಂಡಿಯನ್ಸ್‌, 12,5 ಕೋಟಿ ರು.
  5. ಮಿಚೆಲ್‌ ಸ್ಟಾರ್ಕ್‌: ಡೆಲ್ಲಿ ಕ್ಯಾಪಿಟಲ್ಸ್‌, 11.75 ಕೋಟಿ ರು.
  6. ಶಿಮ್ರಾನ್‌ ಹೆಟ್ಮಾಯೆರ್‌: ರಾಜಸ್ಥಾನ್‌ ರಾಯಲ್ಸ್‌, 11 ಕೋಟಿ ರು.
  7. ಆವೇಶ್‌ ಖಾನ್‌: ಲಖನೌ ಸೂಪರ್‌ ಜಯಂಟ್ಸ್‌, 9.75 ಕೋಟಿ ರು
  8. ದೀಪಕ್‌ ಚಹರ್‌: ಮುಂಬೈ ಇಂಡಿಯನ್ಸ್‌, 9.25 ಕೋಟಿ ರು.
  9. ಮುಷ್ತಾಫಿಝುರ್‌ ರೆಹಮಾನ್‌: ಕೋಲ್ಕತಾ ನೈಟ್‌ ರೈಡರ್ಸ್‌, 9.2 ಕೋಟಿ ರು
  10. ತುಷಾರ್‌ ದೇಶ್‌ಪಾಂಡೆ: ರಾಜಸ್ಥಾನ್‌ ರಾಯಲ್ಸ್‌, 6.5 ಕೋಟಿ ರು.