ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

VHT 2025-26: ಇತಿಹಾಸ ಬರೆದ ದೇವದತ್‌ ಪಡಿಕ್ಕಲ್‌; ಮುಂಬೈ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಕರ್ನಾಟಕ!

ಮುಂಬೈ ವಿರುದ್ಧದ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಕರ್ನಾಟಕ ತಂಡದ ಆರಂಭಿಕ ದೇವದತ್‌ ಪಡಿಕ್ಕಲ್‌ ಅಜೇಯ 81 ರನ್‌ಗಳನ್ನು ಗಳಿಸಿದರು. ಆ ಮೂಲಕ ಕರ್ನಾಟಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಈ ಅರ್ಧಶತಕದ ಮೂಲಕ ಆರಂಭಿಕ ಬ್ಯಾಟ್ಸ್‌ಮನ್‌ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಅಪರೂಪದ ದಾಖಲೆಯನ್ನು ಬರೆದಿದ್ದಾರೆ.

700ಕ್ಕೂ ಅಧಿಕ ರನ್‌ ಗಳಿಸಿ ವಿಶೇಷ ದಾಖಲೆ ಬರೆದ ದೇವದತ್‌ ಪಡಿಕ್ಕಲ್.

ಬೆಂಗಳೂರು: ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ (Devdutt Padikkal) ಅವರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದ ಸಹಾಯದಿಂದ ಕರ್ನಾಟಕ (Karnataka) ತಂಡ, 2025-26ರ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮುಂಬೈ ವಿರುದ್ಧ 55 ರನ್‌ಗಳಿಂದ (ವಿಜೆಡಿ ಮಾದರಿ) ಗೆದ್ದು ಬೀಗಿತು. ಆ ಮೂಲಕ ಈ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶ ಮಾಡಿತು. ಈ ಪಂದ್ಯದಲ್ಲಿ ಅದ್ಭುತ ಬ್ಯಾಟ್‌ ಮಾಡಿದ ದೇವದತ್‌ ಪಡಿಕ್ಕಲ್‌ ಪ್ರಸಕ್ತ ಟೂರ್ನಿಯಲ್ಲಿ 700ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದರು. ಇದರೊಂದಿಗೆ ಅವರು 50 ಓವರ್‌ಗಳ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ನಗರದ ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಮೈದಾನದಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ, ವಿದ್ಯಾಧರ್‌ ಪಾಟೀಲ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 50 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ ನಷ್ಟಕ್ಕೆ 254 ರನ್‌ಗಳನ್ನು ಕಲೆ ಹಾಕಿತು. ಮುಂಬೈ ಪರ ಸ್ಯಾಮ್ಸ್‌ ಮುಲಾನಿ 86 ರನ್‌ ಗಳಿಸಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

IND vs NZ: ವಾಷಿಂಗ್ಟನ್‌ ಸುಂದರ್‌ ಔಟ್‌, ಎರಡನೇ ಒಡಿಐಗೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

ಬಳಿಕ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡ, ಮಯಾಂಕ್‌ ಅಗರ್ವಾಲ್‌ ಅವರನ್ನು ಬಹುಬೇಗ ಕಳೆದುಕೊಂಡರೂ ದೇವದತ್‌ ಪಡಿಕ್ಕಲ್‌ ಹಾಗೂ ಕರುಣ್‌ ನಾಯರ್‌ ಅವರ ಅರ್ಧಶತಕಗಳ ಬಲದಿಂದ ಮಳೆ ಹಾಗೂ ಮಂದ ಬೆಳಕು ಆವರಿಸುವ ಹೊತ್ತಿಗೆ 33 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 187 ರನ್‌ಗಳನ್ನುಕಲೆ ಹಾಕಿತ್ತು. ಬಳಿಕ ಅಂಪೈರ್‌ಗಳ ವಿಜೆಡಿ ಮಾದರಿಯ ಪ್ರಕಾರ ಕರ್ನಾಟಕ ತಂಡಕ್ಕೆ 55 ರನ್‌ಗಳ ಗೆಲುವನ್ನು ಘೋಷಿಸಿದರು.



ವಿಶೇಷ ದಾಖಲೆ ಬರೆದ ದೇವದತ್‌ ಪಡಿಕ್ಕಲ್‌

ಭರ್ಜರಿ ಬ್ಯಾಟ್‌ ಮಾಡಿದ ಕರುಣ್‌ ನಾಯರ್‌ 80 ಎಸೆತಗಳಲ್ಲಿ 74 ರನ್‌ ಗಳಿಸಿದರೆ, ದೇವದತ್‌ ಪಡಿಕ್ಕಲ್‌ 95 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅಜೇಯ 81 ರನ್‌ ಗಳಿಸಿದರು. ಈ ಇನಿಂಗ್ಸ್‌ನ ಮೂಲಕ ಪಡಿಕ್ಕಲ್‌ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ 700 ಹೆಚ್ಚಿನ ರನ್‌ಗಳನ್ನು ಕಲೆ ಹಾಕಿದರು. ಇದರೊಂದಿಗೆ ಅವರು ಈ ಟೂರ್ನಿಯಲ್ಲಿ ಎರಡನೇ ಬಾರಿ 700ಕ್ಕೂ ಅಧಿಕ ರನ್‌ ಗಳಿಸಿದಂತಾಯಿತು. ಈ ದಾಖಲೆ ಬರೆದ ಮೊದಲ ಬ್ಯಾಟ್ಸ್‌ಮನ್‌ ಎಂಬ ಇತಿಹಾಸವನ್ನು ಕನ್ನಡಿಗ ನಿರ್ಮಿಸಿದರು.



ವಿಜಯ ಹಝಾರೆ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿ ಐವರು ಭಾರತೀಯ ಆಟಗಾರರು ಮಾತ್ರ ಏಕೈಕ ಆವೃತ್ತಿಯಲ್ಲಿ 700ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ. ಮಯಾಂಕ್‌ ಅಗರ್ವಾಲ್‌, ಪೃಥ್ವಿ ಶಾ, ದೇವದತ್‌ ಪಡಿಕ್ಕಲ್‌, ಎನ್‌ ಜಗದೀಶನ್‌ ಹಾಗೂ ಕರುಣ್‌ ನಾಯರ್‌ ಅವರು ಏಕೈಕ ಆವೃತ್ತಿಯಲ್ಲಿ ಒಮ್ಮ 700ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ.

ಈ ಸೀಸನ್‌ನಲ್ಲಿ ಇಲ್ಲಿಯವರೆಗೂ ದೇವದತ್‌ ಪಡಿಕ್ಕಲ್‌ ಅವರು ಆಡಿದ ಎಂಟು ಪಂದ್ಯಗಳಿಂದ 103ರ ಸರಾಸರಿ ಮತ್ತು 100.28ರ ಸ್ಟ್ರೈಕ್‌ ರೇಟ್‌ನಲ್ಲಿ 721 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಈ ಟೂರ್ನಿಯಲ್ಲಿ ಅಧಿಕ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇದರಲ್ಲಿ ಇವರು ನಾಲ್ಕು ಶತಕಗಳನ್ನು ಬಾರಿಸಿದ್ದಾರೆ.