ನವದೆಹಲಿ: ಶ್ರೇಯಸ್ ಅಯ್ಯರ್ (Shreyas Iyer) ಅವರ ನಾಯಕತ್ವದಲ್ಲಿ ಭಾರತ ತಂಡದ ಸೋಲಿನ ಸರಪಳಿ ಮುಂದುವರಿದಿದೆ. ಬ್ರಿಸ್ಟಲ್‌ನ ಕೌಂಟಿ ಗ್ರೌಂಡ್‌ನಲ್ಲಿ ಗುರುವಾರ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿಯೂ (IND vs ENG) ಟೀಮ್ ಇಂಡಿಯಾ 9 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಭಾರತ ತಂಡ ಟಿ20ಐ ಸರಣಿಯನ್ನು 0-3 ಅಂತರದಲ್ಲಿ ಕಳೆದುಕೊಂಡಿತು. ಇದರ ಬೆನ್ನಲ್ಲೆ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ಅವರು ಭಾರತ ತಂಡದ ವೈಫಲ್ಯದ ಬಗ್ಗೆ ಪ್ರತಿಕಿಯೆ ನೀಡಿದ್ದಾರೆ.
ಗುರುವಾರದ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳು ಅತ್ಯಂತ ಎಚ್ಚರಿಕೆಯ ಆಟವಾಡಿದರು ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ 49 ಎಸೆತಗಳಲ್ಲಿ ಅಜೇಯ 80 ರನ್‌ಗಳ ಹೋರಾಟದ ಇನಿಂಗ್ಸ್ ಆಡಿದರೂ, ಭಾರತ 7 ವಿಕೆಟ್ ನಷ್ಟಕ್ಕೆ ಕೇವಲ 158 ರನ್‌ಗಳ ಸಾಧಾರಣ ಮೊತ್ತವನ್ನಷ್ಟೇ ಕಲೆಹಾಕಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ಕೇವಲ 13.5 ಓವರ್‌ಗಳಲ್ಲಿ ಒಂದೇ ವಿಕೆಟ್ ಕಳೆದುಕೊಂಡು ಗುರಿ ತಲುಪಿ, 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಇದೇ ವೇಳೆ, ಶಾರ್ಟ್-ಪಿಚ್ ಎಸೆತಗಳ ವಿರುದ್ಧ ಭಾರತದ ಬ್ಯಾಟರ್‌ಗಳು ನಿರಂತರವಾಗಿ ಪರದಾಡುತ್ತಿರುವ ಅಂಶವನ್ನು ದಿನೇಶ್ ಕಾರ್ತಿಕ್ ಎತ್ತಿ ತೋರಿಸಿದರು.
ಶ್ರೇಯಸ್ ಏಕಾಂಗಿ ಹೋರಾಟ ವ್ಯರ್ಥ, ಇಂಗ್ಲೆಂಡ್ ಎದುರು ಟಿ20ಐ ಸರಣಿ ಕಳೆದುಕೊಂಡ ಭಾರತ!
"ಸರಣಿಯ ನಾಲ್ಕನೇ ಪಂದ್ಯ ಮುಗಿಯುವಷ್ಟರಲ್ಲೇ ಫಲಿತಾಂಶ 3-0 ಆಗಿದೆ. ಈ ಪಂದ್ಯದಲ್ಲಿ ಭಾರತ ತಂಡದ ಬ್ಯಾಟರ್‌ಗಳು ಅತ್ಯಂತ ಎಚ್ಚರಿಕೆಯ ಧೋರಣೆಯನ್ನು ಅನುಸರಿಸಿದಂತೆ ಕಂಡುಬಂತು. ಶ್ರೇಯಸ್ ಅಯ್ಯರ್ ಅವರೇ ಏಕಾಂಗಿಯಾಗಿ ಹೋರಾಡಿ ತಂಡದ ಮೊತ್ತವನ್ನು 159ಕ್ಕೆ ತಲುಪಿಸಿದರು. ಆದರೆ ಅದು ಈ ಪಿಚ್‌ನಲ್ಲಿ ಸಾಕಾಗದ ಮೊತ್ತವಾಗಿತ್ತು."
"ಇದಾದ ಬಳಿಕ ಹ್ಯಾರಿ ಬ್ರೂಕ್ ಮತ್ತು ಫಿಲ್ ಸಾಲ್ಟ್ ಭಾರತೀಯ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿ, ಇಂಗ್ಲೆಂಡ್‌ಗೆ ಯಾವುದೇ ಒತ್ತಡವಿಲ್ಲದೆ ಸುಲಭವಾಗಿ ಗೆಲುವು ತಂದುಕೊಟ್ಟರು. ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಇಂಗ್ಲೆಂಡ್‌ಗಿಂತ ಹಿಂದೆ ಬಿದ್ದಿತು. ಒಟ್ಟಾರೆ ಭಾರತ ಸಂಪೂರ್ಣವಾಗಿ ಮಣಿಯಿತು," ಎಂದು ದಿನೇಶ್ ಕಾರ್ತಿಕ್ ಕ್ರಿಕ್‌ಬಜ್‌ನಲ್ಲಿ ಹೇಳಿದ್ದಾರೆ.
"ಸ್ವಲ್ಪ ಹೆಚ್ಚುವರಿ ಬೌನ್ಸ್ ಇರುವ ಪಿಚ್‌ಗಳಿಗೆ ಭಾರತ ತಂಡ ಇನ್ನೂ ಸರಿಯಾಗಿ ಹೊಂದಿಕೊಳ್ಳಲು ಪರದಾಡುತ್ತಿದೆ ಎಂದು ನನಗನಿಸುತ್ತದೆ. ಸದ್ಯ ವೈಭವ್ ಸೂರ್ಯವಂಶಿ ವಿರುದ್ಧದ ಪೈಪೋಟಿಯಲ್ಲಿ ಜೋಫ್ರಾ ಆರ್ಚರ್ 2-0 ಮುನ್ನಡೆಯಲ್ಲಿದ್ದಾರೆ. ಇಶಾನ್ ಕಿಶನ್ ಕೂಡ ಸತತ ಎರಡನೇ ಪಂದ್ಯದಲ್ಲೂ ಅತಿಯಾದ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಪುಲ್ ಶಾಟ್ ಆಡಲು ಯತ್ನಿಸಿ ಮತ್ತೊಮ್ಮೆ ವಿಕೆಟ್ ಒಪ್ಪಿಸಿದರು. ಅಭಿಷೇಕ್ ಶರ್ಮಾ ಕೂಡ ಸ್ಪಿನ್ನರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಬಹುದಾದ ಪಿಚ್‌ನಲ್ಲಿ ಪುಲ್ ಶಾಟ್ ಆಡಬೇಕೋ ಬೇಡವೋ ಎಂಬ ಗೊಂದಲದಲ್ಲಿ ವಿಕೆಟ್ ಕಳೆದುಕೊಂಡರು," ಎಂದು ಹೇಳಿದರು.
ಗಂಭೀರ್‌ಗೆ ಸಂಕಷ್ಟ: ಲಕ್ಷ್ಮಣ್‌ರನ್ನು ಕೋಚ್ ಮಾಡುತ್ತಾ ಬಿಸಿಸಿಐ?
ಶ್ರೇಯಸ್ ಅಯ್ಯರ್ ಬ್ಯಾಟಿಂಗ್‌ಗೆ ಕಾರ್ತಿಕ್ ಮೆಚ್ಚುಗೆ
ಶ್ರೇಯಸ್ ಅಯ್ಯರ್ ಅವರ ಹೋರಾಟದ ಅರ್ಧಶತಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗದಿದ್ದರೂ, ಅವರ ಬ್ಯಾಟಿಂಗ್‌ನ್ನು ದಿನೇಶ್ ಕಾರ್ತಿಕ್ ಮೆಚ್ಚುಗೆ ವ್ಯಕ್ತಪಡಿಸಿದರು.
"ಈ ಪಂದ್ಯದಲ್ಲಿ ಭಾರತದ ಪರ ಏಕೈಕ ಆಶಾಕಿರಣ ನಾಯಕ ಶ್ರೇಯಸ್ ಅಯ್ಯರ್ ಮಾತ್ರ. ಅವರು ನಾಯಕನಾಗಿ ತಮ್ಮ ನಾಯಕತ್ವದ ಛಾಪು ಮೂಡಿಸಲು ಪ್ರಯತ್ನಿಸಿದಂತೆಯೇ ಕಂಡುಬಂತು. ಆದರೆ ಅವರ ಹೋರಾಟವೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಕಾಗಲಿಲ್ಲ. ಮೊದಲ ಏಳು ಓವರ್‌ಗಳಲ್ಲೇ ಭಾರತ ಮೂರು ವಿಕೆಟ್ ಕಳೆದುಕೊಂಡಿದ್ದರಿಂದ, ಶ್ರೇಯಸ್ ಜವಾಬ್ದಾರಿಯುತ ಹಾಗೂ ತಾಳ್ಮೆಯ ಇನಿಂಗ್ಸ್ ಕಟ್ಟಬೇಕಾದ ಪರಿಸ್ಥಿತಿ ಎದುರಾಯಿತು. ಅವರು ಅದನ್ನು ಅತ್ಯುತ್ತಮವಾಗಿ ನಿಭಾಯಿಸಿ ಅಂತಿಮವಾಗಿ ಅಜೇಯ 80 ರನ್ ಗಳಿಸಿದರು. ಅಯ್ಯರ್ ಆ ಇನಿಂಗ್ಸ್ ಆಡದೇ ಇದ್ದಿದ್ದರೆ, ಭಾರತ 130 ಅಥವಾ 140 ರನ್‌ಗಳಿಗೂ ಸೀಮಿತವಾಗುವ ಸಾಧ್ಯತೆ ಇತ್ತು."
"ಕಳೆದ ನಾಲ್ಕು ಪಂದ್ಯಗಳಿಂದ ಒತ್ತಡದಲ್ಲಿದ್ದ ನಾಯಕನೊಬ್ಬ ಇಂತಹ ಸಂದರ್ಭದಲ್ಲಿ 'ನಾನು ಬ್ಯಾಟರ್ ಆಗಿಯೂ ತಂಡಕ್ಕೆ ಕೊಡುಗೆ ನೀಡಬೇಕು' ಎಂಬ ಮನೋಭಾವದೊಂದಿಗೆ ಜವಾಬ್ದಾರಿ ಹೊತ್ತು ನಿಲ್ಲುವುದು ಅತ್ಯುತ್ತಮ ಗುಣ. ಅವರ ಈ ಧೋರಣೆ ನಿಜಕ್ಕೂ ಪ್ರಶಂಸನೀಯ," ಎಂದು ದಿನೇಶ್ ಕಾರ್ತಿಕ್ ಭಾರತೀಯ ನಾಯಕನನ್ನು ಶ್ಲಾಘಿಸಿದರು.