ನವದೆಹಲಿ: ಭಾರತ ತಂಡದ ಮಾಜಿ ವೇಗಿ ಎಸ್ ಶ್ರೀಶಾಂತ್ (S Sreeshanth) ಅವರು ತಮ್ಮ ಮಾಜಿ ಸಹ ಆಟಗಾರ ಹಾಗೂ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್‌ಗೆ (Harbhajan Singh) ಬಹಿರಂಗ ಸವಾಲು ಹಾಕಿದ್ದಾರೆ. ನಿಮಗೆ ಧೈರ್ಯವಿದ್ದರೆ, ಬಾಕ್ಸಿಂಗ್ ರಿಂಗ್‌ಗೆ ಬನ್ನಿ, ನಿಮ್ಮ ಮೇಲೆ ಫೈಟ್ ಮಾಡಲು ನಾನು ಸಿದ್ದನಿದ್ದೇನೆಂದು ಕೇರಳ ಮೂಲದ ಕ್ರಿಕೆಟಿಗ, ಮಾಜಿ ಸ್ಪಿನ್ನರ್‌ಗೆ ಆಹ್ವಾನ ನೀಡಿದ್ದಾರೆ. ಅಂದ ಹಾಗೆ ಶ್ರೀಶಾಂತ್ ಹಾಗೂ ಹರ್ಭಜನ್ ಸಿಂಗ್ ನಡುವೆ 2008ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಂದರ್ಭದಲ್ಲಿ ನಡೆದಿದ್ದ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
2008ರ ಉದ್ಘಾಟನಾ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎಸ್ ಶ್ರೀಶಾಂತ್ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಹಾಗೂ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಈ ಎರಡೂ ತಂಡಗಳ ನಡುವಣ ಪಂದ್ಯದ ಬಳಿಕ ಹರ್ಭಜನ್ ಸಿಂಗ್, ಶ್ರೀಶಾಂತ್‌ಗೆ ಕಪಾಳ ಮೋಕ್ಷ ಮಾಡಿದ್ದರು. ಇದರಿಂದಾಗಿ ಶ್ರೀಶಾಂತ್ ಅವರು ಕಣ್ಣಿರಿಟ್ಟಿದ್ದರು. ಈ ಘಟನೆಯು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆ ನಡೆದ ಹಲವು ದಿನಗಳ ಬಳಿಕ ಹರ್ಭಜನ್ ಸಿಂಗ್, ಶ್ರೀಶಾಂತ್ ಬಳಿ ಕ್ಷಮೆ ಕೇಳಿದ್ದರು.
ಸರಣಿ ಕ್ಲೀನ್ ಸ್ವೀಪ್ ಯೋಜನೆಯಲ್ಲಿ ಭಾರತ; ಆಫ್ಘಾನ್‌ಗೆ ವೈಟ್‌ವಾಶ್ ಭೀತಿ!
ಇದಾದ ಬಳಿಕ ಶ್ರೀಶಾಂತ್ ಕೂಡ ಹಲವು ಕಾರ್ಯಕ್ರಮಗಳಲ್ಲಿ ಹರ್ಭಜನ್ ಸಿಂಗ್ ತಮ್ಮ ಅಣ್ಣನಿದ್ದಂತೆ ಎಂದು ಕೂಡ ಹೇಳಿಕೆಯನ್ನು ನೀಡಿದ್ದರು. ಏನೇ ಹೇಳಿಕೆಗಳನ್ನು ನೀಡಿದರೂ ಶ್ರೀಶಾಂತ್ ಅವರ ಮನಸಿನಲ್ಲಿ ಭಜ್ಜಿ ಅವರ ಮೇಲಿನ ಅಸಮಾಧಾನ ಇದ್ದೇ ಇರುತ್ತದೆ. ಇದೀಗ ಅವರು ಮಾಜಿ ಸ್ಪಿನ್ನರ್‌ಗ ಬಹಿರಂಗವಾಗಿ ಸವಾಲು ಹಾಕಿದ್ದಾರೆ. ನಿಮಗೆ ಧೈರ್ಯವಿದ್ದರೆ ಬಾಕ್ಸಿಂಗ್ ರಿಂಗ್‌ಗೆ ಬನ್ನಿ ಎಂದು ಅವರು ಕೆಣಕಿದ್ದಾರೆ.
“ಇದೇ ದೃಶ್ಯ, ನಿಮಗೆ ಧೈರ್ಯ ಇದೆಯಾ? ನನ್ನೊಂದಿಗೆ ರಿಂಗ್‌ಗೆ ಬರಲು ಧೈರ್ಯ ಇದೆಯಾ? ಒಪ್ಪಂದಕ್ಕೆ ಸಹಿ ಹಾಕಿ ಬರಲು ಸಾಧ್ಯವೇ? ಸಾಧ್ಯವೇ? ನಾನು ಅವರನ್ನೇ ಕೇಳುತ್ತಿದ್ದೇನೆ. ನನ್ನೊಂದಿಗೆ ರಿಂಗ್‌ಗೆ ಇಳಿಯುವ ಧೈರ್ಯ ನಿಮಗಿದೆಯೇ? ಇದೇ ಗ್ಲೌಸ್‌ಗಳನ್ನು ಧರಿಸಿ ಬನ್ನಿ. ಇದು ಯಾವುದೇ ನಟನೆ ಅಲ್ಲ. ನಾನು ನಗುತ್ತಿದ್ದೇನೆ. ಆದರೆ ನೀವು ನಗುತ್ತಲೂ ಇಲ್ಲ, ಏನು ಮಾಡುತ್ತಿದ್ದೀರೋ ಗೊತ್ತಿಲ್ಲ. ನೋಡೋಣ. ಇದು ನನ್ನ ಬಹಿರಂಗ ಸವಾಲು,” ಎಂದು ಎಸ್ ಶ್ರೀಶಾಂತ್ ಹೇಳಿದ್ದಾರೆ.
“ನಾನು ಪ್ರಸ್ತುತ ಬೇರ್ ನಕಲ್ ಫೈಟ್ ಲೀಗ್‌ನಲ್ಲಿ ಇದ್ದೇನೆ. ಅಲ್ಲದೆ, ಕಾನರ್ ಮೆಗ್ರಾರ್ ಅವರ ವಿಡಿಯೊಗೆ ಪ್ರಮುಖ ಪ್ರಾಯೋಜಕರಲ್ಲಿ ಒಬ್ಬನಾಗಿದ್ದೇನೆ. ನನ್ನ ಆಪ್ತ ಸ್ನೇಹಿತರೊಬ್ಬರು ಕೂಡ ಅದಕ್ಕೆ ಪ್ರಾಯೋಜಕರಾಗಿದ್ದಾರೆ. ಹೀಗಾಗಿ ಪ್ರಚಾರದ ಕೆಲಸವೂ ನಡೆದಿದೆ. ಭಜ್ಜಿ (ಹರ್ಭಜನ್ ಸಿಂಗ್), ನಿಮಗೆ ನಾನು ಸವಾಲು ಹಾಕುತ್ತಿದ್ದೇನೆ,” ಎಂದು ಆಹ್ವಾನ ನೀಡಿದ್ದಾರೆ.
ICC ODI World Cup 2026: ಪಂತ್-ಕಿಶನ್ ನಡುವೆ ಸೂಕ್ತ ವಿಕೆಟ್ ಕೀಪರ್ ಅನ್ನು ಆರಿಸಿದ ಆರ್ ಅಶ್ವಿನ್!
2008ರ ಘಟನೆ ನೆನೆದ ಶ್ರೀಶಾಂತ್
"ಭಜ್ಜಿ, ನಾನು ನಿಮಗೆ ಸವಾಲು ಹಾಕುತ್ತಿದ್ದೇನೆ. ಆ ‘ಸ್ಲ್ಯಾಪ್’ ಘಟನೆ ಮತ್ತು ನನ್ನ ಬಗ್ಗೆ ನಿನಗೆ ಇಷ್ಟು ಸಮಸ್ಯೆಯಿದ್ದರೆ ಮತ್ತು ನೀನು ಅದರಿಂದ ಇಷ್ಟು ಸಂಪಾದಿಸುತ್ತಿದ್ದರೆ, ನನಗೂ ಸಂಪಾದಿಸಲು ಅವಕಾಶ ಕೊಡು. ರಿಂಗ್‌ಗೆ ಬಾ. ನಾನು ಹೃದಯಪೂರ್ವಕವಾಗಿ ನಿನ್ನನ್ನು ಆಹ್ವಾನಿಸುತ್ತಿದ್ದೇನೆ. ನಮಗೆ ಸ್ವಾಭಿಮಾನ ಇದ್ದರೆ, ಜಾಹೀರಾತುಗಳು ಮತ್ತು ಇತರ ವಿಚಾರಗಳನ್ನು ಬದಿಗಿಟ್ಟು, ನೇರವಾಗಿ ಮುಖಾಮುಖಿಯಾಗೋಣ. ಎಲ್ಲ ಮಲಯಾಳಿಗಳು ಮತ್ತು ಎಲ್ಲ ಸಿಖ್ ಸಮುದಾಯದವರಿಗಾಗಿ, ದಯವಿಟ್ಟು ಬಾ. ನಾನು ಕಾಯುತ್ತಿದ್ದೇನೆ,” ಎಂದು ಎಸ್ ಶ್ರೀಶಾಂತ್ ಕರೆ ನೀಡಿದ್ದಾರೆ.