ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Women's Asia Cup: ಶಫಾಲಿ ವರ್ಮಾ ಮಿಂಚು, ಬಾಂಗ್ಲಾ ಎದುರು ಗೆದ್ದು ಫೈನಲ್‌ಗೇರಿದ ಭಾರತ ವನಿತೆಯರು!

ಬಾಂಗ್ಲಾದೇಶವನ್ನು 40 ರನ್‌ಗಳಿಂದ ಮಣಿಸಿದ ಭಾರತ ಮಹಿಳಾ ತಂಡ, ಮಹಿಳಾ ಏಷ್ಯಾ ಕಪ್‌ನ ಫೈನಲ್‌ಗೆ ಭರ್ಜರಿ ಪ್ರವೇಶ ಪಡೆದಿದೆ. ಸೆಮಿಫೈನಲ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಬಾಂಗ್ಲಾದೇಶವನ್ನು ಸುಲಭವಾಗಿ ಮಣಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಇದೀಗ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.

ಮಹಿಳಾ ಏಷ್ಯಾ ಕಪ್‌ ಫೈನಲ್‌ಗೇರಿದ ಭಾರತ ವನಿತೆಯರು.

ದುಬೈ: ಮಹಿಳಾ ಏಷ್ಯಾ ಕಪ್‌ನ (Women's Asia Cup 2026) ಸೆಮಿಫೈನಲ್ ಪಂದ್ಯದಲ್ಲಿ (INDW vs BANW) ಬಾಂಗ್ಲಾದೇಶವನ್ನು 40 ರನ್‌ಗಳಿಂದ ಮಣಿಸಿದ ಭಾರತ ಮಹಿಳಾ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 109 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿದೆ. ಫೈನಲ್‌ನಲ್ಲಿ ಭಾರತ ತಂಡ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ.

ಭಾರತದ 149 ರನ್‌ಗಳ ಮೊತ್ತ ಸ್ವಲ್ಪ ಕಡಿಮೆಯೆನಿಸಿದರೂ, ಕಠಿಣ ಬ್ಯಾಟಿಂಗ್ ಪಿಚ್‌ನಲ್ಲಿ ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಪ್ರಮುಖ ಮ್ಯಾಚ್ ವಿನ್ನರ್ ದೀಪ್ತಿ ಶರ್ಮಾ ಕೇವಲ 26 ರನ್ ನೀಡಿ 3 ವಿಕೆಟ್ ಕಬಳಿಸಿದರು. ವೇಗದ ಬೌಲರ್ ನಂದಿನಿ ಶರ್ಮಾ 2 ವಿಕೆಟ್ ಪಡೆದರೆ, ಶ್ರೀ ಚರಣಿ ಹಾಗೂ ಪ್ರೇಮಾ ರಾವತ್ ತಲಾ ಒಂದು ವಿಕೆಟ್ ಪಡೆದರು.

IND vs AFG: ವೈಭವ್‌ ಸೂರ್ಯವಂಶಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಎಬಿ ಡಿ ವಿಲಿಯರ್ಸ್‌!

ಬಾಂಗ್ಲಾದೇಶ ಪರ ಆರಂಭಿಕ ಆಟಗಾರ್ತಿ ದಿಲಾರಾ ಅಖ್ತರ್ 21 ರನ್ ಗಳಿಸಿದರು. ಶೋರ್ನಾ ಅಖ್ತರ್ ಅಜೇಯ 22 ರನ್ ಗಳಿಸಿದರೆ, ನಾಯಕಿ ನಿಗರ್ ಸುಲ್ತಾನಾ 19 ರನ್ ಹಾಗೂ ಶೋಭನಾ ಮೊಸ್ತರಿ 18 ರನ್ ಗಳಿಸಿದರು. ಆದರೆ ಭಾರತೀಯ ಬೌಲರ್‌ಗಳ ಶಿಸ್ತಿನ ದಾಳಿಯ ಮುಂದೆ ಬಾಂಗ್ಲಾದೇಶದ ಬ್ಯಾಟರ್‌ಗಳಿಗೆ ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಕ್ಯಾಚ್ ನೀಡಿ ಔಟಾದರು. ಅವರು ಕೇವಲ 2 ರನ್ ಗಳಿಸಿದರು.



ಬಳಿಕ ಶೆಫಾಲಿ ವರ್ಮಾ ಹಾಗೂ ಪ್ರತಿಕಾ ರಾವಲ್ ತಂಡದ ಇನಿಂಗ್ಸ್‌ ಅನ್ನು ನಿಭಾಯಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ 44 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟ ನೀಡಿತು. ಪ್ರತಿಕಾ 24 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಒಳಗೊಂಡ 20 ರನ್ ಗಳಿಸಿ ಔಟಾದರು.

ನಂತರ ನಾಯಕಿ ಹರ್ಮನ್‌ಪ್ರೀತ್ ಕೌರ್ ಕ್ರೀಸ್‌ಗೆ ಬಂದರು. ಅವರು ಶೆಫಾಲಿ ವರ್ಮಾ ಜೊತೆಗೂಡಿ ಮೂರನೇ ವಿಕೆಟ್‌ಗೆ 27 ಎಸೆತಗಳಲ್ಲಿ 33 ರನ್ ಸೇರಿಸಿದರು. ಶೆಫಾಲಿ 40 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 64 ರನ್ ಸಿಡಿಸಿ ಪೆವಿಲಿಯನ್ ಸೇರಿದರು.



ರಿಚಾ ಮತ್ತು ದೀಪ್ತಿ ಹರ್ಮನ್‌ಗೆ ಸಾಥ್

ಶೆಫಾಲಿ ಔಟಾದ ಬಳಿಕ ಹರ್ಮನ್‌ಪ್ರೀತ್ ಕೌರ್‌ಗೆ ರಿಚಾ ಘೋಷ್ ಉತ್ತಮ ಸಾಥ್ ನೀಡಿದರು. ಇಬ್ಬರೂ ನಾಲ್ಕನೇ ವಿಕೆಟ್‌ಗೆ 28 ಎಸೆತಗಳಲ್ಲಿ 36 ರನ್ ಸೇರಿಸಿದರು. ರಿಚಾ 21 ಎಸೆತಗಳಲ್ಲಿ 2 ಸಿಕ್ಸರ್‌ಗಳೊಂದಿಗೆ 16 ರನ್ ಗಳಿಸಿದರು. ಬಳಿಕ ದೀಪ್ತಿ ಶರ್ಮಾ ನಾಯಕಿ ಹರ್ಮನ್‌ಪ್ರೀತ್ ಜೊತೆಗೂಡಿ ಐದನೇ ವಿಕೆಟ್‌ಗೆ ಕೇವಲ 8 ಎಸೆತಗಳಲ್ಲಿ 21 ರನ್ ಸೇರಿಸಿದರು. ಹರ್ಮನ್‌ಪ್ರೀತ್ ಕೌರ್ 28 ಎಸೆತಗಳಲ್ಲಿ 2 ಸಿಕ್ಸರ್‌ಗಳೊಂದಿಗೆ 24 ರನ್ ಗಳಿಸಿ ಅಜೇಯರಾಗಿ ಉಳಿದರು.

ಬಾಂಗ್ಲಾದೇಶ ಪರ ಸುಲ್ತಾನಾ ಖಾತೂನ್ 3 ಓವರ್‌ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದರು. ಮರುಫಾ ಅಖ್ತರ್, ನಹಿದಾ ಅಖ್ತರ್ ಹಾಗೂ ರಾಬಿಯಾ ಖಾನ್ ತಲಾ ಒಂದು ವಿಕೆಟ್ ಕಬಳಿಸಿದರು.