ನವದೆಹಲಿ: ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು (IND vs ENG) ಕಾದಾಟ ನಡೆಸಲು ಎದುರು ನೋಡುತ್ತಿವೆ. ಈ ಪಂದ್ಯದ ಮೂಲಕ ಶುಭಮನ್ ಗಿಲ್ (Shubman Gill) ನಾಯಕತ್ವದ ಭಾರತ ತಂಡಕ್ಕೆ ಇಂಗ್ಲೆಂಡ್ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ. ಅಲ್ಲದೆ ಈ ಸರಣಿಯ ಮೂಲಕ ಉಭಯ ತಂಡಗಳ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC 2025-27) ಅಭಿಯಾನ ಆರಂಭವಾಗಲಿದೆ. ಅಂದ ಹಾಗೆ ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XI ಅನ್ನು ಮಾಜಿ ಕ್ರಿಕೆಟಿಗ ವಾಸೀಮ್ ಜಾಫರ್ ಆಯ್ಕೆ ಮಾಡಿದ್ದಾರೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕಾರಣ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡಕ್ಕೆ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕಠಿಣ ಸವಾಲು ಎದುರಾಗಲಿದೆ. ಕೆಎಲ್ ರಾಹುಲ್, ಜಸ್‌ಪ್ರೀತ್ ಬುಮ್ರಾ, ರಿಷಭ್ ಪಂತ್, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ಬಿಟ್ಟರೆ ಇನ್ನುಳಿದ ಎಲ್ಲಾ ಆಟಗಾರರಿಗೂ ಇದು ಮೊದಲ ಇಂಗ್ಲೆಂಡ್ ಪ್ರವಾಸವಾಗಲಿದೆ. ಇದರ ನಡುವೆ ಮೊದಲನೇ ಟೆಸ್ಟ್ ಪಂದ್ಯಕ್ಕೆ ಮಾಜಿ ಟೆಸ್ಟ್ ಆರಂಭಿಕ ವಾಸೀಮ್ ಜಾಫರ್ ಅವರು, ಭಾರತ ತಂಡದ ತಮ್ಮ ನೆಚ್ಚಿನ ಪ್ಲೇಯಿಂಗ್ XI ಅನ್ನು ಆರಿಸಿದ್ದಾರೆ.
IND vs ENG Test: ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಇಸಿಬಿಗೆ 800 ಕೋಟಿ ಆದಾಯ!
ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಮೂರನೇ ಕ್ರಮಾಂಕಕ್ಕೆ ಸಾಯಿ ಸುದರ್ಶನ್ ಅಥವಾ ಅಭಿಮನ್ಯು ಈಶ್ವರನ್ ಅವರಲ್ಲಿ ಒಬ್ಬರನ್ನು ಅವರು ಆರಿಸಿದ್ದಾರೆ. ಜಾಫರ್ ಆಯ್ಕೆಯ ಅಗ್ರ ಮೂರು ಕ್ರಮಾಂಕದಲ್ಲಿ ಕೆಎಲ್ ರಾಹುಲ್‌ಗೆ ಮಾತ್ರ ಇಂಗ್ಲೆಂಡ್‌ನಲ್ಲಿ ಆಡಿದ ಅನುಭವವಿದೆ. ನಾಲ್ಕನೇ ಕ್ರಮಾಂಕಕ್ಕೆ ನಾಯಕ ಶುಭಮನ್ ಗಿಲ್ ಅವರನ್ನು ಆರಿಸಿದ್ದಾರೆ. ಆ ಮೂಲಕ ಗಿಲ್, ವಿರಾಟ್ ಕೊಹ್ಲಿಯ ಸ್ಥಾನವನ್ನು ತುಂಬಲಿದ್ದಾರೆ.
ಉಪ ನಾಯಕ ರಿಷಭ್ ಪಂತ್ ಅವರನ್ನು ಐದನೇ ಕ್ರಮಾಂಕಕ್ಕೆ ಆರಿಸಿರುವ ವಾಸೀಮ್ ಜಾಫರ್, ಆರನೇ ಕ್ರಮಾಂಕಕ್ಕೆ ಕನ್ನಡಿಗ ಕರುಣ್ ನಾಯರ್ ಅವರನ್ನು ಆಯ್ಕೆ ಮಾಡಿದ್ದಾರೆ. ನಂತರ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಸ್ಥಾನವನ್ನು ಕಲ್ಪಿಸಿದ್ದಾರೆ. ಜಡೇಜಾ ಜೊತೆಗೆ ಕುಲ್ದೀಪ್ ಯಾದವ್ ಅವರನ್ನು ಕೂಡ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಆರಿಸಿದ್ದಾರೆ. ನಂತರ ಸೀಮ್ ಬೌಲಿಂಗ್ ಆಲ್‌ರೌಂಡರ್ ಆಗಿ ಶಾರ್ದುಲ್ ಠಾಕೂರ್‌ಗೆ ಸ್ಥಾನ ನೀಡಿದ ಜಾಫರ್, ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕೈ ಬಿಟ್ಟಿದ್ದಾರೆ.
IND vs ENG: ಇಂಗ್ಲೆಂಡ್ ಪ್ರವಾಸದ ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಯಾದ ಹರ್ಷಿತ್ ರಾಣಾ!
ಇನ್ನು ವೇಗದ ಬೌಲಿಂಗ್ ವಿಭಾಗಕ್ಕೆ ಜಸ್‌ಪ್ರೀತ್ ಬುಮ್ರಾ ಅವರನ್ನು ಮುಂಚೂಣಿ ವೇಗಿಯಾಗಿ ಆಯ್ಕೆ ಮಾಡಿದ ವಾಸೀಮ್ ಜಾಫರ್, ಇವರ ಜೊತೆಗೆ ಇನ್ನುಳಿದ ವೇಗದ ಬೌಲರ್‌ಗಳಾಗಿ ಮೊಹಮ್ಮದ್ ಸಿರಾಜ್ ಮತ್ತು ಕನ್ನಡಿಗ ಪ್ರಸಿಧ್ ಕೃಷ್ಣ ಅವರನ್ನು ಆಯ್ಕೆ ಮಾಡಿದ್ದಾರೆ.
ಮೊದಲನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XI ಆರಿಸಿದ ವಾಸೀಮ್ ಜಾಫರ್
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಅಭಿಮನ್ಯು ಈಶ್ವರನ್/ಸಾಯಿ ಸುದರ್ಶನ್, ಶುಭಮನ್ ಗಿಲ್, ರಿಷಭ್ ಪಂತ್ (ವಿ.ಕೀ), ಕರುಣ್ ನಾಯರ್, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಕುಲ್ದೀಪ್ ಯಾದವ್, ಪ್ರಸಿಧ್ ಕೃಷ್ಣ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್