ಲೀಡ್ಸ್: ಕನ್ನಡಿಗ ಕರುಣ್ ನಾಯರ್ (Karun Nair) ಕೊನೆಗೂ ಭಾರತ ಟೆಸ್ಟ್ ತಂಡದ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆದಿದ್ದಾರೆ. ಇಲ್ಲಿನ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs ENG) ಕರುಣ್ ನಾಯರ್ ಆಡುತ್ತಿದ್ದಾರೆ. ಅಂದ ಹಾಗೆ 2016ರಲ್ಲಿ ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ತ್ರಿಶತಕ ಬಾರಿಸಿದ್ದರು. ಆ ಮೂಲಕ ವೀರೇಂದ್ರ ಸೆಹ್ವಾಗ್ (Virender Sehwag) ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಕರುಣ್ ನಾಯರ್ ಬರೆದಿದ್ದರು. ಅದು ಸರಣಿಯ ಕೊನೆಯ ಪಂದ್ಯವಾಗಿತ್ತು. ಮುಂದಿನ ಟೆಸ್ಟ್ ಪಂದ್ಯದಲ್ಲಿ ಅವರನ್ನು ಆಡುವ XIನಿಂದ ಕೈಬಿಡಲಾಗಿತ್ತು. ಆ ಪಂದ್ಯದ ನಂತರ, ನಾಯರ್ ಭಾರತ ಪರ ಇನ್ನೂ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದರು.
ಭಾರತ 2018 ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿತ್ತು. ಕರುಣ್ ನಾಯರ್ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡದ ಭಾಗವಾಗಿದ್ದರು. ಆದರೆ, ಅವರಿಗೆ ಒಂದೇ ಒಂದು ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಹನುಮ ವಿಹಾರಿ ಅವರನ್ನು ಭಾರತ ತಂಡಕ್ಕೆ ಕರೆಸಿಕೊಂಡು ಕೊನೆಯ ಪಂದ್ಯದಲ್ಲಿ ಆಡಲು ಅವಕಾಶವನ್ನು ನೀಡಲಾಗಿತ್ತು. ಆದರೆ ಕರುಣ್ ನಾಯರ್ ಅವರನ್ನು ಬೆಂಚ್‌ನಲ್ಲಿಯೇ ಇರಿಸಲಾಗಿತ್ತು. ಆ ಪ್ರವಾಸದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು.
IND vs ENG 1st Test Day 1: ಟಾಸ್ ಸೋತ ಭಾರತ ಮೊದಲ ಬ್ಯಾಟಿಂಗ್!
3006 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ಕರುಣ್ ನಾಯರ್
ಇದೀಗ 7 ವರ್ಷಗಳ ಬಳಿಕ ಕರುಣ್ ನಾಯರ್ ಮತ್ತೊಮ್ಮೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದಾರೆ. 2017ರ ಮಾರ್ಚ್ 28 ರಂದು ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಭಾರತ ತಂಡದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಇದೀಗ ಅವರು 2025 ಜೂನ್ 20 ರಂದು ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಮರಳಿದ್ದಾರೆ. ಅಂದರೆ, ಅವರು 3006 ದಿನಗಳ ನಂತರ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಈ ಸಮಯದಲ್ಲಿ ಭಾರತ ತಂಡ 77 ಟೆಸ್ಟ್ ಪಂದ್ಯಗಳನ್ನು ಆಡಿದೆ. ತಮ್ಮ 6 ಪಂದ್ಯಗಳ ಟೆಸ್ಟ್ ವೃತ್ತಿಜೀವನದಲ್ಲಿ ಕರುಣ್ ನಾಯರ್ 62ರ ಸರಾಸರಿಯಲ್ಲಿ 374 ರನ್ ಗಳಿಸಿದ್ದಾರೆ.
ಸಾಯಿ ಸುದರ್ಶನ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ
ಇನ್ನು ತಮಿಳುನಾಡು ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಅವರು ಶುಕ್ರವಾರ ಅಂತಾರಾಷ್ಟೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಸಾಯಿ ಸುದರ್ಶನ್‌ಗೆ ಭಾರತ ತಂಡ 317ನೇ ಟೆಸ್ಟ್ ಕ್ಯಾಪ್ ಅನ್ನು ನೀಡಲಾಗಿತ್ತು. ಇದೀಗ ಅವರು ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿಸಲಾಗುತ್ತದೆ.
ಮೊದಲನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XI
- ಯಶಸ್ವಿ ಜೈಸ್ವಾಲ್ (ಓಪನರ್)
2. ಕೆಎಲ್ ರಾಹುಲ್ (ಓಪನರ್)
3. ಸಾಯಿ ಸುದರ್ಶನ್ (ಬ್ಯಾಟ್ಸ್‌ಮನ್)
4. ಶುಭಮನ್ ಗಿಲ್ (ನಾಯಕ, ಬ್ಯಾಟ್ಸ್‌ಮನ್)
5. ರಿಷಭ್ ಪಂತ್ (ವಿ.ಕೀ)
6. ಕರುಣ್ ನಾಯರ್ ( ಬ್ಯಾಟ್ಸ್‌ಮನ್)
7. ರವೀಂದ್ರ ಜಡೇಜಾ (ಆಲ್‌ರೌಂಡರ್)
8. ಶಾರ್ದುಲ್ ಠಾಕೂರ್ (ಆಲ್‌ರೌಂಡರ್)
9. ಜಸ್‌ಪ್ರೀತ್ ಬುಮ್ರಾ (ವೇಗದ ಬೌಲರ್)
10. ಮೊಹಮ್ಮದ್ ಸಿರಾಜ್ (ವೇಗದ ಬೌಲರ್)
11. ಪ್ರಸಿಧ್ ಕೃಷ್ಣ (ವೇಗದ ಬೌಲರ್)