ಬರ್ಮಿಂಗ್‌ಹ್ಯಾಮ್: ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ನಡೆದಿದ್ದ ಮೂರನೇ ಹಾಗೂ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ (ENG vs PAK) ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ (Joe Root) ಸ್ಪೋಟಕ ಅರ್ಧಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರನ್ನು ಹಿಂದಿಕ್ಕಿದ್ದಾರೆ.
130 ರನ್‌ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡ, ಆರಂಭಿಕರಾದ ಬೆನ್ ಡಕೆಟ್ ಹಾಗೂ ಎಮಿಲಿಯೊ ಗೇ ಅವರನ್ನು ಕೇವಲ 2 ರನ್ ಇರುವಾಗ ಕಳೆದುಕೊಂಡಿತು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಮೊಹಮ್ಮದ್ ಅಬ್ಬಾಸ್ ಔಟ್ ಮಾಡಿದರು. ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಜೋ ರೂಟ್, 69 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿ ಇಂಗ್ಲೆಂಡ್ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದರು.
ಪಿಎಸ್‌ಎಲ್‌ನಿಂದ ಒಬ್ಬೇ ಒಬ್ಬ ವೈಭವ್ ಸೂರ್ಯವಂಶಿಯಂಥಾ ಬ್ಯಾಟರ್ ಬೆಳಕಿಗೆ ಬಂದಿಲ್ಲ: ವಸೀಮ್ ಅಕ್ರಮ್
ಅರ್ಧಶತಕ ಸಿಡಿಸಿದ ಜೊತೆಗೆ ಜೋ ರೂಟ್ ತಮ್ಮ ಜೊತೆಗಾರ ಜಾರ್ಡನ್ ಕಾಕ್ಸ್ ಅವರ ಜೊತೆಗೆ 128 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಕಾಕ್ಸ್ ಕೂಡ ಅಜೇಯ 59 ರನ್‌ಗಳನ್ನು ಗಳಿಸಿದರು. ರೂಟ್ ತಮ್ಮ ಇನಿಂಗ್ಸ್‌ನಲ್ಲಿ 9 ಮನಮೋಹಕ ಬೌಂಡರಿಗಳನ್ನು ಬಾರಿಸಿದ್ದಾರೆ. ಸತತ ಮೂರನೇ ಪಂದ್ಯವನ್ನೂ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡ, ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.
ಸಚಿನ್ ದಾಖಲೆ ಮುರಿದ ರೂಟ್
ಈ ಅರ್ಧಶತಕದ ಮೂಲಕ ಜೋ ರೂಟ್ ಅವರು ತಮ್ಮ ಟೆಸ್ಟ್ ವೃತ್ತಿ ಜೀವನದ 69ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ 68 ಟೆಸ್ಟ್ ಅರ್ಧಶತಕಗಳನ್ನು ಗಳಿಸಿದ್ದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ಜೋ ರೂಟ್ ಹಿಂದಿಕ್ಕಿದ್ದಾರೆ. 66 ಅರ್ಧಶತಕಗಳ ಮೂಲಕ ವೆಸ್ಟ್ ಇಂಡೀಸ್ ಮಾಜಿ ಬ್ಯಾಟ್ಸ್‌ಮನ್ ಶಿವನಾರಾಯಣ್ ಚಂದ್ರಪಾಲ್ ಮೂರನೇ ಸ್ಥಾನದಲ್ಲಿದ್ದಾರೆ. ಅಲಾನ್ ಬಾರ್ಡನ್ ಹಾಗೂ ರಾಹುಲ್ ದ್ರಾವಿಡ್ ತಲಾ 63 ಅರ್ಧಶತಕಗಳ ಮೂಲಕ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ 62 ಅರ್ಧಶತಕಗಳ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.
ಎಜ್‌ಬಾಸ್ಟನ್‌ನಲ್ಲಿ 1000 ರನ್ ಗಳಿಸಿದ ಜೋ ರೂಟ್
ಇನ್ನು ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ 1000 ಟೆಸ್ಟ್ ರನ್‌ಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಮತ್ತೊಂದು ದಾಖಲೆಯನ್ನು ಜೋ ರೂಟ್ ಬರೆದಿದ್ದಾರೆ. ಲಾರ್ಡ್ಸ್, ಮ್ಯಾಂಚೆಸ್ಟರ್ ಹಾಗೂ ದಿ ಓವಲ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ 1000 ರನ್‌ಗಳನ್ನು ಪೂರ್ಣಗೊಳಿಸಿದ ನಾಲ್ಕನೇ ಕ್ರೀಡಾಂಗಣ ಇದಾಗಿದೆ.
ಲಾರ್ಡ್ಸ್ ಅಂಗಣದಲ್ಲಿ ಜೋ ರೂಟ್, 2203 ರನ್‌ಗಳು, ಮ್ಯಾಂಚೆಸ್ಟರ್‌ನಲ್ಲಿ 1128 ರನ್‌ಗಳು ಹಾಗೂ ದಿ ಓವಲ್ ಅಂಗಣದಲ್ಲಿ1050 ರನ್‌ಗಳನ್ನು ದಾಖಲಿಸಿದ್ದಾರೆ. ಅಂದ ಹಾಗೆ ರೂಟ್ ಅರ್ಧಶತಕದ ಬಲದಿಂದ ಇಂಗ್ಲೆಂಡ್ ತಂಡ, ಮೂರನೇ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಗೆದ್ದು ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.