ನವದೆಹಲಿ: ಭಾರತ ವಿರುದ್ಧದ ಮುಂಬರುವ ಟಿ20ಐ ಸರಣಿಗೆ (IND vs ENG) ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು 17 ಸದಸ್ಯರ ತನ್ನ ರಾಷ್ಟ್ರೀಯ ತಂಡವನ್ನು (England T20I Squad) ಪ್ರಕಟಿಸಿದೆ. ಈ ಸರಣಿಗೆ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ತಂಡದಲ್ಲಿರುವ ಏಕೈಕ ಹೊಸ ಮುಖವೆಂದರೆ 21 ವರ್ಷದ ಆಲ್‌ರೌಂಡರ್ ಜೇಮ್ಸ್ ಕೋಲ್ಸ್. ದೇಶಿ ಕ್ರಿಕೆಟ್‌ನಲ್ಲಿ ಮತ್ತು ಇಂಗ್ಲೆಂಡ್ ಲಯನ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಫಲವಾಗಿ ಅವರನ್ನು ಮೊದಲ ಬಾರಿ ಇಂಗ್ಲೆಂಡ್ ಪುರುಷರ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಇಂಗ್ಲೆಂಡ್‌ನ ಟಿ20 ತಂಡದ ನಿಯಮಿತ ನಾಯಕರಾಗಿ ಹ್ಯಾರಿ ಬ್ರೂಕ್ ಅವರನ್ನು ಉಳಿಸಿಕೊಳ್ಳಲಾಗಿದೆ. ಇದರ ನಡುವೆ ಇತ್ತೀಚೆಗೆ ಮುಕ್ತಾಯಗೊಂಡಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗದ ನಂತರ ಜೋರ್ಡಾನ್ ಕಾಕ್ಸ್, ಸೋನಿ ಬೇಕರ್ ಮತ್ತು ಸಾಕಿಬ್ ಮಹಮೂದ್ ತಂಡಕ್ಕೆ ಮರಳಿದ್ದಾರೆ. ಗಾಯದ ಕಾರಣದಿಂದಾಗಿ ಬ್ರೈಡನ್ ಕಾರ್ಸ್ ಮತ್ತು ಜೇಮಿ ಓವರ್ಟನ್ ಆಯ್ಕೆಗೆ ಲಭ್ಯವಿರಲಿಲ್ಲ. ಅವರನ್ನು ಹೊರತುಪಡಿಸಿ, ತಂಡವು ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಫಿಲ್ ಸಾಲ್ಟ್ ಮತ್ತು ಸ್ಯಾಮ್ ಕರನ್ ಅವರಂತಹ ಅನುಭವಿ ಆಟಗಾರರನ್ನು ಒಳಗೊಂಡಿದೆ.
ಸಂಜು ಇನ್, ವೈಭವ್ ಔಟ್! ಐರ್ಲೆಂಡ್ ವಿರುದ್ಧ ಮೊದಲ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಚೊಚ್ಚಲ ಅವಕಾಶ ಪಡೆದ ಜೇಮ್ಸ್ ಕೋಲ್ಸ್ ಯಾರು?
ಬಲಗೈ ಬ್ಯಾಟ್ಸ್‌ಮನ್ ಮತ್ತು ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಆಗಿರುವ ಜೇಮ್ಸ್ ಕೋಲ್ಸ್ ಇಂಗ್ಲಿಷ್ ಕ್ರಿಕೆಟ್‌ನಲ್ಲಿ ಉದಯೋನ್ಮುಖ ತಾರೆ. ಕೇವಲ 16 ವರ್ಷ ಮತ್ತು 157 ದಿನಗಳಲ್ಲಿ ಪದಾರ್ಪಣೆ ಮಾಡುವ ಮೂಲಕ ಅವರು ಸಸೆಕ್ಸ್‌ನ ಇತಿಹಾಸದಲ್ಲಿ ಅತ್ಯಂತ ಕಿರಿಯ ಪ್ರಥಮ ದರ್ಜೆ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರು 61 ಇನಿಂಗ್ಸ್‌ಗಳಲ್ಲಿ 146.37ರ ಸ್ಟ್ರೈಕ್ ರೇಟ್ ಮತ್ತು 28.60 ರ ಸರಾಸರಿಯಲ್ಲಿ 1,373 ರನ್ ಗಳಿಸಿದ್ದಾರೆ.
ಬೌಲರ್ ಆಗಿ ಅವರು 26.94ರ ಸರಾಸರಿಯಲ್ಲಿ ಮತ್ತು 8.27ರ ಎಕಾನಮಿ ರೇಟ್‌ನಲ್ಲಿ 53 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿದ ಇಂಗ್ಲೆಂಡ್ ರಾಷ್ಟ್ರೀಯ ಆಯ್ಕೆದಾರ ಮಾರ್ಕಸ್ ನಾರ್ತ್, "ಜೇಮ್ಸ್ ಕೋಲ್ಸ್ ದೇಶಿ ಮತ್ತು ವಿದೇಶಿ ಟಿ20 ಲೀಗ್‌ಗಳಲ್ಲಿ ಮತ್ತು ಇಂಗ್ಲೆಂಡ್ ಲಯನ್ಸ್‌ಗಾಗಿ ಕಳೆದ 12 ತಿಂಗಳುಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಈ ಸ್ಥಾನವನ್ನು ಗಳಿಸಿದ ಅತ್ಯಾಕರ್ಷಕ ಆಟಗಾರ," ಎಂದು ಗುಣಗಾನ ಮಾಡಿದ್ದಾರೆ.
ʻವೈಭವ್ ಸೂರ್ಯವಂಶಿ ಎಲ್ಲರನ್ನೂ ಮುಜುಗರಕ್ಕೀಡು ಮಾಡುತ್ತಿದ್ದಾರೆʼ: ಆಕಾಶ್ ಚೋಪ್ರಾ!
ಭಾರತ vs ಇಂಗ್ಲೆಂಡ್ ಟಿ20ಐ ಸರಣಿ ವೇಳಾಪಟ್ಟಿ
ಜುಲೈ 1: ಮೊದಲ ಟಿ20ಐ (ಚೆಸ್ಟರ್-ಲೆ-ಸ್ಟ್ರೀಟ್)
ಜುಲೈ 4: ಎರಡನೇ ಟಿ20ಐ (ಮ್ಯಾಂಚೆಸ್ಟರ್)
ಜುಲೈ 7: ಮೂರನೇ ಟಿ20ಐ (ಟ್ರೆಂಟ್ ಬ್ರಿಡ್ಜ್)
ಜುಲೈ 9: ನಾಲ್ಕನೇ ಟಿ20ಐ (ಬ್ರಿಸ್ಟಲ್)
ಜುಲೈ 11: ಐದನೇ ಟಿ20ಐ (ಸೌತಾಂಪ್ಟನ್)
ಭಾರತ ವಿರುದ್ಧದ ಟಿ20ಐ ಸರಣಿಗೆ ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಜೇಮ್ಸ್ ಕೋಲ್ಸ್, ಜೋರ್ಡಾನ್ ಕಾಕ್ಸ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ವಿಲ್ ಜ್ಯಾಕ್ಸ್, ಸಾಕಿಬ್ ಮಹಮೂದ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜಾಶ್ ಟಂಗ್, ಲ್ಯೂಕ್ ವುಡ್