ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗುರ್ನೂರ್‌ ಬ್ರಾರ್‌ ಕೇವಲ ಟೆಸ್ಟ್‌ಗೆ ಮಾತ್ರವಲ್ಲ, ಎಲ್ಲಾ ಸ್ವರೂಪಗಳಲ್ಲಿಯೂ ಆಡಿಸಬೇಕೆಂದ ಆಕಾಶ್‌ ಚೋಪ್ರಾ!

ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಕಾರ ಆಕಾಶ್ ಚೋಪ್ರಾ ಅವರು ಯುವ ವೇಗಿ ಗುರ್ನೂರ್ ಬ್ರಾರ್ ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ಮಾತ್ರ ಸೀಮಿತಗೊಳಿಸದೆ, ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಆಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ನಿಯಮಿತವಾಗಿ ಅವಕಾಶ ನೀಡುವುದರಿಂದ ಬ್ರಾರ್‌ಗೆ ಹೆಚ್ಚಿನ ಅನುಭವ ದೊರೆಯಲಿದ್ದು, ಇದು 2027ರ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸಲು ನೆರವಾಗಲಿದೆ ಎಂದು ಹೇಳಿದ್ದಾರೆ.

ಗುರ್ನೂರ್‌ ಬ್ರಾರ್‌ಗೆ ಎಲ್ಲಾ ಸ್ವರೂಪದಲ್ಲಿ ಆಡಿಸಬೇಕೆಂದ ಆಕಾಶ್‌ ಚೋಪ್ರಾ.

ನವದೆಹಲಿ: ಯುವ ವೇಗಿ ಗುರ್ನೂರ್ ಬ್ರಾರ್ (Gurnoor Brar) ಅವರನ್ನು ಕೇವಲ ಟೆಸ್ಟ್ ಕ್ರಿಕೆಟ್‌ಗೆ ಮೀಸಲಿಡುವುದು ಸರಿಯಾದ ನಿರ್ಧಾರವಾಗುವುದಿಲ್ಲ ಎಂದು ಮಾಜಿ ಭಾರತ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಬ್ರಾರ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಅವರಿಗೆ ಒಂದೂ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಭಾರತದ ಮುಂದಿನ ಟೆಸ್ಟ್ ಸರಣಿ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಸರಣಿಗಳು ಆಗಾಗ ನಡೆಯುವುದಿಲ್ಲ. ಹೀಗಾಗಿ ಆಟಗಾರರಿಗೆ ನಿಯಮಿತವಾಗಿ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗದಿದ್ದರೆ, ಸರಣಿ ಆರಂಭಕ್ಕೂ ಮುನ್ನ ಅವರ ಫಾರ್ಮ್ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಚೋಪ್ರಾ ಎಚ್ಚರಿಕೆ ನೀಡಿದ್ದಾರೆ. 2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದ್ದು, ಅಲ್ಲಿನ ವೇಗ ಹಾಗೂ ಬೌನ್ಸ್ ಹೊಂದಿರುವ ಪಿಚ್‌ಗಳಲ್ಲಿ ಬ್ರಾರ್ ಅವರಂತಹ ವೇಗಿ, ಭಾರತ ತಂಡಕ್ಕೆ ಉತ್ತಮ ಆಯ್ಕೆಯಾಗಬಹುದು ಎಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಇದು ಒಳ್ಳೆಯ ಆಲೋಚನೆ. ಆದರೆ ಇದು ಸರಿಯಾದ ಆಲೋಚನೆಯೇ? ಎಂಬ ಪ್ರಶ್ನೆ ಖಂಡಿತವಾಗಿಯೂ ಇರುತ್ತದೆ. ಏಕೆಂದರೆ ಟೆಸ್ಟ್ ಕ್ರಿಕೆಟ್ ಸರಣಿಗಳು ಬಹಳ ಕಡಿಮೆ ನಡೆಯುತ್ತವೆ. ಇದೀಗ ಆಗಸ್ಟ್‌ನಲ್ಲಿ ಒಂದು ಸರಣಿ ಮುಗಿದಿದೆ. ನಂತರ ನವೆಂಬರ್‌ನಲ್ಲಿ ಟೆಸ್ಟ್ ಸರಣಿ ನಡೆಯಲಿದೆ. ಇದಾದ ಬಳಿಕ ಮುಂದಿನ ಟೆಸ್ಟ್ ಸರಣಿ ಜನವರಿ ಅಂತ್ಯದಲ್ಲಿ ನಡೆಯಲಿದೆ,” ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕೇಳಲಾದ ಪ್ರಶ್ನೆಗೆ ಆಕಾಶ್‌ ಚೋಪ್ರಾ ಉತ್ತರಿಸಿದ್ದಾರೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ ಏಕದಿನ ವಿಶ್ವಕಪ್‌ ಭವಿಷ್ಯ ನುಡಿದ ಆಶಿಶ್‌ ನೆಹ್ರಾ!

“ಟೆಸ್ಟ್ ಪಂದ್ಯಗಳು ಇಷ್ಟು ವಿರಳವಾಗಿ ನಡೆಯುತ್ತಿರುವಾಗ, ನೀವು ಆತನನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಆಡಿಸುತ್ತೀರಾ ಎಂಬ ಪ್ರಶ್ನೆ ಎದುರಾಗುತ್ತದೆ. ಕೇವಲ ಟೆಸ್ಟ್‌ಗಳಲ್ಲಿ ಮಾತ್ರ ಆಡಿಸಿದರೆ ಅದು ಹೇಗೆ ಕೆಲಸ ಮಾಡುತ್ತದೆ? ಇದರ ಜೊತೆಗೆ ಏಕದಿನ ವಿಶ್ವಕಪ್ ಕೂಡ ಸಮೀಪಿಸುತ್ತಿದೆ ಎಂಬುದು ನಿಮ್ಮ ಗಮನದಲ್ಲಿರಬೇಕು. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ನಮಗೆ ವೇಗ ಮತ್ತು ಬೌನ್ಸ್ ಅಗತ್ಯವಾಗಬಹುದು. ಗುರ್ನೂರ್ ಬ್ರಾರ್ ಈಗಷ್ಟೇ ವೃತ್ತಿ ಜೀವನ ಆರಂಭಿಸಿರುವ ಬೌಲರ್,” ಎಂದು ಅವರು ಹೇಳಿದ್ದಾರೆ.

ಬ್ರಾರ್‌ ಮೂರೂ ಸ್ವರೂಪದಲ್ಲಿ ಆಡಬೇಕೆಂದ ಚೋಪ್ರಾ

ಗುರ್ನೂರ್‌ ಬ್ರಾರ್ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಆಡಿಸುವ ಪರವಾಗಿ ಚೋಪ್ರಾ ಮಾತನಾಡಿದ್ದಾರೆ. ವಿವಿಧ ಪರಿಸ್ಥಿತಿಗಳು ಹಾಗೂ ಮಾದರಿಗಳಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಇದು ಬಿಸಿಸಿಐಗೆ ಸಹಾಯ ಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

SA vs NAM: ಚೊಚ್ಚಲ ಏಕದಿನ ಪಂದ್ಯದಲ್ಲಿಯೇ 150 ರನ್‌ ಚಚ್ಚಿದ ಜೋರ್ಡನ್‌ ಹರ್ಮನ್!

“ಯಾರಾದರೂ ಈಗಷ್ಟೇ ವೃತ್ತಿ ಜೀವನವನ್ನು ಆರಂಭಿಸಿದ್ದರೆ, ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಲು ನೀವು ಬಯಸುತ್ತೀರಿ. ವಿವಿಧ ಪರಿಸ್ಥಿತಿಗಳು ಮತ್ತು ಸಂದರ್ಭಗಳಲ್ಲಿ ಅವರು ಏಕದಿನ ಹಾಗೂ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಆಡಬೇಕು. ಅವರು ಹೇಗೆ ಪ್ರದರ್ಶನ ನೀಡುತ್ತಾರೆ, ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ನಿಮಗೆ ಇನ್ನೂ ತಿಳಿದಿಲ್ಲ,” ಎಂದು ಚೋಪ್ರಾ ವಿವರಿಸಿದ್ದಾರೆ.

“ಹೀಗಾಗಿ ವಿಶ್ವಕಪ್ ಬರುವ ವೇಳೆಗೆ ನಮ್ಮ ಆಟಗಾರ ಸಂಪೂರ್ಣವಾಗಿ ಸಿದ್ಧನಾಗಿದ್ದಾನೆಯೇ ಎಂಬುದನ್ನು ತಿಳಿದುಕೊಳ್ಳಲು, ಇಂತಹ ಸಣ್ಣ ಸಣ್ಣ ಪರೀಕ್ಷೆಗಳನ್ನು ನಿರಂತರವಾಗಿ ನಡೆಸುತ್ತಿರಬೇಕು. ಅದಕ್ಕಾಗಿ ಆತನಿಗೆ ವಿವಿಧ ಮಾದರಿಗಳಲ್ಲಿ ಅವಕಾಶ ನೀಡುವುದು ಮುಖ್ಯ,” ಎಂದು ಅವರು ತಿಳಿಸಿದ್ದಾರೆ.