ನವದೆಹಲಿ: ಇಂಗ್ಲೆಂಡ್ ಪ್ರವಾಸದ ಟಿ20ಐ ಸರಣಿಯಲ್ಲಿ (IND vs ENG) ಭಾರತ ತಂಡಕ್ಕೆಇಲ್ಲಿಯವರೆಗೂ ಭಾರಿ ನಿರಾಶೆಯಾಗಿದೆ. ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ಭಾರತ ತಂಡ ಇನ್ನೂ ಒಂದೇ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಮೊದಲಿಗೆ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿ 2-0 ಅಂತರದಲ್ಲಿ ಭಾರತ ವೈಟ್‌ವಾಶ್ ಆಘಾತ ಅನುಭವಿಸಿತು. ಮೊದಲ ಟಿ20 ಪಂದ್ಯವನ್ನು ಗೆದ್ದ ಬಳಿಕ ಐರ್ಲೆಂಡ್, ಎರಡನೇ ಪಂದ್ಯದಲ್ಲಿಯೂ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡಕ್ಕೆ ಶಾಕ್ ನೀಡಿತ್ತು. ಆ ಮೂಲಕ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.
ಇದಾದ ಬಳಿಕ ಇಂಗ್ಲೆಂಡ್ ಪ್ರವಾಸವನ್ನು ಹಮ್ಮಿಕೊಂಡಿರುವ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಐದು ಟಿ20ಐ ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಟಿ20ಐ ಸರಣಿಯ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು, ನಂತರ ನಡೆದ ಮೂರು ಪಂದ್ಯಗಳಲ್ಲೂ ಭಾರತ ಸೋಲು ಅನುಭವಿಸಿ ಈಗಾಗಲೇ ಸರಣಿಯನ್ನು 3-0 ಅಂತರದಲ್ಲಿ ಕಳೆದುಕೊಂಡಿದೆ. ಶನಿವಾರ (ಜುಲೈ 11) ನಡೆಯಲಿರುವ ಕೊನೆಯ ಟಿ20 ಪಂದ್ಯವನ್ನು ಗೆದ್ದು ವೈಟ್‌ವಾಶ್ ಮುಖಭಂಗವನ್ನು ತಪ್ಪಿಸಿಕೊಳ್ಳುವ ಟೀಮ್ ಇಂಡಿಯಾ ಎದುರು ನೋಡುತ್ತಿದೆ.
ಭಾರತ ತಂಡದ ಹೀನಾಯ ಪ್ರದರ್ಶನದ ನಡುವೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಪರ್ಯಾಯ ಭಾರತದ ಪ್ಲೇಯಿಂಗ್ ಇಲೆವೆನ್‌ನ್ನು ಆಯ್ಕೆ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದು, ಸಂಜು ಸ್ಯಾಮ್ಸನ್ ಅವರಿಗೂ ತಂಡದಲ್ಲಿ ಸ್ಥಾನ ಕೊಟ್ಟಿದ್ದಾರೆ.
2026ರ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ಬಳಿಕ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಟಿ20 ನಾಯಕತ್ವದಿಂದ ಕೆಳಗಿಳಿಸಿ ತಂಡದಿಂದಲೂ ಕೈಬಿಡಲಾಗಿತ್ತು. ಮತ್ತೊಂದೆಡೆ, ಪ್ರಸಕ್ತ ಯುಕೆ ಪ್ರವಾಸದಲ್ಲಿ ಮೂರು ಪಂದ್ಯಗಳ ಬಳಿಕ ಸಂಜು ಸ್ಯಾಮ್ಸನ್ ಅವರನ್ನು ಆಡುವ ಬಳಗದಿಂದ ಹಾಗೂ ಜಿಂಬಾಬ್ವೆ ಟಿ20ಐ ಸರಣಿಯ ತಂಡದಿಂದ ಕೈಬಿಡಲಾಗಿದೆ.
ಆಕಾಶ್ ಚೋಪ್ರಾ ತಮ್ಮ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಆರಂಭಿಕ ಬ್ಯಾಟರ್ ಆಗಿ ಆಯ್ಕೆ ಮಾಡಿದ್ದಾರೆ. ಜೈಸ್ವಾಲ್ 2024ರ ಬಳಿಕ ಭಾರತ ಪರ ಟಿ20 ಪಂದ್ಯವನ್ನು ಆಡಿಲ್ಲ. 2025ರ ಆರಂಭದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ನಂತರ ಟಿ20 ತಂಡಕ್ಕೆ ಮರಳುವ ಅವಕಾಶ ಸಿಕ್ಕಿಲ್ಲ.
ರಜತ್ ಪಾಟಿದಾರ್‌ಗೆ ಉಪನಾಯಕನ ಸ್ಥಾನ
ಆಕಾಶ್ ಚೋಪ್ರಾ, ರಜತ್ ಪಾಟೀದಾರ್ ಅವರಿಗೆ ಮೊದಲ ಬಾರಿ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡುವ ಜೊತೆಗೆ ಉಪನಾಯಕನ ಜವಾಬ್ದಾರಿಯನ್ನೂ ಕೊಟ್ಟಿದ್ದಾರೆ. ಪಾಟಿದಾರ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 2025 ಮತ್ತು 2026ರ ಐಪಿಎಲ್ ಟೂರ್ನಿಗಳಲ್ಲಿ ಸತತ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಆದರೆ ಅವರು ಇನ್ನೂ ಭಾರತ ಪರ ಟಿ20ಐ ಪಂದ್ಯವನ್ನು ಆಡಿಲ್ಲ.
IND vs ENG ಟಿ20ಐ ಸರಣಿಯಲ್ಲಿ ಭಾರತ ಮಾಡುತ್ತಿರುವ ದೊಡ್ಡ ತಪ್ಪನ್ನು ರಿವೀಲ್ ಮಾಡಿದ ಸಬಾ ಕರಿಮ್!
ಧ್ರುವ್ ಜುರೆಲ್ ಹಾಗೂ ನಮನ್ ಧೀರ್ ಅವರಿಗೂ ಚೋಪ್ರಾ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಜುರೆಲ್ ಏಕದಿನ ತಂಡದ ನಿಯಮಿತ ಸದಸ್ಯರಾಗಿದ್ದರೂ, ಸದ್ಯ ವೈಟ್‌ಬಾಲ್ ತಂಡಗಳಲ್ಲಿ ಅವಕಾಶ ಪಡೆದಿಲ್ಲ. ಆಲ್‌ರೌಂಡರ್‌ಗಳಾಗಿ ಕೃಣಾಲ್ ಪಾಂಡ್ಯ ಹಾಗೂ ಅನುಕುಲ್ ರಾಯ್ ಅವರನ್ನು ಆಯ್ಕೆ ಮಾಡಲಾಗಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ತಂಡವನ್ನು ಮುನ್ನಡೆಸಲಿದ್ದು, ಅವರೊಂದಿಗೆ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸಿರಾಜ್ ಆರಂಭದಲ್ಲಿ ಆಯ್ಕೆಯಾಗಿದ್ದರೂ, ಬಳಿಕ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಹಲ್ ಸ್ಥಾನ ಪಡೆದಿದ್ದಾರೆ.
ಆಕಾಶ್ ಚೋಪ್ರಾ ಆಯ್ಕೆ ಮಾಡಿದ ಪರ್ಯಾಯ ಭಾರತ ಟಿ20 ಪ್ಲೇಯಿಂಗ್ ಇಲೆವೆನ್: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಜತ್ ಪಾಟಿದಾರ್ (ಉಪನಾಯಕ), ಧ್ರುವ್ ಜುರೆಲ್, ನಮನ್ ಧೀರ್, ಕೃಣಾಲ್ ಪಾಂಡ್ಯ, ಅನುಕುಲ್ ರಾಯ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್ ಹಾಗೂ ಯುಜ್ವೇಂದ್ರ ಚಹಲ್