ನವದೆಹಲಿ: ಭಾರತ ಕ್ರಿಕೆಟ್ ತಂಡ ಸದ್ಯ ಶ್ರೀಲಂಕಾದಲ್ಲಿ ಬೀಡು ಬಿಟ್ಟಿದ್ದು, ಇಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿಗೂ ಮುನ್ನ ಭಾರತ ತಂಡದಲ್ಲಿ ಗಾಯದ ಸಮಸ್ಯೆ ಎದುರಾಗಿದೆ. ಜಸ್‌ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಅವರು ಗಾಯಗಳಿಂದಾಗಿ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಇದರ ನಡುವೆ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಅವರನ್ನು ತಂಡದಲ್ಲಿ ಪದೇ ಪದೇ ಕಡೆಗಣಿಸಲಾಗುತ್ತಿದೆ. ಭಾರತ ತಂಡದಲ್ಲಿ ಗಾಯಾಳುಗಳ ಸ್ಥಾನಕ್ಕೂ ಶಮಿಗೆ ಅವಕಾಶ ನೀಡಲಾಗುತ್ತಿಲ್ಲ. ಈ ಬಗ್ಗೆ ದಿಗ್ಗಜ ವೇಗದ ಬೌಲರ್ ಜಹೀರ್ ಖಾನ್ (Zaheer Khan) ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ಪರ ಟೆಸ್ಟ್ ಕ್ರಿಕೆಟ್ ಹಾಗೂ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕೆಂಬ ಯೋಜನೆಯಲ್ಲಿರುಬ ಮೊಹಮ್ಮದ್ ಶಮಿಗೆ ಆಯ್ಕೆದಾರರು ನಿರಾಶೆ ಮೂಡಿಸಿದ್ದಾರೆ. ಗಾಯದಿಂದಾಗಿ ಶ್ರೀಲಂಕಾ ಟೆಸ್ಟ್ ಸರಣಿಯಿಂದ ಹೊರಬಿದ್ದರೂ ಬುಮ್ರಾ ಸ್ಥಾನಕ್ಕೆ ಮೊಹಮ್ಮದ್ ಶಮಿ ಅವರನ್ನು ಬಿಸಿಸಿಐ ಆಯ್ಕೆದಾರರು ಪರಿಗಣಿಸಿಲ್ಲ. ಅಲ್ಲದೆ 2027ರ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ತಂಡದ ಯೋಜನೆಗಳಲ್ಲಿಯೂ ಇರುವಂತೆ ಶಮಿ ಕಾಣುತ್ತಿಲ್ಲ. ಟೀಮ್ ಮ್ಯಾನೇಜ್‌ಮೆಂಟ್ ಯುವ ಆಟಗಾರರ ಮೇಲೆ ಹೆಚ್ಚಿನ ಒಲವು ತೋರಿಸುತ್ತಿದೆ.
ಮೊಹಮ್ಮದ್ ಶಮಿ ಎದುರಿಸುತ್ತಿರುವ ಪರಿಸ್ಥಿತಿ ಕುರಿತು ತಮ್ಮ ಜಹೀರ್ ಖಾನ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸದ್ಯ ಭಾರತ ತಂಡದ ಆದ್ಯತೆಗಳು ಬೇರೆಡೆ ಇರುವಂತೆ ಕಾಣುತ್ತಿವೆ ಎಂದು ಜಹೀರ್ ಖಾನ್ ಒಪ್ಪಿಕೊಂಡರೂ, ಶಮಿ ಹೋರಾಟ ಕೈಬಿಡಬೇಕಿಲ್ಲ ಎಂದು ಹೇಳಿದ್ದಾರೆ.
2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಆಡಬೇಕೆಂದ ಅಜಿಂಕ್ಯ ರಹಾನೆ!
“ಮುಂದೆ ಹೇಗೆ ಸಾಗಬೇಕು ಎಂಬುದು ನಿಮ್ಮ ನಿರ್ಧಾರ. ನೀವು ಪಂದ್ಯಗಳನ್ನು ಆಡುತ್ತಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ನೀವು ಆಯ್ಕೆಗೆ ಲಭ್ಯರಾಗಿರುತ್ತೀರಿ. ನಾನು ವಿಷಯವನ್ನು ಹೀಗೆ ನೋಡುತ್ತೇನೆ. ತಂಡದ ಚಿಂತನೆ ಬೇರೆ ರೀತಿಯದ್ದಾಗಿರಬಹುದು, ಆದರೆ ನಿಮ್ಮ ಆಲೋಚನೆ ಮುಖ್ಯ. ನೀವು ತಂಡಕ್ಕೆ ಕೊಡುಗೆ ನೀಡಲು ಬಯಸಿದರೆ, ಅದು ನಿಮ್ಮ ನಿರ್ಧಾರ. ತಂಡ ಪರಿಸ್ಥಿತಿಯನ್ನು ಹೇಗೆ ನೋಡುತ್ತಿದೆ ಎಂಬುದನ್ನು ಕೆಲವೊಮ್ಮೆ ವಿಶ್ಲೇಷಿಸಬಹುದು. ಆದರೆ ನೀವು ಅದಕ್ಕೆ ಹೇಗೆ ಕೊಡುಗೆ ನೀಡಬಹುದು ಎಂಬುದರತ್ತ ಗಮನ ಹರಿಸಬೇಕು. ಆಟಗಾರನಾಗಿ ಶಮಿ ಮಾಡುತ್ತಿರುವುದನ್ನೇ ನೀವು ಮಾಡಬೇಕು. ಅವರು ಪಂದ್ಯಗಳನ್ನು ಆಡುತ್ತಿದ್ದಾರೆ. ನೀವು ಹೇಳಿದಂತೆ, ಅವರು ಸತತವಾಗಿ ಪಂದ್ಯಗಳಲ್ಲಿ ಆಡುತ್ತಿರುವುದು ಬಹಳ ಮುಖ್ಯ,” ಎಂದು ಜಹೀರ್ ಖಾನ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಭಾರತ ತಂಡದಲ್ಲಿ ಹೆಚ್ಚುತ್ತಿರುವ ಗಾಯದ ಸಮಸ್ಯೆ ಬಗ್ಗೆ ಜಹೀರ್ ಪ್ರತಿಕ್ರಿಯೆ
ಭಾರತ ತಂಡದಲ್ಲಿ ಹೆಚ್ಚುತ್ತಿರುವ ಗಾಯಗಳ ಪಟ್ಟಿಯ ಬಗ್ಗೆಯೂ ಜಹೀರ್ ಖಾನ್ ಅವರನ್ನು ಪ್ರಶ್ನಿಸಲಾಯಿತು. ಜಸ್‌ಪ್ರೀತ್ ಬುಮ್ರಾ ಸತತ ಸರಣಿಗಳಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಪರದಾಡುತ್ತಿರುವ ಬೆನ್ನಲ್ಲೇ ವಾಷಿಂಗ್ಟನ್ ಸುಂದರ್, ಬಿ ಸಾಯಿ ಸುದರ್ಶನ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಆಟಗಾರರೂ ಫಿಟ್ನೆಸ್ ಸಮಸ್ಯೆಗಳನ್ನು ಎದುರಿಸಿದ್ದಾರೆ.
ʻ17 ಕೆಜಿ ತೂಕ ಇಳಿಕೆʼ: ಬಿಸಿಸಿಐ ಸೆಲೆಕ್ಟರ್‌ಗಳ ನಂಬಿಕೆಯನ್ನು ಸರ್ಫರಾಝ್ ಖಾನ್ ಮರಳಿ ಪಡೆದಿದ್ದೇಗೆ?
“ಗಾಯಗಳು ಕ್ರೀಡೆಯ ಭಾಗ. ಪ್ರತಿಯೊಬ್ಬ ಆಟಗಾರನ ಕ್ರಿಕೆಟ್ ಪಯಣದಲ್ಲೂ ಅವು ಎದುರಾಗುತ್ತವೆ. ನೀವು ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಬಗ್ಗೆ ಮಾತನಾಡಬಹುದು. ಆದರೆ ಘಟನೆಗಳು ನಡೆಯುವ ಸಮಯವನ್ನೂ ಅರ್ಥಮಾಡಿಕೊಳ್ಳಬೇಕು. ಕೆಲವು ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ. ಆದರೆ ಒಟ್ಟಾರೆ ಪರಿಸ್ಥಿತಿಗೆ ಅನುಗುಣವಾಗಿ ಯೋಜನೆ ರೂಪಿಸಬೇಕು. ವೇಗದ ಬೌಲರ್ ಗಾಯಗೊಂಡರೆ ಅಥವಾ ಕಠಿಣ ಹಂತವನ್ನು ಎದುರಿಸಿದರೆ, ನಮ್ಮ ನಿಯಂತ್ರಣದಲ್ಲಿರುವ ವಿಷಯಗಳನ್ನು ಸರಿಯಾಗಿ ನಿಯಂತ್ರಿಸುವುದು ಅತ್ಯಂತ ಮುಖ್ಯ. ಗಾಯದ ಮೂಲ ಕಾರಣವೇನು ಎಂಬುದು ತಿಳಿಯುವವರೆಗೆ ಮುಂದಿನ ಹೆಜ್ಜೆ ಇಡಲು ಸಾಧ್ಯವಿಲ್ಲ,” ಎಂದು ಜಹೀರ್ ಖಾನ್ ಹೇಳಿದ್ದಾರೆ.