ನವದೆಹಲಿ: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯು ಈಗಾಗಲೇ ಆರಂಭವಾಗಿದೆ. ಎಲ್ಲಾ 10 ತಂಡಗಳು ಒಂದೊಂದು ಪಂದ್ಯವನ್ನು ಮುಗಿಸಿವೆ. ಹಾಗಾಗಿ ಯಾವ ತಂಡಗಳು ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿವೆ ಎಂದು ಈಗಲೇ ಹೇಳುವುದು ಕಷ್ಟ. ಆದರೆ, ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಅವರು, ಈ ಬಾರಿ ಟೂರ್ನಿಯ ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯಬಲ್ಲ ನಾಲ್ಕು ತಂಡಗಳನ್ನು ಆರಿಸಿದ್ದಾರೆ. ಆದರೆ, ಅತ್ಯಂತ ಬಲಿಷ್ಠ ತಂಡ ಸನ್‌ರೈಸರ್ಸ್ ಹೈದರಾಬಾದ್ (SRH) ಹಾಗೂ ಅಜಿಂಕ್ಯ ರಹಾನೆ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡಗಳನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ ನಾಲ್ಕು ತಂಡಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಾಲ್ಕು ತಂಡಗಳನ್ನು ಆರಿಸಿದ್ದಾರೆ. ಇದರ ನಡುವೆ ಟೀಮ್ ಇಂಡಿಯಾ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಕೂಡ ತಮ್ಮ ನೆಚ್ಚಿನ ನಾಲ್ಕು ತಂಡಗಳನ್ನು ಆಯ್ಕೆ ಮಾಡಿದ್ದಾರೆ. ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಆರ್‌ಸಿಬಿ ಹಾಗೂ ಸಿಎಸ್‌ಕೆ ಎರಡೂ ತಂಡಗಳು ತಮ್ಮ ತಮ್ಮ ಮೊದಲನೇ ಪಂದ್ಯದಲ್ಲಿ ಗೆಲುವು ಪಡೆದಿವೆ. ಆದರೆ, ಮುಂಬೈ ಇಂಡಿಯನ್ಸ್ ಸೋಲು ಅನುಭವಿಸಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಪಡೆದಿವೆ. ಕಳೆದ ಆವೃತ್ತಿಯಲ್ಲಿ ಚೆನ್ನೈ, ಮುಂಬೈ ಹಾಗೂ ಡೆಲ್ಲಿ ತಂಡಗಳು ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದವು. ಆದರೆ, ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಗೆಲುವು ಪಡೆಯುವ ಮೂಲಕ ಆರ್‌ಸಿಬಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿತ್ತು. ಆದರೆ, ಚೆನ್ನೈ ಟೂರ್ನಿಯಿಂದ ಅಧಿಕೃತವಾಗಿ ಹೊರ ಬಿದ್ದಿತ್ತು.
ಐಪಿಎಲ್ ಕಾಮೆಂಟರಿ ಪ್ಯಾನೆಲ್‌ನಿಂದ ಇರ್ಫಾನ್ ಪಠಾಣ್ ಔಟ್
2025ರ ಐಪಿಎಲ್ ಟೂರ್ನಿಯ ಕಾಮೆಂಟರಿ ಪ್ಯಾನೆಲ್‌ನಿಂದ ಇರ್ಫಾನ್ ಪಠಾಣ್ ಅವರನ್ನು ತೆಗೆಯಲಾಗಿದೆ. "ಕಳೆದ ಹಲವು ವರ್ಷಗಳ ಹಿಂದೆ ಇರ್ಫಾನ್ ಪಠಾಣ್ ಕೆಲ ಆಟಗಾರರೊಂದಿಗೆ ಜಗಳವಾಡಿದ್ದರು. ಅಂದಿನಿಂದ ಅವರು ಆ ಘಟನೆಯನ್ನು ಆಕ್ರಮಣಕಾರಿಯಾಗಿ ಉಲ್ಲೇಖಿಸುತ್ತಿದ್ದಾರೆ. ಇತರ ಕಿರಿಯ ಆಟಗಾರರು ಕ್ರಾಸ್ ಫೈರ್ ನಲ್ಲಿ ಸಿಕ್ಕಿಹಾಕಿಕೊಂಡರು ಎಂಬ ವಿಷಯವನ್ನು ಎತ್ತಲಾಗಿತ್ತು. ಅವರ ಹೆಸರುಗಳನ್ನು ತೆಗೆದುಕೊಳ್ಳದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಪಠಾಣ್ ದ್ವೇಷಿಸುತ್ತಿದ್ದಾರೆಂಬ ಆರೋಪ ಇದೆ. ಈ ಕಾರಣದಿಂದ ಅವರನ್ನು ಐಪಿಎಲ್ ಟೂರ್ನಿಯ ಪ್ಯಾನೆಲ್‌ನಿಂದ ಕೈ ಬಿಡಲಾಗಿದೆ," ಎಂದು ಟೈಮ್ಸ್ ಆಫ್ ಇಂಡಿಯಾಗೆ ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಕ್ಕೂ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಿಯಮಿತವಾಗಿ ಇರ್ಫಾನ್ ಪಠಾಣ್ ಕಾಮೆಂಟರಿ ಮಾಡುತ್ತಿದ್ದರು. ಇರ್ಫಾನ್ ಪಠಾಣ್‌ಗೂ ಮುನ್ನ ಹರ್ಷ್ ಬೋಗ್ಲೆ ಹಾಗೂ ಸಂಜಯ್ ಮಾಂಜ್ರೇಕರ್ ಅವರನ್ನು ಕೂಡ ಕಾಮೆಂಟರಿ ಪ್ಯಾನೆಲ್‌ನಿಂದ ಕೈ ಬಿಡಲಾಗಿತ್ತು. ಕಳೆದ ಕೆಲ ವರ್ಷಗಳ ಬಳಿಕ ಈ ಇಬ್ಬರೂ ಕಮ್‌ಬ್ಯಾಕ್ ಮಾಡಿದ್ದರು.