ನವದೆಹಲಿ: ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಯ ನಿಮಿತ್ತ ಭಾರತ ತಂಡದ ಮಾಜಿ ವೇಗದ ಬೌಲರ್ ಜಹೀರ್ ಖಾನ್ (Zaheer Khan) ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ನೂತನ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಆ ಮೂಲಕ ದೀರ್ಘಕಾಲ ತಂಡದೊಂದಿಗೆ ಕೆಲಸ ಮಾಡಿದ್ದ ಸ್ಟೀಫನ್ ಫ್ಲೆಮಿಂಗ್ ಅವರ ಸ್ಥಾನವನ್ನು ಜಹೀರ್ ಖಾನ್ ತುಂಬಲಿದ್ದಾರೆ. 17 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಸುದೀರ್ಘ ಪಯಣ ನಡೆಸಿದ ಬಳಿಕ, ಫ್ಲೆಮಿಂಗ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರು ಇದೀಗ ಇಂಗ್ಲೆಂಡ್ ಟೆಸ್ಟ್ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಸಿಎಸ್‌ಕೆಯನ್ನು ತೊರೆಯಬೇಕಾಯಿತು.
ಜಹೀರ್ ಖಾನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸದಲ್ಲಿ ಮೂರನೇ ಮುಖ್ಯ ಕೋಚ್ ಆಗಲಿದ್ದಾರೆ. 2008ರಲ್ಲಿ ಕೆಪ್ಲರ್ ವೆಸಲ್ಸ್ ಮೊದಲ ಮುಖ್ಯ ಕೋಚ್ ಆಗಿದ್ದರೆ, 2009ರಿಂದ 2027ರವರೆಗೆ ನ್ಯೂಜಿಲೆಂಡ್‌ನ ಫ್ಲೆಮಿಂಗ್ ತಂಡದ ಜವಾಬ್ದಾರಿ ವಹಿಸಿದ್ದರು. 2011ರ ಏಕದಿನ ವಿಶ್ವಕಪ್ ವಿಜೇತ ಜಹೀರ್ ಖಾನ್, ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಹುದ್ದೆ ಅಲಂಕರಿಸಲಿರುವ ಮೊದಲ ಭಾರತೀಯರಾಗಲಿದ್ದಾರೆ.
ಅಭಿಷೇಕ್ ಶರ್ಮಾರನ್ನು ಕೂರಿಸಿ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಿ ಎಂದ ಆಕಾಶ್ ಚೋಪ್ರಾ!
ಜಹೀರ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಐಪಿಎಲ್ ಫ್ರಾಂಚೈಸಿಯೊಂದರ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಲಿದ್ದಾರೆ. ಆದರೆ ಈ ಮಟ್ಟದಲ್ಲಿ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. 2018ರಿಂದ 2022ರವರೆಗೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡದಲ್ಲಿ ಕ್ರಿಕೆಟ್ ಆಪರೇಷನ್ಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಜಹೀರ್, ಬಳಿಕ ‘ಗ್ಲೋಬಲ್ ಹೆಡ್ ಆಫ್ ಕ್ರಿಕೆಟ್ ಡೆವಲಪ್‌ಮೆಂಟ್’ ಹುದ್ದೆಗೂ ಬಡ್ತಿ ಪಡೆದಿದ್ದರು. 2025ರ ಐಪಿಎಲ್ ಆವೃತ್ತಿಯಲ್ಲಿ ಅವರು ಲಖನೌ ಸೂಪರ್ ಜಯಂಟ್ಸ್ (LSG) ತಂಡದೊಂದಿಗೆ ಕೂಡ ಕೆಲಸ ಮಾಡಿದ್ದರು.
ಸಿಎಸ್‌ಕೆ ಎಕ್ಸ್ ಪೋಸ್ಟ್
"ಎಡಗೈ ವೇಗದ ಬೌಲರ್ "ಟೇಕಿಂಗ್" ಓವರ್! ಚೆನ್ನೈ ಸೂಪರ್ ಕಿಂಗ್ಸ್‌ಗೆ ಹೆಡ್ ಕೋಚ್ ಆಗಿ ಜಹೀರ್ ಖಾನ್‌ಗೆ ಸ್ವಾಗತ!" ಎಂದು ಚೆನ್ನೈ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದೆ.
ಎಂಎಸ್ ಧೋನಿ ಜೊತೆ ಮತ್ತೆ ಒಂದಾದ ಜಹೀರ್ ಖಾನ್
ಎಂಎಸ್ ಧೋನಿ ಭಾರತ ತಂಡದ ಎಲ್ಲಾ ಮಾದರಿಗಳ ನಾಯಕನಾಗಿದ್ದ ಅವಧಿಯಲ್ಲಿ ಜಹೀರ್ ಖಾನ್ ತಂಡದ ಪ್ರಮುಖ ವೇಗದ ಬೌಲರ್ ಹಾಗೂ ಬೌಲಿಂಗ್ ವಿಭಾಗದ ನಾಯಕನಾಗಿದ್ದರು. ಧೋನಿ ನಾಯಕತ್ವದಲ್ಲಿ ಭಾರತ 2011ರ ಏಕದಿನ ವಿಶ್ವಕಪ್ ಗೆದ್ದಾಗ ಜಹೀರ್ ಪ್ರಮುಖ ಪಾತ್ರ ವಹಿಸಿದ್ದರು. ಟೂರ್ನಿಯಲ್ಲಿ 21 ವಿಕೆಟ್ ಪಡೆದಿದ್ದ ಅವರು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದರು.
2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ, ಜಹೀರ್ ಖಾನ್ ಅವರ ವೃತ್ತಿಜೀವನವನ್ನು ಶ್ಲಾಘಿಸಿ ಧೋನಿ ಭಾವನಾತ್ಮಕ ಸಂದೇಶ ರವಾನಿಸಿದ್ದರು. ತಮ್ಮ ನಾಯಕತ್ವದಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಜಹೀರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಧೋನಿ ಹೇಳಿದ್ದರು.
“ಅದ್ಭುತ ವೃತ್ತಿಜೀವನಕ್ಕಾಗಿ ಅಭಿನಂದನೆಗಳು ಝ್ಯಾಕ್. ನೀವು ಇಲ್ಲದೆ ಭಾರತ ತಂಡ ಸಾಧಿಸಿದ್ದನ್ನು ಸಾಧಿಸುವುದು ತುಂಬಾ ಕಷ್ಟವಾಗುತ್ತಿತ್ತು. ನನಗೆ ತಿಳಿದಿರುವ ಅತ್ಯಂತ ಬುದ್ಧಿವಂತ ವೇಗದ ಬೌಲರ್ ನೀವು. ಜೀವನ ಈಗಷ್ಟೇ ಆರಂಭವಾಗಿದೆ. ನೀವು ಭಾರತೀಯ ಕ್ರಿಕೆಟ್‌ಗೆ ಇನ್ನೂ ಸಾಕಷ್ಟು ಕೊಡುಗೆ ನೀಡಬಹುದು ಮತ್ತು ಖಂಡಿತವಾಗಿಯೂ ನೀಡುತ್ತೀರಿ. ನಿಮಗೆ ಎಲ್ಲ ಯಶಸ್ಸು ಸಿಗಲಿ,” ಎಂದು ಎಂಎಸ್ ಧೋನಿ ಅಂದು X (ಆಗ ಟ್ವಿಟರ್)ನಲ್ಲಿ ಬರೆದಿದ್ದರು.
2012ರ ಟಿ20 ವಿಶ್ವಕಪ್ ಸಂದರ್ಭದಲ್ಲಿ ಧೋನಿ, ಜಹೀರ್ ಖಾನ್ ಅವರನ್ನು ‘ಭಾರತದ ಬೌಲಿಂಗ್ ದಾಳಿಯ ಸಚಿನ್’ ಎಂದು ಬಣ್ಣಿಸಿದ್ದರು.