ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಸಾಲಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ಮಾಡು ಇಲ್ಲವೆ ಮಡಿ ಪರಿಸಸ್ಥಿತಿ ಎದುರಾಗಿದೆ. ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ, ಅಕ್ಷರ್ ಪಟೇಲ್ ನಾಯಕತ್ವದ ಡಿಸಿ ಇನ್ನುಳಿದ ನಾಲ್ಕೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಹಾಗಾಗಿ ಶುಕ್ರವಾರ ಸಂಜೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಕಾದಾಟ ನಡೆಸಲು ಡೆಲ್ಲಿ ಎದುರು ನೋಡುತ್ತಿದೆ. ಕಳೆದ ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಡೇವಿಡ್ ಮಿಲ್ಲರ್ ಈ ಪಂದ್ಯದಲ್ಲಿ ಆಡಲಿದ್ದಾರೆಯೇ ಎಂದು ಕಾದು ನೋಡಬೇಕಾಗಿದೆ. ಈ ಬಗ್ಗೆ ಸ್ವತಃ ಡೇವಿಡ್ ಮಿಲ್ಲರ್ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಎರಡು ಪಂದ್ಯಗಳಲ್ಲಿ ಡೇವಿಡ್ ಮಿಲ್ಲರ್ ಅವರನ್ನು ಹೊರಗಿಡಲಾಗಿತ್ತು. ಇದೀಗ ಕೆಕೆಆರ್ ಎದುರಿನ ಪಂದ್ಯದಲ್ಲಿ ಅವರನ್ನು ಆಡಿಸುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಏಕೆಂದರೆ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೇವಲ ನಾಲ್ಕು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿದೆ. ತಂಡದ ಸಮತೋಲನದ ದೃಷ್ಟಿಕೋನದಿಂದ ಡಿಸಿ ಮಿಲ್ಲರ್‌ರನ್ನು ಈ ನಾಲ್ಕು ಸ್ಥಾನಗಳಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಡೆಲ್ಲಿ ಅಗ್ರ ಕ್ರಮಾಂಕದಲ್ಲಿ ಪಥುಮ್ ನಿಸಾಂಕಾಗೆ ಅವಕಾಶ ನೀಡಿದೆ. ಟ್ರಿಸ್ಟನ್ ಸ್ಟಬ್ಸ್ ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಂಡರೆ, ಮಿಚೆಲ್ ಸ್ಟಾರ್ಕ್ ಮತ್ತು ಲುಂಗಿ ಎನ್‌ಗಿಡಿ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ಪರಿಣಾಮ ಮಿಲ್ಲರ್ ಅವರನ್ನು ಬೆಂಚ್ ಕಾಯಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ವಿಶ್ವದ ಅತ್ಯುತ್ತಮ ಟಿ20 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಮಿಲ್ಲರ್‌ಗೆ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದಿರುವುದು ನಿಸ್ಸಂದೇಹವಾಗಿ ನಿರಾಶಾದಾಯಕವಾಗಿದೆ.
RCB vs LSG ಪಂದ್ಯದ ಕೊನೆಯ ಓವರ್ ದಿಗ್ವೇಶ್ ಸಿಂಗ್‌ಗೆ ನೀಡಲು ಕಾರಣ ತಿಳಿಸಿದ ರಿಷಭ್ ಪಂತ್!
ಡೇವಿಡ್ ಮಿಲ್ಲರ್ ಹೇಳಿಕೆ
ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಆಫ್ರಿಕಾದ ತಾರೆ ಡೇವಿಡ್ ಮಿಲ್ಲರ್, "ಇದು ಖಂಡಿತವಾಗಿಯೂ ನಿರಾಶಾದಾಯಕ. ಪ್ರತಿಯೊಬ್ಬ ಆಟಗಾರನೂ ಪ್ರತಿ ಪಂದ್ಯವನ್ನು ಆಡಲು ಬಯಸುತ್ತಾನೆ, ಆದರೆ ಐಪಿಎಲ್‌ನ ರಚನೆಯು ಅಂತಿಮ ಹನ್ನೊಂದರಲ್ಲಿ ಕೇವಲ ನಾಲ್ಕು ವಿದೇಶಿ ಆಟಗಾರರು ಮಾತ್ರ ಕಾಣಿಸಿಕೊಳ್ಳಬಹುದು ಎಂದು ನಿರ್ದೇಶಿಸುತ್ತದೆ. ಅಂತಹ ಸನ್ನಿವೇಶದಲ್ಲಿ, ತಂಡದ ಸಂಯೋಜನೆಯು ಅತ್ಯಂತ ನಿರ್ಣಾಯಕವಾಗುತ್ತದೆ," ಎಂದು ಹೇಳಿದರು.
"ಇದು ನನ್ನ ಮೊದಲ ಐಪಿಎಲ್ ಅಲ್ಲ" ಎಂದು ಮಿಲ್ಲರ್ ಹೇಳಿದರು. ಟೂರ್ನಿಯ ಚಲನಶೀಲತೆ ಮತ್ತು ಪರಿಸ್ಥಿತಿಗಳನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಅವರು ಹೇಳಿಕೆಯಿಂದ ಅರ್ಥವಾಗುತ್ತದೆ. ಅವರ ಪ್ರಸ್ತುತ ಪಾತ್ರವೆಂದರೆ, ತಮ್ಮ ತಂಡದ ಸದಸ್ಯರಿಗೆ ಸಕಾರಾತ್ಮಕ ಶಕ್ತಿಯನ್ನು ಒದಗಿಸುವುದು ಮತ್ತು ತಮ್ಮದೇ ಆದ ಅವಕಾಶಕ್ಕೆ ಸಿದ್ಧರಾಗಿರುವುದು.
IPL 2026 Playoffs Scenario: ಸೋತ ಆರ್‌ಸಿಬಿ, ಗೆದ್ದ ಲಖನೌ ತಂಡದ ಪ್ಲೇ-ಆಫ್ ಲೆಕ್ಕಾಚಾರ ಹೇಗಿದೆ?
ಡೆಲ್ಲಿಗೆ ಮಾಡು ಇಲ್ಲವೆ ಮಡಿ ಪರಿಸ್ಥಿತಿ
"ನಮಗೆ ಈಗ, ಪ್ರತಿ ಪಂದ್ಯವು 'ಮಾಡು ಇಲ್ಲವೆ ಮಡಿ' ಪರಿಸ್ಥಿತಿಯಾಗಿದೆ. ಅರ್ಹತೆ ಪಡೆಯಲು ನಾವು ನಮ್ಮ ಉಳಿದ ನಾಲ್ಕೂ ಪಂದ್ಯಗಳನ್ನು ಗೆಲ್ಲಬೇಕು. ನಾವು ಸಂಪೂರ್ಣವಾಗಿ ಕಳಪೆ ಕ್ರಿಕೆಟ್ ಆಡಿಲ್ಲ, ಆದರೆ ಆಟದ ಕೆಲವು ಸಂಕ್ಷಿಪ್ತ ಹಂತಗಳಲ್ಲಿ ನಾವು ತಂಡವಾಗಿ ತಪ್ಪುಗಳನ್ನು ಮಾಡಿದ್ದೇವೆ - ಇದಕ್ಕಾಗಿ ನಾವು ಭಾರೀ ಬೆಲೆ ತೆರಬೇಕಾಯಿತು," ಎಂದು ಹೇಳಿದ್ದಾರೆ.
ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬಗ್ಗೆ ಪ್ರತಿಕ್ರಿಯಿಸಿದ ಮಿಲ್ಲರ್, "ಈ ಋತುವಿನಲ್ಲಿ ಪಿಚ್‌ನ ನಡವಳಿಕೆಯು ಅಸಮಂಜಸವಾಗಿದೆ. ಕೆಲವೊಮ್ಮೆ, ನಾವು ಹೆಚ್ಚಿನ ಸ್ಕೋರಿಂಗ್ ಮುಖಾಮುಖಿಗಳನ್ನು ನೋಡಿದ್ದೇವೆ, ಆದರೆ ಇತರ ಸಮಯಗಳಲ್ಲಿ ಬ್ಯಾಟಿಂಗ್‌ಗೆ ಕಠಿಣ ಸವಾಲಾಗಿದೆ ಎಂದು ಸಾಬೀತಾಗಿದೆ. ಬ್ಯಾಟಿಂಗ್ ಘಟಕವಾಗಿ, ನಾವು ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಒತ್ತಡಕ್ಕೆ ಒಳಗಾಗಿದ್ದೇವೆ," ಎಂದು ತಿಳಿಸಿದ್ದಾರೆ.
ನಿರ್ಣಾಯಕ ಕ್ಷಣಗಳಲ್ಲಿ ಹಲವು ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ ತಂಡವು ಭಾರಿ ನಷ್ಟ ಅನುಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಈ ಋತುವಿನಲ್ಲಿ ಪ್ರಸ್ತುತ ಕಠಿಣ ಪರಿಸ್ಥಿತಿಯಲ್ಲಿದೆ. ತಂಡವು 10 ಪಂದ್ಯಗಳಲ್ಲಿ ಆರು ಸೋಲುಗಳನ್ನು ಅನುಭವಿಸಿದೆ ಮತ್ತು ಪಾಯಿಂಟ್ಸ್ ಟೇಬಲ್‌ನಲ್ಲಿ ಏಳನೇ ಸ್ಥಾನದಲ್ಲಿದೆ. ಇದೀಗ ತಮ್ಮ ಪ್ಲೇಆಫ್ಸ್ ಭರವಸೆಯನ್ನು ಜೀವಂತವಾಗಿಡಲು, ತಂಡವು ತಮ್ಮ ಉಳಿದ ನಾಲ್ಕೂ ಪಂದ್ಯಗಳನ್ನು ಗೆಲ್ಲಬೇಕು.