ಚಂಡೀಗಢ: ಗುಜರಾತ್ ಟೈಟನ್ಸ್ ಎದುರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ (GT vs RR) ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಇಲ್ಲಿನ ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಓಪನಿಂಗ್ ಮಾಡಿದ ವೈಭವ್, 47 ಎಸೆತಗಳಲ್ಲಿ 96 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ತಮ್ಮ ತಂಡ 200ರ ಗಡಿ ದಾಟುವಲ್ಲಿ ನೆರವು ನೀಡಿದರು.
ತಮ್ಮ ಬುದ್ದಿವಂತಿಕೆಯ ಅರ್ಧಶತಕದ ನೆರವಿನಿಂದ ವೈಭವ್ ಸೂರ್ಯವಂಶಿ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ವೇಗವಾಗಿ 1000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅವರು 22 ಇನಿಂಗ್ಸ್‌ಗಳಿಂದ 932 ರನ್‌ಗಳನ್ನು ಗಳಿಸಿದ್ದರು. 1000 ರನ್ ಗಳಿಸಲು 68 ರನ್ ಅಗತ್ಯವಿತ್ತು. ಅದರಂತೆ ತಮ್ಮ 23ನೇ ಇನಿಂಗ್ಸ್‌ನಲ್ಲಿ ನಾಲ್ಕಂಕಿ ಮೊತ್ತವನ್ನು ಪೂರ್ಣಗೊಳಿಸಿದರು.
IPL 2026: ಯಾರಿಂದಲೂ ಸಾಧ್ಯವಾಗದ ಮತ್ತೊಂದು ದೊಡ್ಡ ದಾಖಲೆ ಬರೆದ ವೈಭವ್ ಸೂರ್ಯವಂಶಿ!
ಅವರು ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಆರಂಭಿಸಿ, ಬಳಿಕ ಇನಿಂಗ್ಸ್ ಮುಂದುವರಿದಂತೆ ವೇಗ ಹೆಚ್ಚಿಸಿದರು. 31 ಎಸೆತಗಳಲ್ಲಿ ತಮ್ಮ ಆರನೇ ಐಪಿಎಲ್ ಅರ್ಧಶತಕವನ್ನು ಪೂರೈಸಿದರು. ನಂತರ ಜೇಸನ್ ಹೋಲ್ಡರ್ ಎಸೆದ 16ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ 1000 ಐಪಿಎಲ್ ರನ್‌ಗಳ ಮೈಲುಗಲ್ಲನ್ನೂ ತಲುಪಿದರು.
ಆ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ ಟೂರ್ನಿಯಲ್ಲಿ ಅತಿ ವೇಗವಾಗಿ 1000 ರನ್‌ಗಳನ್ನು ಪೂರೈಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಹಿಂದೆ ಗುಜರಾತ್ ಟೈಟನ್ಸ್ ಆಟಗಾರ ಸಾಯಿ ಸುದರ್ಶನ್ 25 ಇನಿಂಗ್ಸ್‌ಗಳಲ್ಲಿ 1000 ರನ್‌ಗಳನ್ನು ಪೂರೈಸಿ ಈ ದಾಖಲೆಯನ್ನು ಹೊಂದಿದ್ದರು.
ವೇಗವಾಗಿ 1000 ಐಪಿಎಲ್ ರನ್ ಗಳಿಸಿದ ಭಾರತೀಯ ಬ್ಯಾಟರ್ಸ್ (ಇನಿಂಗ್ಸ್‌ಗಳಲ್ಲಿ)
1.ವೈಭವ್ ಸೂರ್ಯವಂಶಿ: 23
2.ಸಾಯಿ ಸುದರ್ಶನ್: 25
3.ರಜತ್ ಪಾಟಿದಾರ್: 30
4.ಋತುರಾಜ್ ಗಾಯಕ್ವಾಡ್: 31
4.ಸಚಿನ್ ತೆಂಡೂಲ್ಕರ್: 31
6.ತಿಲಕ್ ವರ್ಮಾ: 33
ಒಟ್ಟಾರೆ ಎರಡನೇ ವೇಗದ 1000 ರನ್
ವೈಭವ್ ಸೂರ್ಯವಂಶಿ ಐಪಿಎಲ್ ಟೂರ್ನಿಯಲ್ಲಿ ಅತಿ ವೇಗವಾಗಿ 1000 ರನ್ ಪೂರೈಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿರುವುದಷ್ಟೇ ಅಲ್ಲ, ಒಟ್ಟಾರೆ ಅತಿ ವೇಗವಾಗಿ ಈ ಮೈಲುಗಲ್ಲು ತಲುಪಿದ ಆಟಗಾರರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಅವರು ಒಟ್ಟಾರೆ ಎರಡನೇ ಅತಿ ವೇಗದ ಆಟಗಾರರ ಪಟ್ಟಿಗೆ ಸೇರಿದ್ದಾರೆ. ಆ ಮೂಲಕ ಲೆಡ್ಲ್ ಸೈಮನ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನೂ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ 1000 ರನ್ ಪೂರೈಸಿದ ದಾಖಲೆ ಮಾಜಿ ಆಸ್ಟ್ರೇಲಿಯಾ ಆರಂಭಿಕ ಬ್ಯಾಟರ್ ಶಾನ್ ಮಾರ್ಷ್ ಅವರ ಹೆಸರಿನಲ್ಲೇ ಇದೆ. ಅವರು ಕೇವಲ 21 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.