ನವದೆಹಲಿ: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದ್ದ ಇಂಗ್ಲೆಂಡ್ ಮತ್ತು ಶ್ರೀಲಂಕಾ (ENG vs SL) ನಡುವಿನ ಏಕದಿನ ತ್ರಿಕೋನ ಸರಣಿಯ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ (Harry Brook) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೂಕ್, ಕೇವಲ 114 ಎಸೆತಗಳಲ್ಲಿ ದ್ವಿಶತಕ ಪೂರೈಸುವ ಮೂಲಕ ಪುರುಷರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ದ್ವಿಶತಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಸೆಪ್ಟೆಂಬರ್ 30ರಂದು ವೆಸ್ಟ್ ಇಂಡೀಸ್ ವಿರುದ್ಧ 117 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದ ಭಾರತದ ಶುಭಮನ್ ಗಿಲ್ (Shubman Gill) ಅವರ ದಾಖಲೆಯನ್ನು ಬ್ರೂಕ್ ಮುರಿದಿದ್ದಾರೆ. ಗಿಲ್ ಅವರ ದಾಖಲೆ ಕೇವಲ 22 ದಿನಗಳಲ್ಲೇ ಮುರಿದಿರುವುದು ಈ ಸಾಧನೆಯ ವಿಶೇಷತೆಯಾಗಿದೆ.
ಇಂಗ್ಲೆಂಡ್ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಹ್ಯಾರಿ ಬ್ರೂಕ್ ಆರಂಭದಲ್ಲಿ ಎಚ್ಚರಿಕೆಯಿಂದ ಆಟವಾಡಿದರು. ಒಂದು ಹಂತದಲ್ಲಿ ಅವರು 24 ಎಸೆತಗಳಲ್ಲಿ 13 ರನ್ ಗಳಿಸಿದ್ದರು. ಆದರೆ ನಂತರ ತಮ್ಮ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿದ ಅವರು ಶ್ರೀಲಂಕಾದ ಬೌಲರ್ಗಳನ್ನು ಕಂಗೆಡಿಸಿದರು. ಬ್ರೂಕ್ ತಮ್ಮ ಇನಿಂಗ್ಸ್ನಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್ಗಳನ್ನು ಸಿಡಿಸಿದರು. ಕೊನೆಯ ಹಂತದಲ್ಲಿ ರನ್ಗಳ ವೇಗವನ್ನು ಮತ್ತಷ್ಟು ಹೆಚ್ಚಿಸಿದ ಅವರು, ದ್ವಿಶತಕದ ಗಡಿ ದಾಟಿದ ಬಳಿಕವೂ ಆಕ್ರಮಣಕಾರಿ ಆಟ ಮುಂದುವರಿಸಿದರು. ಅಂತಿಮ ಎಸೆತದಲ್ಲಿ ಕ್ಯಾಚ್ ಕೊಟ್ಟು ಔಟಾಗುವ ಮೊದಲು 202 ರನ್ ಗಳಿಸಿದ್ದರು. ಅವರ ಈ ಅದ್ಭುತ ಇನಿಂಗ್ಸ್ಗೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು.
IND vs NZ: ಸಂಜು-ನಮನ್ ಸ್ಪೋಟಕ ಬ್ಯಾಟಿಂಗ್, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ!
ಶುಭಮನ್ ಗಿಲ್ರ ವಿಶ್ವ ದಾಖಲೆ ಮುರಿದ ಹ್ಯಾರಿ ಬ್ರೂಕ್
ಪುರುಷರ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 200 ರನ್ ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಈಗ ಹ್ಯಾರಿ ಬ್ರೂಕ್ ಅಗ್ರಸ್ಥಾನಕ್ಕೇರಿದ್ದಾರೆ. ಆ ಮೂಲಕ 117 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದ ಗಿಲ್ ಅವರನ್ನು ಬ್ರೂಕ್ ಹಿಂದಿಕ್ಕಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ವೇಗದ ದ್ವಿಶತಕ ಬಾರಿಸಿದ ಬ್ಯಾಟರ್ಸ್
ಹ್ಯಾರಿ ಬ್ರೂಕ್ vs ಶ್ರೀಲಂಕಾ-114 ರನ್ಗಳು
ಶುಭಮನ್ ಗಿಲ್ vs ವೆಸ್ಟ್ ಇಂಡೀಸ್- 117 ರನ್ಗಳು
ಇಶಾನ್ ಕಿಶನ್ vs ಬಾಂಗ್ಲಾದೇಶ- 126 ರನ್ಗಳು
ಗ್ಲೆನ್ ಮ್ಯಾಕ್ಸ್ವೆಲ್ vs ಅಫ್ಘಾನಿಸ್ತಾನ- 128 ರನ್ಗಳು
ಕ್ರಿಸ್ ಗೇಲ್ vs ಜಿಂಬಾಬ್ವೆ- 138 ರನ್ಗಳು
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಗಿಲ್ ಸೆಪ್ಟೆಂಬರ್ 30ರಂದು ಗುವಾಹಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 133 ಎಸೆತಗಳಲ್ಲಿ ಅಜೇಯ 223 ರನ್ ಗಳಿಸಿದ್ದರು. ಅವರು 117 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಇಶಾನ್ ಕಿಶನ್ ಅವರ ದಾಖಲೆಯನ್ನು ಮುರಿದಿದ್ದರು. ಇದೀಗ ಬ್ರೂಕ್ ಅದಕ್ಕಿಂತ ಮೂರು ಎಸೆತ ಕಡಿಮೆ ತೆಗೆದುಕೊಂಡು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ಪರ ಮೊದಲ ಏಕದಿನ ದ್ವಿಶತಕ
ಬ್ರೂಕ್ ಅವರ ಈ ಸಾಧನೆಯ ಮತ್ತೊಂದು ವಿಶೇಷವೆಂದರೆ, ಪುರುಷರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದ್ವಿಶತಕ ಗಳಿಸಿದ ಮೊದಲ ಇಂಗ್ಲೆಂಡ್ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ವೈಯಕ್ತಿಕ ಮೊತ್ತದ ದಾಖಲೆ ಬೆನ್ ಸ್ಟೋಕ್ಸ್ ಅವರ ಹೆಸರಿನಲ್ಲಿತ್ತು. ಅವರು 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅಜೇಯ 182 ರನ್ ಗಳಿಸಿದ್ದರು. ಈಗ 202 ರನ್ ಗಳಿಸಿರುವ ಬ್ರೂಕ್, ಸ್ಟೋಕ್ಸ್ ಅವರ ದಾಖಲೆಯನ್ನೂ ಹಿಂದಿಕ್ಕಿದ್ದಾರೆ.
ಇಂಗ್ಲೆಂಡ್ಗೆ 429 ರನ್ಗಳ ಬೃಹತ್ ಮೊತ್ತ
ಬ್ರೂಕ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 429 ರನ್ ಗಳಿಸಿತು. ಇದು ಪಾಕಿಸ್ತಾನದಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದೆ. ಇಂಗ್ಲೆಂಡ್ ಪರ ಜೋ ರೂಟ್ 66 ಎಸೆತಗಳಲ್ಲಿ 69 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ವಿಲ್ ಜ್ಯಾಕ್ಸ್ ಕೂಡ ವೇಗವಾಗಿ 66 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಇನಿಂಗ್ಸ್ನ ಕೊನೆಯ 25 ಓವರ್ಗಳಲ್ಲಿ ಇಂಗ್ಲೆಂಡ್ 296 ರನ್ ಗಳಿಸಿದ್ದು, ತಂಡದ ಆಕ್ರಮಣಕಾರಿ ಬ್ಯಾಟಿಂಗ್ಗೆ ಸಾಕ್ಷಿಯಾಯಿತು.