ನವದೆಹಲಿ: ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ವೇಗದ ಬೌಲರ್ ಹರ್ಷಿತ್ ರಾಣಾ (Harshit Rana) ಅವರು ಗಾಯದಿಂದ ಇನ್ನೂ ಗುಣಮುಖರಾಗದ ಕಾರಣ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕೆಕೆಆರ್ ಹೆಡ್ ಕೋಚ್ ಅಭಿಷೇಕ್ ನಾಯರ್ ಅವರು ಈ ಬಗ್ಗೆ ಖಚಿತಪಡಿಸಿದ್ದಾರೆ. ಇದರೊಂದಿಗೆ ಕಳೆದ ಸೀಸನ್‌ನಲ್ಲಿ 8ನೇ ಸ್ಥಾನಕ್ಕೆ ಕುಸಿದಿದ್ದ ಕೆಕೆಆರ್ ತಂಡಕ್ಕೆ 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಭಾರಿ ಹಿನ್ನಡೆಯಾಗಿದೆ. ಮಾರ್ಚ್ 18 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸುವ ಮೂಲಕ ಐಪಿಎಲ್ ಟೂರ್ನಿ ಆರಂಭವಾಗಲಿದೆ.
ಅಭಿಷೇಕ್ ನಾಯರ್ ಅವರು ಸ್ಪೋರ್ಟ್ಸ್ ನೌಗೆ ನೀಡಿದ ಪ್ರತಿಕ್ರಿಯೆಯಲ್ಲಿ, ಹರ್ಷಿತ್ ರಾಣಾ ಗಾಯದ ಕಾರಣದಿಂದ ಈ ಐಪಿಎಲ್ ಸೀಸನ್‌ನಿಂದ ಸಂಪೂರ್ಣವಾಗಿ ಹೊರಗುಳಿದಿರುವುದನ್ನು ಬಹುತೇಕ ದೃಢಪಡಿಸಿದ್ದಾರೆ. ನಾವು ಕೆಲವು ಬೌಲರ್‌ಗಳನ್ನು ಅಭ್ಯಾಸದ ಸಮಯದಲ್ಲಿ ಪರೀಕ್ಷಿಸಿದ್ದೇವೆ. ಅವರಲ್ಲಿ ಯಾರನ್ನು ತಂಡದಲ್ಲಿ ಬದಲಿ ವೇಗಿಯಾಗಿ ಸೇರಿಸಬಹುದು ಎಂಬುದನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಭಿಷೇಕ್ ನಾಯರ್ ಅವರು ಕೋಲ್ಕತಾ ನೈಟ್ ರೈಡರ್ಸ್ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಾ, ಹರ್ಷಿತ್ ರಾಣಾ ಅವರ ಗೈರುಹಾಜರಿಯನ್ನು ದೊಡ್ಡ ನಷ್ಟವೆಂದು ಹೇಳಿದ್ದಾರೆ.
“ಮೊದಲಿಗೆ ಹೇಳಬೇಕಾದರೆ, ಹರ್ಷಿತ್ ರಾಣಾ ಈ ಸೀಸನ್‌ನಿಂದ ಹೊರಗುಳಿದಿರುವುದು ನಮಗೆ ದೊಡ್ಡ ಹೊಡೆತ. ಕಳೆದ ಕೆಲವು ಸೀಸನ್‌ಗಳಲ್ಲಿ ವಿಶೇಷವಾಗಿ ಚಾಂಪಿಯನ್ ಆದ ಸೀಸನ್‌ನಲ್ಲಿ ಅವರು ತಂಡದ ಅವಿಭಾಜ್ಯ ಅಂಗವಾಗಿದ್ದರು. ಕಳೆದ ಒಂದು ವರ್ಷದಿಂದ ಅವರು ಕ್ರಿಕೆಟಿಗನಾಗಿ ಪರಿಪಕ್ವತೆಯನ್ನು ಸಾಧಿಸಿದ್ದಾರೆ. ಆದ್ದರಿಂದ ಹರ್ಷಿತ್ ರಾಣಾ ಇಲ್ಲದಿರುವುದು ನಮಗೆ ಖಂಡಿತವಾಗಿ ಕಷ್ಟ. ಅವರನ್ನು ಬದಲಾಯಿಸುವುದು ಸುಲಭವಲ್ಲ,” ಎಂದು ಅಭಿಷೇಕ್ ನಾಯರ್ ತಿಳಿಸಿದ್ದಾರೆ.
“ಆದರೂ, ಕಳೆದ ಕೆಲವು ದಿನಗಳಿಂದ ನಾವು ಕೆಲವು ಬೌಲರ್‌ಗಳನ್ನು ಗಮನಿಸಿದ್ದೇವೆ. ನಮ್ಮ ಲೀಡರ್‌ಶಿಪ್ ತಂಡದ ಸಹಾಯದಿಂದ ಯಾರು ಆ ಪಾತ್ರಕ್ಕೆ ಸರಿಹೊಂದುತ್ತಾರೆ ಮತ್ತು ತಂಡದ ಸಮತೋಲನಕ್ಕೆ ಯಾರು ನೆರವಾಗಬಹುದು ಎಂಬುದನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ. ನಾವು ಇನ್ನೂ ಅದನ್ನು ಪರಿಶೀಲಿಸುತ್ತಿದ್ದೇವೆ. ಆದರೆ ಶೀಘ್ರದಲ್ಲೇ ಹರ್ಷಿತ್ ರಾಣಾಗೆ ಉತ್ತಮ ಬದಲಿ ಆಟಗಾರನನ್ನು ಕಂಡುಹಿಡಿಯುವ ನಿರೀಕ್ಷೆಯಿದೆ,” ಎಂದು ಅವರು ಹೇಳಿದ್ದಾರೆ.
ಶ್ರೀಲಂಕಾ ತಂಡದ ಮಾರಕ ವೇಗಿ ಮತೀಶ ಪತಿರಣ ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಹಾಗೂ ಐಪಿಎಲ್ ಟೂರ್ನಿಗೆ ಲಭ್ಯರಾಗಿದ್ದಾರೆಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಆ ಮೂಲಕ ಹರ್ಷಿತ್ ರಾಣಾ ಅವರನ್ನು ಕಳೆದುಕೊಂಡಿರುವ ಕಕೆಆರ್‌ಗೆ ಇದೀಗ ಮತೀಶ ಪತಿರಣ ಅವರ ಆಗಮನದಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಶ್ರೀಲಂಕಾ ಕ್ರಿಕೆಟ್ ಕಾರ್ಯದರ್ಶಿ ಬಾಂಡುಲಾ ದಿಸಾನಾಯಕೆ ಅವರು, ಮತೀಶ ಪತಿರಣ ತಮ್ಮ ಪುನಶ್ಚೇತನಕ ಕಾರ್ಯವನ್ನು ಪೂರ್ಣಗೊಳಿಸಿದ್ದು, ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಅಗತ್ಯವಾದ ಅನುಮತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಪತಿರಣ 2026ರ ಟಿ20 ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಟೂರ್ನಿಯ ಇನ್ನುಳಿದ ಭಾಗವನ್ನು ಕಳೆದುಕೊಳ್ಳಬೇಕಾಗಿತ್ತು ಮತ್ತು ಶ್ರೀಲಂಕಾ ತಂಡ ಟೂರ್ನಿಯ ಸೂಪರ್-8ರ ಹಂತದಲ್ಲಿ ಹೊರ ಬಿದ್ದಿತ್ತು.