ನವದೆಹಲಿ: ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ಆಟಗಾರ್ತಿಯರೊಂದಿಗೆ ಕೈಕುಲುಕದಿರುವ (IND vs PAK Handshake Row) ಭಾರತದ ಆಟಗಾರ್ತಿಯರ ನಿರ್ಧಾರ ಮುಂದುವರಿದಿದೆ. 2026ರ ಮಹಿಳಾ ಏಷ್ಯಾ ಕಪ್ (Women's Asia Cup 2026) ಟೂರ್ನಿಯಲ್ಲಿಯೂ ಇದೇ ಬೆಳವಣಿಗೆ ಕಂಡುಬಂದಿತ್ತು. ಚಾಂಪಿಯನ್ ಆದ ಬಳಿಕ ಭಾರತ ತಂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದ ವಿವಾದದ ಕುರಿತು ಭಾರತದ ಮಾಜಿ ನಾಯಕ ಕಪಿಲ್ ದೇವ್ (Kapil Dev) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಇಂತಹ ವಿಚಾರಗಳಲ್ಲಿ ನಾನು ನನ್ನ ಸರ್ಕಾರ ಮತ್ತು ಕ್ರಿಕೆಟ್ ಮಂಡಳಿಯ ನೀತಿಯನ್ನು ಅನುಸರಿಸುತ್ತೇನೆ. ನನ್ನ ಕ್ರಿಕೆಟ್ ಮಂಡಳಿ ಕೈಕುಲುಕಬಾರದು ಎಂದು ಹೇಳಿದರೆ, ನಾನು ಕೈಕುಲುಕುವುದಿಲ್ಲ. ಪಾಕಿಸ್ತಾನದ ವಿರುದ್ಧ ಆಡಬಾರದು ಎಂದು ಮಂಡಳಿ ಹೇಳಿದರೆ, ನಾನು ಆಡುವುದಿಲ್ಲ. ಆದರೆ ನನ್ನ ಸರ್ಕಾರ ಮತ್ತು ಕ್ರಿಕೆಟ್ ಮಂಡಳಿ ಪಾಕಿಸ್ತಾನದ ವಿರುದ್ಧ ಹೋಗಿ ಆಡಬೇಕು ಎಂದು ಹೇಳಿದರೆ, ನಾನು ಖಂಡಿತವಾಗಿಯೂ ಆಡುತ್ತೇನೆ,” ಎಂದು ಕಪಿಲ್ ದೇವ್ ಹೇಳಿದ್ದಾರೆ.
ಕಪಿಲ್ ದೇವ್ ಮುಂದುವರಿದು ಮಾತನಾಡುತ್ತಾ, “ಕೆಲವೊಮ್ಮೆ ಇಂತಹ ವಿಚಾರಗಳನ್ನು ಸರ್ಕಾರದ ನಿರ್ಧಾರಕ್ಕೆ ಬಿಟ್ಟುಬಿಡಬೇಕು. ನಾನು ಆ ಸ್ಥಾನದಲ್ಲಿದ್ದರೆ ನನ್ನದೇ ನೀತಿಯನ್ನು ಅನುಸರಿಸುವ ಬದಲು ಸರ್ಕಾರದ ನೀತಿಯನ್ನು ಪಾಲಿಸುತ್ತಿದ್ದೆ. ನನ್ನ ವೈಯಕ್ತಿಕ ಆಲೋಚನೆಗಿಂತ ಸರ್ಕಾರದ ನೀತಿಯೇ ಹೆಚ್ಚು ಮಹತ್ವದ್ದಾಗಿದೆ. ನಾನು ಏನು ಯೋಚಿಸುತ್ತೇನೆ ಎಂಬುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ದೇಶವೇ ಮೊದಲು ಬರುತ್ತದೆ,” ಎಂದು ತಿಳಿಸಿದ್ದಾರೆ.
ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ; ತಾವು ಎದುರಿಸಿದ ಭಾರತದ ಅತ್ಯಂತ ಕಠಿಣ ಬ್ಯಾಟರ್ ಆರಿಸಿದ ಪ್ಯಾಟ್ ಕಮಿನ್ಸ್!
ಪಹಲ್ಗಾಮ್ ದಾಳಿಯ ಬಳಿಕ ಬದಲಾದ ಪರಿಸ್ಥಿತಿ
ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧದಲ್ಲೂ ಹಲವು ಬದಲಾವಣೆಗಳು ಕಂಡುಬಂದಿವೆ. ಭಾರತೀಯ ಪುರುಷ ಮತ್ತು ಮಹಿಳಾ ತಂಡಗಳು ಪಾಕಿಸ್ತಾನ ಆಟಗಾರರೊಂದಿಗೆ ಮೈದಾನದಲ್ಲಿ ಕೈಕುಲುಕದಿರುವುದು ಇತ್ತೀಚಿನ ಪಂದ್ಯಗಳಲ್ಲಿ ಗಮನಕ್ಕೆ ಬಂದಿದೆ.
2026ರ ಮಹಿಳಾ ಏಷ್ಯಾ ಕಪ್‌ನಲ್ಲೂ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸೇರಿದಂತೆ ಆಟಗಾರರು ಪಾಕಿಸ್ತಾನ ತಂಡದ ಆಟಗಾರರೊಂದಿಗೆ ಕೈಕುಲುಕಿರಲಿಲ್ಲ. ಇದೇ ಟೂರ್ನಿಯ ಬಳಿಕ ಭಾರತ ತಂಡ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಿರುವ ವಿಚಾರವೂ ಚರ್ಚೆಗೆ ಕಾರಣವಾಗಿತ್ತು.
ಮೊಹ್ಸಿನ್ ನಖ್ವಿಯಿಂದ ಮಹಿಳಾ ಏಷ್ಯಾ ಕಪ್ ಸ್ವೀಕರಿಸದೇ ಇರಲು ಕಾರಣ ತಿಳಿಸಿದ ಕೋಚ್ ಅಮೋಲ್ ಮಝುಮ್ದಾರ್!
ಕಪಿಲ್ ದೇವ್ ಅವರು ಪಾಕಿಸ್ತಾನದ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಮಾಜಿ ಕ್ರಿಕೆಟಿಗರ ಗುಂಪಿನಲ್ಲಿದ್ದಾರೆ. ಇಮ್ರಾನ್ ಖಾನ್ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಮಾನವೀಯ ಸೌಲಭ್ಯಗಳನ್ನು ಒದಗಿಸಬೇಕೆಂದು ಮಾಜಿ ಅಂತಾರಾಷ್ಟ್ರೀಯ ನಾಯಕರು ಪತ್ರ ಬರೆದಿದ್ದರು.
ಇಮ್ರಾನ್ ಖಾನ್ ಪರ ಧ್ವನಿ ಎತ್ತಿದ ಕಪಿಲ್ ದೇವ್
ಈ ವಿಚಾರದ ಕುರಿತು ಮಾತನಾಡಿದ ಕಪಿಲ್ ದೇವ್, ಪಾಕಿಸ್ತಾನ ಸರ್ಕಾರದ ನೀತಿಯ ಬಗ್ಗೆ ತಮಗೆ ಹೆಚ್ಚು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಆದರೆ ಇಮ್ರಾನ್ ಖಾನ್ ಅವರಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಮತ್ತು ಮಾನವೀಯ ಚಿಕಿತ್ಸೆ ದೊರೆಯಬೇಕು ಎಂಬುದಷ್ಟೇ ತಮ್ಮ ಆಶಯ ಎಂದು ತಿಳಿಸಿದ್ದಾರೆ.
“ಕೆಲವು ನಿಯಮಗಳು ಮತ್ತು ಕ್ರಮಗಳಿವೆ. ಅವುಗಳನ್ನು ಪಾಲಿಸಬೇಕು. ಇಮ್ರಾನ್ ಖಾನ್ ಅವರ ಪರಿಸ್ಥಿತಿಯನ್ನು ನೋಡಿದಾಗ ಬೇಸರವಾಗುತ್ತದೆ. ಅವರು ನಮ್ಮೊಂದಿಗೆ ಕ್ರಿಕೆಟ್ ಆಡಿದ್ದಾರೆ ಮತ್ತು ತಮ್ಮ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಆದ್ದರಿಂದ ಅವರಿಗೆ ಸೂಕ್ತ ಹಾಗೂ ಮಾನವೀಯ ರೀತಿಯಲ್ಲಿ ಚಿಕಿತ್ಸೆ ದೊರೆಯಬೇಕು ಎಂಬುದು ನಮ್ಮ ಮೂಲಭೂತ ಬೇಡಿಕೆ,” ಎಂಬ ನಿಲುವನ್ನು ಕಪಿಲ್ ದೇವ್ ಈ ಹಿಂದೆ ವ್ಯಕ್ತಪಡಿಸಿದ್ದರು.