ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ರವಿ ಶಾಸ್ತ್ರಿ (Ravi Shastri) ಹೆಡ್ ಕೋಚ್ ಆಗುವುದಕ್ಕೂ ಮುನ್ನ ಕ್ರಿಕೆಟ್ ನಿರ್ದೇಶಕರಾಗಿದ್ದರು. 2024ರ ಇಂಗ್ಲೆಂಡ್ ಪ್ರವಾಸದ ವೇಳೆ ಅವರು ಮೊದಲ ಬಾರಿ ಭಾರತ ತಂಡದ ಡ್ರೆಸ್ಸಿಂಗ್ ಕೊಠಡಿಗೆ ಆಗಮಿಸಿದ್ದಾಗ ಆಗಿದ್ದ ಅನುಭವವನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಸ್ಮರಿಸಿಕೊಂಡಿದ್ದಾರೆ. ಈ ವೇಳೆ ಭಾರತ ತಂಡ, ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿತ್ತು. ನಂತರ, ವೈಟ್ ಸರಣಿಗಳನ್ನು ಆಡುವುದಕ್ಕೂ ಮುನ್ನ ರವಿ ಶಾಸ್ತ್ರಿ ಭಾರತ ತಂಡಕ್ಕೆ ಬಂದಿದ್ದರು ಹಾಗೂ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ್ದರು.
ಒನ್8 ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, "ನಾವು ತಂಡದಲ್ಲಿ ಒಟ್ಟಿಗೆ ಕೆಲಸ ಮಾಡಲು ಆರಂಭಿಸುವುದಕ್ಕೂ ಮುನ್ನ ನಾನು ರವಿ ಶಾಸ್ತ್ರಿ ಅವರನ್ನು ಕೆಲವು ಬಾರಿ ಭೇಟಿಯಾಗಿದ್ದೆ. 2014ರ ಇಂಗ್ಲೆಂಡ್ ಪ್ರವಾಸದ ವೇಳೆ, ಟೆಸ್ಟ್ ಸರಣಿ ಮುಗಿದು ವೈಟ್‌ಬಾಲ್ ಸರಣಿ ಆರಂಭವಾಗುವ ಮೊದಲು ಅವರು ತಂಡಕ್ಕೆ ಸೇರ್ಪಡೆಯಾಗಿದ್ದರು. ಆ ಸಮಯದಲ್ಲಿ ತಂಡಕ್ಕೆ ನಾಯಕತ್ವದ ಮಾರ್ಗದರ್ಶನ ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಅಗತ್ಯವಿತ್ತು. ತಂಡವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಹಾಗೂ ವ್ಯವಸ್ಥೆಯನ್ನು ಪುನಃ ಸ್ಥಿರಗೊಳಿಸುವ ಅಗತ್ಯ ಎದುರಾಗಿತ್ತು," ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಕೊಹ್ಲಿ, ಶಾಸ್ತ್ರಿ ಅವರ ಆಗಮನವು ತಂಡದ ವಾತಾವರಣ ಮತ್ತು ತಮ್ಮ ವೈಯಕ್ತಿಕ ಬೆಳವಣಿಗೆಯ ಮೇಲೂ ಮಹತ್ವದ ಪ್ರಭಾವ ಬೀರಿತು ಎಂದು ನೆನಪಿಸಿಕೊಂಡರು. ತಂಡದೊಳಗೆ ಆತ್ಮವಿಶ್ವಾಸ ಮತ್ತು ಸ್ಪಷ್ಟತೆಯನ್ನು ತುಂಬುವಲ್ಲಿ ಶಾಸ್ತ್ರಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅವರು ಗುಣಗಾನ ಮಾಡಿದ್ದಾರೆ.
ʻಬೌನ್ಸರ್‌ಗೆ ಭಯ ಇದೆಯಾ?ʼ:2014ರಲ್ಲಿ ರವಿ ಶಾಸ್ತ್ರಿ ನೀಡಿದ್ದ ಸಲಹೆಯನ್ನು ನೆನೆದ ವಿರಾಟ್ ಕೊಹ್ಲಿ!
"ನನ್ನ ಗಮನ ಸೆಳೆಯಲು ಅವರು ನಿಜವಾಗಿಯೂ ನನ್ನನ್ನು ತಮ್ಮತ್ತ ಸೆಳೆಯುವಂತೆ ಮಾಡಿದರು. ಮೊದಲ ಬಾರಿ ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ಬಂದು ಮಾತನಾಡಿದಾಗ, ನಾವು ಸಂಕಷ್ಟದ ಪರಿಸ್ಥಿತಿಯಲ್ಲಿದ್ದೆವು. 2014ರ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ನಾನು ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡಿದ್ದರಿಂದ ಮಾನಸಿಕವಾಗಿ ಕುಗ್ಗಿದ್ದೆ.
ಆದರೆ ಅವರು ಮಾತನಾಡಲು ಆರಂಭಿಸಿದ ಕ್ಷಣವೇ ನಾನು ಅಕ್ಷರಶಃ ಬೆಚ್ಚಿಬಿದ್ದೆ. ಮುಖಾಮುಖಿಯಾಗಿ ಅಷ್ಟು ತೀವ್ರತೆ, ಆತ್ಮವಿಶ್ವಾಸ ಮತ್ತು ಶಕ್ತಿಯೊಂದಿಗೆ ಮಾತನಾಡುವ ವ್ಯಕ್ತಿಯನ್ನು ನಾನು ಅದುವರೆಗೆ ನೋಡಿರಲಿಲ್ಲ. ಆಗ ನನಗೆ, ‘ವಾವ್!’ ಎಂಬ ಭಾವನೆ ಮೂಡಿತ್ತು. ಅವರು ಮಾತನಾಡುತ್ತಿದ್ದ ರೀತಿ, ಅವರ ಧ್ವನಿಯಲ್ಲಿದ್ದ ದೃಢತೆ ಮತ್ತು ಸಂದೇಶದ ಸ್ಪಷ್ಟತೆ ನನ್ನ ಗಮನವನ್ನು ಸಂಪೂರ್ಣವಾಗಿ ಸೆಳೆಯಿತು," ಎಂದು ವಿರಾಟ್ ಕೊಹ್ಲಿ ಸ್ಮರಿಸಿಕೊಂಡಿದ್ದಾರೆ.
ತಮ್ಮ ವೃತ್ತಿಜೀವನದ ಮಹತ್ವದ ಹಂತದಲ್ಲಿ ರವಿ ಶಾಸ್ತ್ರಿ ಅವರ ಪ್ರಭಾವ ಎಷ್ಟು ದೊಡ್ಡದಾಗಿತ್ತು ಎಂಬುದನ್ನು ಕೊಹ್ಲಿ ಈ ನೆನಪುಗಳ ಮೂಲಕ ವಿವರಿಸಿದ್ದಾರೆ. ಇಂಗ್ಲೆಂಡ್‌ನ ನಿರಾಸಾದಾಯಕ ಸರಣಿಯ ನಂತರ ಆತ್ಮವಿಶ್ವಾಸ ಕಳೆದುಕೊಂಡಿದ್ದ ಕೊಹ್ಲಿಗೆ ಶಾಸ್ತ್ರಿ ಅವರ ನಾಯಕತ್ವ, ಮಾರ್ಗದರ್ಶನ ಮತ್ತು ಪ್ರೇರಣಾದಾಯಕ ಮಾತುಗಳು ಹೊಸ ಚೈತನ್ಯ ತುಂಬಿದ್ದವು.
2027ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಆಡಬಲ್ಲ ಮೂವರು ಯುವ ಆಟಗಾರರು!
ನಂತರ ರವಿ ಶಾಸ್ತ್ರಿ ಅವರು ಭಾರತ ತಂಡದ ಮುಖ್ಯ ಕೋಚ್ ಆಗಿ ಮರಳಿದರು. ಆ ವೇಳೆಗೆ ವಿರಾಟ್ ಕೊಹ್ಲಿ ಮೂರು ಮಾದರಿಗಳಲ್ಲೂ ನಾಯಕತ್ವ ವಹಿಸಿಕೊಂಡಿದ್ದರು. ಈ ಜೋಡಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದು, ತಕ್ಷಣದ ಫಲಿತಾಂಶಗಳನ್ನು ಮಾತ್ರ ನೀಡದೆ, ಹಲವು ಪ್ರತಿಭಾವಂತ ಯುವ ಆಟಗಾರರನ್ನು ಬೆಳೆಸುವಲ್ಲಿಯೂ ಮಹತ್ವದ ಪಾತ್ರ ವಹಿಸಿತ್ತು.
ಶಾಸ್ತ್ರಿ ಅವರ ಕೋಚಿಂಗ್ ಅವಧಿಯಲ್ಲಿ ಭಾರತ ಯಾವುದೇ ಐಸಿಸಿ ಪ್ರಶಸ್ತಿಯನ್ನು ಗೆಲ್ಲದಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ವಿದೇಶಿ ನೆಲದಲ್ಲಿ ಎದುರಾಳಿ ತಂಡಗಳು ಭಯಪಡುವ ಶಕ್ತಿಶಾಲಿ ತಂಡವಾಗಿ ರೂಪುಗೊಂಡಿತು. ವಿಶೇಷವಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಕಠಿಣ ಪ್ರವಾಸಗಳಲ್ಲಿ ಭಾರತ ಸ್ಪರ್ಧಾತ್ಮಕ ಪ್ರದರ್ಶನ ನೀಡಿದ್ದು, ವಿದೇಶಿ ನೆಲದಲ್ಲಿ ಸರಣಿ ಗೆಲ್ಲುವ ಸಾಮರ್ಥ್ಯವನ್ನು ಪ್ರದರ್ಶಿಸಿತು. ಇದೇ ಅವಧಿಯಲ್ಲಿ ಭಾರತ ಉದ್ಘಾಟನಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆದು ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿತು. ಕೊಹ್ಲಿ-ಶಾಸ್ತ್ರಿ ಜೋಡಿಯು ಭಾರತೀಯ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಮನೋಭಾವ, ಫಿಟ್ನೆಸ್ ಸಂಸ್ಕೃತಿ ಬೆಳೆಸಿತ್ತು.