ವಿಶಾಖಪಟ್ಟಣಂ: ತವರಿನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಣ ಏಕದಿನ ಸರಣಿ ಎರಡು ಪಂದ್ಯಗಳ ಅಂತ್ಯಕ್ಕೆ 1-1 ಅಂತರದಲ್ಲಿ ಸಮಬಲಗೊಂಡಿದೆ. ಇದರ ನಡುವೆ ಆರಂಭಿಕ ಎರಡೂ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಉತ್ತಮ ಅಡಿಪಾಯ ಹಾಕಿದ್ದರೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ ಕಾರಣ ಎರಡನೇ ಏಕದಿನ ಪಂದ್ಯ ಸೋಲಬೇಕಾಯಿತು. ಈ ಹಿನ್ನಲೆಯಲ್ಲಿ ಟೀಕೆಗಳನ್ನು ಎದುರಿಸುತ್ತಿರುವ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಅವರನ್ನು ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡಶ್ಕಾಟೆ (Ryan ten Doeschate) ಸಮರ್ಥಿಸಿಕೊಂಡಿದ್ದು, ಅವರು ಇನ್ನೂ ಬ್ಯಾಟಿಂಗ್‌ನಲ್ಲಿ ಕಲಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಸುಧಾರಿಸಲಿದೆ ಎಂದು ಹೇಳಿದ್ದಾರೆ.
ರಾಂಚಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿತ್ತು. ಬಳಿಕ ರಾಯ್ಪುರದಲ್ಲಿ ನಡೆದಿದ್ದ ಎರಡನೇ ಪಂದ್ಯವನ್ನು ಪ್ರವಾಸಿ ತಂಡ ಗೆದ್ದುಕೊಂಡಿದ್ದು, ಸರಣಿಯ ಅಂತಿಮ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿದೆ. ಸರಣಿಯ ಮೂರನೇ ಪಂದ್ಯ ಶನಿವಾರ) ವಿಶಾಖಪಟ್ಟಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸರಣಿಯನ್ನು ಮುಡಿಗೇರಿಸಿಕೊಳ್ಳಲಿದೆ.
IND vs SA: ಕೆಎಲ್ ರಾಹುಲ್ ಶತಕ ಸಿಡಿಸದೆ ಇರಲು ಬಲವಾದ ಕಾರಣ ತಿಳಿಸಿದ ಡೇಲ್ ಸ್ಟೇನ್!
ವಾಷಿಂಗ್ಟನ್ ಸುಂದರ್ ಪರ ಬ್ಯಾಟ್ ಬೀಸಿದ ರಯಾನ್ ಟೆನ್ ಡಶ್ಕಾಟೆ
ಈ ಕುರಿತು ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ಸಹಾಯಕ ಕೋಚ್ ರಯಾನ್ ಟೆನ್ ಡಶ್ಕಾಟೆ, "ಬ್ಯಾಟಿಂಗ್ ವಿಷಯಕ್ಕೆ ಬಂದಾಗ ವಾಶಿ ಇನ್ನೂ ಕಲಿಯುತ್ತಿದ್ದಾರೆ. ಕೊನೆಯ ಓವರ್‌ಗಳಲ್ಲಿ ಆಡುವುದು ಬಹಳ ನಿರ್ದಿಷ್ಟ ಪಾತ್ರ ಮತ್ತು ಅವರು ಏನು ಸುಧಾರಿಸಬೇಕೆಂದು ತಿಳಿದಿದ್ದಾರೆ," ಎಂದು ತಿಳಿಸಿದ್ದಾರೆ.
ಈ ವರ್ಷ ಏಕದಿನ ಪಂದ್ಯಗಳಲ್ಲಿ ವಾಷಿಂಗ್ಟನ್ ಸುಂದರ್ ಹೆಚ್ಚು ಬೌಲ್ ಮಾಡಲು ಸಾಧ್ಯವಾಗಿಲ್ಲ. ಅವರು ಐದು ಪಂದ್ಯಗಳನ್ನಾಡಿದ್ದು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ತಮ್ಮ ಪೂರ್ಣ ಸ್ಪೆಲ್ ಮುಗಿಸಿದ್ದಾರೆ. ಇದು ಆತ್ಮವಿಶ್ವಾಸ ಮತ್ತು ಹೊಂದಾಣಿಕೆ ನಿರ್ಧಾರಗಳನ್ನು ಕೈಗೊಂಡಾಗ ಮಾತ್ರ ಸಾಧ್ಯ ಎಂದು ಅವರು ಹೇಳಿದ್ದಾರೆ.
"ಫಿಂಗರ್ ಸ್ಪಿನ್ನರ್ ಆಗಿ, ಎಡಗೈ ಅಥವಾ ಬಲಗೈ ಬೌಲರ್‌ಗಳ ವಿರುದ್ಧ ಸರಿಯಾದ ಹೊಂದಾಣಿಕೆ ಅಗತ್ಯವಿದೆ. ವಾಷಿ ನಮ್ಮ ಆರು ಬೌಲರ್‌ಗಳಲ್ಲಿ ಒಬ್ಬರು, ಜಡೇಜಾ ಮತ್ತು ಕುಲ್‌ದೀಪ್ ಕೂಡ ತಂಡದಲ್ಲಿ ಇರುವುದರಿಂದ ನಾವು 20 ಓವರ್‌ಗಳಿಗಿಂತ ಹೆಚ್ಚು ಸ್ಪಿನ್ ಬೌಲ್ ಮಾಡದಿರುವ ಪರಿಸ್ಥಿಯಲ್ಲಿದ್ದೇವೆ," ಎಂದು ಡಶ್ಕಾಟೆ ತಿಳಿಸಿದ್ದಾರೆ.
IND vs SA: ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಏಡೆನ್ ಮಾರ್ಕ್ರಮ್!
ಆರಂಭಿಕ ಎರಡು ಪಂದ್ಯಗಳಲ್ಲಿ ವಾಷಿಂಗ್ಟನ್ ವಿಫಲ
ರಾಂಚಿಯಲ್ಲಿ ವಾಷಿಂಗ್ಟನ್ ಸುಂದರ್ 18 ಎಸೆತಗಳಲ್ಲಿ 13 ರನ್ ಗಳಿಸಿದರೆ, ರಾಯ್ಪುರದಲ್ಲಿ 7 ಎಸೆತಗಳಲ್ಲಿ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಇದರಿಂದಾಗಿ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಳ ಕ್ರಮಾಂಕದಲ್ಲಿ ಉತ್ತಮ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಇನ್ನು ಸುಂದರ್ ಮೊದಲ ಎರಡೂ ಪಂದ್ಯಗಳ ಬ್ಯಾಟಿಂಗ್ ವೈಫಲ್ಯದ ಬಳಿಕ ಮೂರನೇ ಪಂದ್ಯಕ್ಕೆ ಕಠಿಣ ಅಭ್ಯಾಸ ನಡೆಸಿದ್ದಾರೆ. ಭಾರತ ತಂಡಕ್ಕೆ ಮೂರನೇ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ತವರಿನಲ್ಲಿ ಸರಣಿ ಉಳಿಸಿಕೊಳ್ಳಲು ಸಾಧ್ಯ. ಟೆಸ್ಟ್ ಸರಣಿಯಲ್ಲಿ ಸೋತಿರುವ ಭಾರತ ತಂಡ ಈ ಪಂದ್ಯವನ್ನು ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.