ಬೆಂಗಳೂರು: ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟ್ರೋಫಿ ವಿಜಯೋತ್ಸವದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ 11 ಮಂದಿ ಆರ್‌ಸಿಬಿ ಅಭಿಮಾನಿಗಳ ಸ್ಮರಣಾರ್ಥವಾಗಿ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಸ್ಮಾರಕವನ್ನು ಅನಾವರಣಗೊಳಿಸಲಾಗಿದೆ. ಆ ಮೂಲಕ ಮೃತ ಆರ್‌ಸಿಬಿ ಅಭಿಮಾನಿಗಳಿಗೆ ವಿಶೇಷ ಗೌರವವನ್ನು ಸಮರ್ಪಿಸಲಾಗಿದೆ.
ಮಾರ್ಚ್ 25 ರಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಆರ್‌ಸಿಬಿ ಅಭಿಮಾನಿಗಳ ಸ್ಮಾರಕವನ್ನು ಅನಾವರಣಗೊಳಿಸಿದರು. ಈ ವೇಳೆ ಶಾಂತಿನಗರ ಶಾಸಕ ಹ್ಯಾರಿಸ್, ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಕೂಡ ಹಾಜರಿದ್ದರು. ಇದೇ ವೇಳೆ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ಸಿಖ್ ಧಮಗುರುಗಳ ಮೂಲಕ ವಿಶೇಷ ಪೂಜೆಯನ್ನು ಕೂಡ ನೆರವೇರಿಸಲಾಯಿತು.
IPL 2026: ಕಾಲ್ತುಳಿದಲ್ಲಿ ಮೃತರಾದವರಿಗೆ ಗೌರವಾರ್ಥವಾಗಿ 11 ಆಸನಗಳನ್ನು ಕಾಯ್ದಿರಿಸಿದ ಆರ್‌ಸಿಬಿ!
ಏನಿದು ಘಟನೆ?
ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಟ್ಯಂತರ ಅಭಿಮಾನಿಗಳ ಚೊಚ್ಚಲ ಐಪಿಎಲ್ ಕಪ್ ಗೆಲ್ಲುವ ಕನಸು ನನಸಾಗಿತ್ತು. ಆ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿಗಾಗಿ 17 ವರ್ಷಗಳ ಕಾಯುವಿಕೆ ಅಂತ್ಯವಾಗಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು.
ಇದಾದ ಬಳಿಕ ಆರ್‌ಸಿಬಿ ತಂಡ ಚೊಚ್ಚಲ ಕಪ್‌ನ ವಿಜಯೋತ್ಸವವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿತ್ತು. ಪ್ರವೇಶ ಉಚಿತವಿದ್ದ ಕಾರಣ ರಾಜ್ಯದಾದ್ಯಂತ ಆಗಮಿಸಿದ್ದ ಅಭಿಮಾನಿಗಳು ಸ್ಟೇಡಿಯಂ ಒಳಗೆ ಪ್ರವೇಶಿಸುವಾಗ ನೂಕು ನುಗ್ಗಲು ಉಂಟಾಗಿತ್ತು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ದುರ್ಘಟನೆ ಬಳಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಿಷೇಧಿಸಲಾಯಿತು. ಇದೀಗ ರಾಜ್ಯ ಸರ್ಕಾರ 2026ರ ಐಪಿಎಲ್ ಪಂದ್ಯಗಳಿಗೆ ಅನುಮತಿಯನ್ನು ನೀಡಿದೆ.
IPL 2026: 16,706 ಕೋಟಿ ರು. ಗಳಿಗೆ ಮಾರಾಟವಾದ ಆರ್‌ಸಿಬಿ, ಅತ್ಯಂತ ದುಬಾರಿ ಫ್ರಾಂಚೈಸಿ!
ಸ್ಟೇಡಿಯಂನಲ್ಲಿ 11 ಆಸನಗಳನ್ನು ಮೀಸಲಿಟ್ಟ ಆರ್‌ಸಿಬಿ
ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿ ಆರ್‌ಸಿಬಿ ಅಭಿಮಾನಿಗಳಿಗೆ 11 ಆಸನಗಳನ್ನು ಶಾಶ್ವತವಾಗಿ ಬೆಂಗಳೂರು ಫ್ರಾಂಚೈಸಿ ಮೀಸಲಿಟ್ಟು ವಿಶೇಷ ಗೌರವವನ್ನು ಸಲ್ಲಿಸಿದೆ. ಈ ಬಗ್ಗೆ ಮಾರ್ಚ್ 24ರಂದು ಆರ್‌ಸಿಬಿ ಮ್ಯಾನೇಜ್‌ಮೆಂಟ್ ತಿಳಿಸಿತ್ತು. ಈ ಬಗ್ಗೆ ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಕೂಡ ಅಧಿಕೃತ ಹೇಳಿಕೆಯನ್ನು ನೀಡಿದ್ದರು.