ನವದೆಹಲಿ: ಭಾರತದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ (Bhuvneshwar Kumar) ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ (IND vs NZ) ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಇದರಿಂದಾಗಿ ಮುಂಬರುವ ಟಿ20ಐ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎಂದು ಮಾಜಿ ನಾಯಕ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ (K Srikkanth) ಅಭಿಪ್ರಾಯಪಟ್ಟಿದ್ದಾರೆ.
ಸುಮಾರು ನಾಲ್ಕು ವರ್ಷಗಳ ಬಳಿಕ ಭಾರತ ತಂಡದ ಟಿ20ಐ ತಂಡಕ್ಕೆ ಮರಳಿದ್ದ 36ರ ವಯಸ್ಸಿನ ಭುವನೇಶ್ವರ್, ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿದರು. ಆದರೆ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆಯುವ ಮೂಲಕ ದುಬಾರಿ ಬೌಲರ್ ಎನಿಸಿಕೊಂಡರು. 16 ಓವರ್ಗಳಲ್ಲಿ 180 ರನ್ ಬಿಟ್ಟುಕೊಟ್ಟು 11.25 ಎಕಾನಮಿ ರೇಟ್ ದಾಖಲಿಸಿದರು.
ಶ್ರೀಕಾಂತ್ ತಮ್ಮ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಮಾತನಾಡಿ, ಭುವನೇಶ್ವರ್ ಅವರ ಪ್ರದರ್ಶನದಿಂದ ತಮಗೆ ನಿರಾಸೆಯಾಗಿದೆ ಎಂದು ಹೇಳಿದ್ದಾರೆ. ನ್ಯೂಜಿಲೆಂಡ್ನ ಪರಿಸ್ಥಿತಿಗಳು ಅವರ ಬೌಲಿಂಗ್ಗೆ ಹೆಚ್ಚು ಸಹಕಾರಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅವರು ಅದನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭುವಿಗೆ ಎರಡು ಸರಣಿ ಸಿಗುವುದು ಅನುಮಾನ: ಶ್ರೀಕಾಂತ್
ಭುವನೇಶ್ವರ್ ಅವರಿಗೆ ಆಯ್ಕೆ ಸಮಿತಿಯು ದೀರ್ಘಾವಧಿಯ ಅವಕಾಶ ನೀಡುವ ಸಾಧ್ಯತೆಯ ಬಗ್ಗೆ ಶ್ರೀಕಾಂತ್ ಅನುಮಾನ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರ ವೈಭವ್ ಸೂರ್ಯವಂಶಿಗೂ ಎರಡು ಪಂದ್ಯಗಳಿಗಿಂತ ಹೆಚ್ಚು ಅವಕಾಶ ಸಿಗುತ್ತಿಲ್ಲ. ಹೀಗಿರುವಾಗ ಭುವನೇಶ್ವರ್ಗೆ ಎರಡು ಅಥವಾ ಮೂರು ಸರಣಿಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ನೀಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
"ಭುವನೇಶ್ವರ್ ಕುಮಾರ್ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಿದ್ದೆ. ನ್ಯೂಜಿಲೆಂಡ್ ಪರಿಸ್ಥಿತಿಗಳಲ್ಲಿ ಅವರು ಚೆನ್ನಾಗಿ ಬೌಲ್ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರ ಪ್ರದರ್ಶನದಿಂದ ನನಗೆ ತೀವ್ರ ನಿರಾಸೆಯಾಗಿದೆ. ಅವರ ಬಗ್ಗೆ ನನಗೆ ಬೇಸರವೂ ಇದೆ. ಅವರು ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಮುಂದಿನ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ತಂಡದ ಯೋಜನೆಯ ಭಾಗವಾಗಿರುತ್ತಾರೆ ಎಂದು ನನಗೆ ಅನಿಸುತ್ತಿಲ್ಲ. ಅವಕಾಶ ನೀಡಿದರೂ ಅವರು ಹೆಚ್ಚು ರನ್ ಬಿಟ್ಟುಕೊಟ್ಟರು ಎಂಬ ಕಾರಣ ನೀಡಬಹುದು," ಎಂದು ಶ್ರೀಕಾಂತ್ ತಿಳಿಸಿದ್ದಾರೆ.
ಶಿವಂ ದುಬೆ ಏನು ತಪ್ಪು ಮಾಡಿದ್ರು? ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಆಕಾಶ್ ಚೋಪ್ರಾ ಆಕ್ರೋಶ!
"ನಾನು ಅವರನ್ನು ತಂಡಕ್ಕೆ ಆಯ್ಕೆ ಮಾಡಬಾರದು ಎಂದು ಹೇಳುತ್ತಿಲ್ಲ. ಆದರೆ ಆಯ್ಕೆ ಸಮಿತಿಯ ಕಾರ್ಯವೈಖರಿಯನ್ನು ಗಮನಿಸಿದರೆ, ಅವರಿಗೆ ಎರಡು-ಮೂರು ಸರಣಿಗಳ ಅವಕಾಶ ಸಿಗುತ್ತದೆ ಎಂದು ನನಗೆ ಅನಿಸುತ್ತಿಲ್ಲ. ವೈಭವ್ ಸೂರ್ಯವಂಶಿಗೂ ಎರಡು ಪಂದ್ಯಗಳಿಗಿಂತ ಹೆಚ್ಚು ಅವಕಾಶ ನೀಡುತ್ತಿಲ್ಲ. ಹೀಗಿರುವಾಗ ಭುವಿಗೆ ಹೆಚ್ಚಿನ ಅವಕಾಶ ಸಿಗುತ್ತದೆ ಎಂದು ಹೇಗೆ ನಿರೀಕ್ಷಿಸಲು ಸಾಧ್ಯ? ನಾನು ಭುವನೇಶ್ವರ್ ಅವರ ದೊಡ್ಡ ಅಭಿಮಾನಿ. ಆದರೆ ಅವರ ಪ್ರದರ್ಶನದಿಂದ ಸ್ವಲ್ಪ ನಿರಾಸೆಯಾಗಿದೆ," ಎಂದು ಅವರು ಹೇಳಿದ್ದಾರೆ.
ಐಪಿಎಲ್ ಪ್ರದರ್ಶನದ ಆಧಾರದಲ್ಲಿ ಭಾರತ ತಂಡಕ್ಕೆ ಮರಳಿದ್ದ ಭುವಿ
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಉತ್ತಮ ಪ್ರದರ್ಶನ ನೀಡಿದ್ದ ಭುವನೇಶ್ವರ್ ಕುಮಾರ್ ಅವರಿಗೆ ಸುಮಾರು ನಾಲ್ಕು ವರ್ಷಗಳ ಬಳಿಕ ಭಾರತ ತಂಡದಲ್ಲಿ ಮತ್ತೆ ಅವಕಾಶ ಸಿಕ್ಕಿತ್ತು. 2026ರ ಐಪಿಎಲ್ ಟೂರ್ನಿಯಲ್ಲಿ ಅವರು 28 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಒಟ್ಟು 30 ಪಂದ್ಯಗಳಿಂದ 45 ವಿಕೆಟ್ ಕಬಳಿಸಿದ್ದರು. ಈ ಪ್ರದರ್ಶನವೇ ಅವರ ಪುನರಾಗಮನಕ್ಕೆ ಪ್ರಮುಖ ಕಾರಣವಾಗಿತ್ತು. ಆದರೆ, ಕಮ್ಬ್ಯಾಕ್ ಸರಣಿಯಲ್ಲಿ ಅವರು ವಿಫಲರಾಗಿದ್ದಾರೆ.