ನವದೆಹಲಿ: ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ (Pakistan) ತಂಡದ ನೀರಸ ಪ್ರದರ್ಶನದ ಮಾತನಾಡಿದ ಬಳಿಕ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಝ್ವಾನ್ (Mohammad Rizwan) ಅಭಿಮಾನಿಗಳಿಂದ ತೀವ್ರ ಟ್ರೋಲ್‌ಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಒಂದು ವಿಡಿಯೊದಲ್ಲಿ ಪತ್ರಕರ್ತರೊಬ್ಬರು ಪಾಕಿಸ್ತಾನದ ಗ್ರೂಪ್ ಹಂತದ ನಿರ್ಗಮನ ಕುರಿತು ಪ್ರಶ್ನಿಸಿದಾಗ ರಿಝ್ವಾನ್ ಅಚ್ಚರಿಯ ಹೇಳಿಕೆ ನೀಡಿ, ತಂಡ ಹೊರಬಿದ್ದದ್ದು ರನ್‌ರೇಟ್ ಕಾರಣದಿಂದ ಎಂದು ಹೇಳಿದರು. ಇದನ್ನು ನೋಡಿದ ಅಭಿಮಾನಿಗಳು ಪಾಕ್ ಆಟಗಾರರನ್ನು ಟೀಕಿಸಿದ್ದಾರೆ. ಅಲ್ಲದೆ ರಿಝ್ವಾನ್, ಭಾರತ ತಂಡದ ಪಂದ್ಯಗಳನ್ನು ನೋಡುವುದಿಲ್ಲ ಎಂದೂ ಹೇಳಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಪಾಕಿಸ್ತಾನದ ಮೊದಲ ಸೂಪರ್-8 ಪಂದ್ಯ ನ್ಯೂಜಿಲೆಂಡ್ ವಿರುದ್ಧ ಮಳೆಯಿಂದ ರದ್ದಾಯಿತು. ನಂತರ ಇಂಗ್ಲೆಂಡ್ ವಿರುದ್ಧ ತಂಡ ಸೋಲನುಭವಿಸಿತು. ಸೆಮಿಫೈನಲ್‌ಗೆ ಪ್ರವೇಶಿಸಲು ಕಿವೀಸ್ ಅನ್ನು ರನ್‌ರೇಟ್‌ನಲ್ಲಿ ಮೀರಿಸಲು ಶ್ರೀಲಂಕಾ ವಿರುದ್ಧ ದೊಡ್ಡ ಗೆಲುವು ಅಗತ್ಯವಾಗಿತ್ತು. ಆದರೆ ಪಂದ್ಯ ಕೊನೆಯವರೆಗೂ ಹೋರಾಟಮಯವಾಗಿ ಸಾಗಿದ್ದು, ಪಾಕಿಸ್ತಾನ ಸಣ್ಣ ಅಂತರದಲ್ಲಿ ಜಯ ಸಾಧಿಸಿದರೂ ಸೆಮಿಫೈನಲ್‌ಗೆ ತಲುಪಲು ವಿಫಲವಾಯಿತು.
IND vs NZ: ಫೈನಲ್ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ತರಬೇಕೆಂದ ಮೊಹಮ್ಮದ್ ಕೈಫ್!
ಪಾಕಿಸ್ತಾನ ತಂಡ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ ರನ್ ರೇಟ್ ಕೈ ಕೊಟ್ಟಿತು ಎಂದು ಪತ್ರಕರ್ತರೊಬ್ಬರು ಕೇಳಿದರು. ಆದರೆ ರಿಜ್ವಾನ್ ಅದಕ್ಕೆ ಪ್ರತಿಕ್ರಿಯಿಸಿ, ತಂಡ ಪಂದ್ಯವನ್ನು ಗೆದ್ದಿದೆ ಮತ್ತು ಅದೇ ಮುಖ್ಯ ಎಂದು ಹೇಳಿದರು. ಇದರಬಳಿಕ ಮುಂದುವರಿದ ಪತ್ರಕರ್ತರು ಭಾರತ ಆಡುತ್ತಿರುವ ಕ್ರಿಕೆಟ್ ಶೈಲಿಯನ್ನು ಗಮನಿಸಲು ಸಲಹೆ ನೀಡಿದರು. ಆದರೆ ವಿಕೆಟ್‌ಕೀಪರ್-ಬ್ಯಾಟರ್ ರಿಝ್ವಾನ್ ಸ್ಪಷ್ಟವಾಗಿ ಪ್ರತಿಕ್ರಿಯಿಸಿ, ತಾವು ಭಾರತದ ಪಂದ್ಯಗಳನ್ನು ನೋಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.
ಟಿ20 ವಿಶ್ವಕಪ್ ವಿಫಲತೆ ನಂತರ ಪಾಕಿಸ್ತಾನದ ಮುಂದಿನ ಹೆಜ್ಜೆ ಏನು?
ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಬಳಿಕ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಕಠಿಣ ಕ್ರಮ ಕೈಗೊಂಡಿದ್ದು, ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಆಟಗಾರರಿಗೆ 16 ಲಕ್ಷ ರು ದಂಡ ವಿಧಿಸಿದೆ. ಇದರ ಜೊತೆಗೆ, ಪ್ರಸ್ತುತ ತಂಡದಿಂದ ಮುಂದೆ ಸಾಗುವ ಹಾಗೂ 2027ರ ಒಡಿಐ ವಿಶ್ವಕಪ್ ಟೂರ್ನಿಗಾಗಿ ಹೊಸ ತಂಡವನ್ನು ನಿರ್ಮಿಸುವ ಉದ್ದೇಶವನ್ನು ಮಂಡಳಿ ಸ್ಪಷ್ಟಪಡಿಸಿದೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಭಾರತ-ಕಿವೀಸ್ ಸಂಭಾವ್ಯ ತಂಡಗಳು
ಪಾಕಿಸ್ತಾನ ಮುಂದಿನ ದಿನಗಳಲ್ಲಿ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಒಡಿಐ ಸರಣಿಯನ್ನು ಆಡಲಿದ್ದು, ಅದಕ್ಕಾಗಿ ತಂಡವನ್ನು ಪ್ರಕಟಿಸಿದೆ. ಬಾಬರ್ ಆಝಮ್ ಸೇರಿದಂತೆ ಹಲವು ಪ್ರಮುಖ ಆಟಗಾರರನ್ನು ತಂಡದಿಂದ ಹೊರಗಿಟ್ಟಿರುವುದರ ಜೊತೆಗೆ ಆರು ಹೊಸ (ಅನ್‌ಕ್ಯಾಪ್ಡ್) ಆಟಗಾರರಿಗೆ ಅವಕಾಶ ನೀಡಲಾಗಿದೆ.
ಆದರೆ ಈ ತಂತ್ರವನ್ನು ಪಾಕಿಸ್ತಾನ ಎಷ್ಟು ಕಾಲ ಮುಂದುವರಿಸಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2024ರ ಟಿ20 ವಿಶ್ವಕಪ್‌ನಿಂದ ಹೊರಬಿದ್ದ ನಂತರವೂ ಅವರು ಇದೇ ರೀತಿಯ ತಂತ್ರವನ್ನು ಅನುಸರಿಸಿದ್ದರು. ಆದರೆ ಯುವ ಆಟಗಾರರು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದ ಕಾರಣ ನಂತರ ಮತ್ತೆ ಪ್ರಮುಖ ಆಟಗಾರರನ್ನು ತಂಡಕ್ಕೆ ಕರೆ ತರಲಾಯಿತು.