ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ (RCB vs GT) ನಡುವಣ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ರಜತ್ ಪಾಟಿದಾರ್ (Rajat Patidar) ಅವರ ವಿವಾದಾತ್ಮಕ ಕ್ಯಾಚ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ. ಇದೀಗ ರಜತ್ ಅವರ ಕ್ಯಾಚ್ ಪಡೆದಿದ್ದ ಜೇಸನ್ ಹೋಲ್ಡರ್ (Jason Holder)ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಆ ಕ್ಯಾಚ್ ಅನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಏಪ್ರಿಲ್ 30 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ ತಂಡದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಪೆರೆಡ್ ನಡೆಸಿದ್ದರು. ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ದೀರ್ಘಾವಧಿ ಉಳಿದಿರಲಿಲ್ಲ. ನಾಯಕ ರಜತ್ ಪಾಟಿದಾರ್ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಮೊದಲನೇ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದ್ದರು. ಅವರು ಅರ್ಷದ್ ಖಾನ್ ಅವರ ಎಸೆತದಲ್ಲಿ ಸ್ಕೈರ್ ಲೆಗ್ ಮೇಲೆ ಸಿಕ್ಸರ್ ಹೊಡೆಯಲು ಮುಂದಾಗಿ ಜೇಸನ್ ಹೋಲ್ಡರ್‌ಗೆ ಕ್ಯಾಚ್ ಕೊಟ್ಟಿದ್ದರು.
RCB vs GT: ರಜತ್ ಪಾಟಿದಾರ್‌ರ ವಿವಾದಾತ್ಮಕ ಕ್ಯಾಚ್, ಅಂಪೈರ್ ವಿರುದ್ಧ ವಿರಾಟ್ ಕೊಹ್ಲಿ ಕಿಡಿ!
ರಜತ್ ಪಾಟಿದಾರ್ ಅವರ ಕ್ಯಾಚ್ ಪಡೆಯಲು ಒಂದು ಕಡೆಯಿಂದ ಕಗಿಸೊ ರಬಾಡ ಹಾಗೂ ಮತ್ತೊಂದು ಕಡೆಯಿಂದ ಜೇಸನ್ ಹೋಲ್ಡರ್ ಪ್ರಯತ್ಮಿಸಿದ್ದರು. ಆದರೆ, ಅಂತಿಮವಾಗಿ ಜೇಸನ್ ಹೋಲ್ಡರ್ ಯಶಸ್ವಿಯಾದರು. ಆದರೆ, ಅವರು ಕ್ಯಾಚ್ ಪಡೆದ ಬಳಿಕ ಚೆಂಡನ್ನು ತಮ್ಮ ಕೈಯಿಂದ ನೆಲಕ್ಕೆ ಉಜ್ಜಿರುವುದು ಟಿವಿಯಲ್ಲಿ ಕಂಡುಬಂದಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿಯೂ ವೈರಲ್ ಆಗಿತ್ತು. ಈ ಕ್ಯಾಚ್‌ಗೆ ಸಂಬಂಧಿಸಿದಂತೆ ಮಿಶ್ರ ಪ್ರತಿಕ್ರಿಯೆಗಳು ಮೂಡಿ ಬಂದಿದ್ದವು. ಇದೀಗ ಸ್ವತಃ ಜೇಸನ್ ಹೋಲ್ಡರ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ವಿವಾದಾತ್ಮಕ ಕ್ಯಾಚ್ ಬಗ್ಗೆ ಜೇಸನ್ ಹೋಲ್ಡರ್ ಪ್ರತಿಕ್ರಿಯೆ
"ಕಗಿಸೊ ರಬಾಡ ಕ್ಯಾಚ್‌ಗೆ ಬರುತ್ತಿದ್ದನ್ನು ನೋಡಿದ್ದೆ. ನಾನು ಅವರ ಸನಿಹ ಓಡಬಾರದೆಂಬ ಬಗ್ಗೆ ನನಗೆ ಖಚಿತತೆ ಇಲ್ಲ. ಇದರಲ್ಲಿ ಯಾರು ಕ್ಯಾಚ್ ಅನ್ನು ಪರಿಪೂರ್ಣಗೊಳಿಸಲಿದ್ದಾರೆಂದು ನನಗೆ ಗೊತ್ತಿರಲಿಲ್ಲ. ಆದರೆ, ನನ್ನ ಕಣ್ಣಿನಲ್ಲಿ ಚೆಂಡು ಸ್ಪಷ್ಟವಾಗಿ ಕಾಣುತ್ತಿತ್ತು ಹಾಗೂ ಯಾವುದೇ ಕಾರಣಕ್ಕೂ ಚೆಂಡನ್ನು ನೆಲಕ್ಕೆ ಬಿಡಬಾರದೆಂದು ಬಯಿಸಿದ್ದೆ," ಎಂದು ಜೇಸನ್ ಹೋಲ್ಡರ್ ತಿಳಿಸಿದ್ದಾರೆ.
"ನನ್ನ ಪ್ರಕಾರ ಯಾರಾದರೂ ಒಬ್ಬರು ಕ್ಯಾಚ್ ಅನ್ನು ಪೂರ್ಣಗೊಳಿಸಬೇಕೆಂದು ಇತ್ತು. ರಬಾಡ ಎಲ್ಲಿದ್ದಾರೆಂದು ನನ್ನ ಗಮನದಲ್ಲಿತ್ತು ಆದರೆ, ಅವರು ನನ್ನಿಂದ ದೂರ ಇದ್ದಾರೆಂದು ನಾನು ಭಾವಿಸಿದ್ದೆ ಹಾಗೂ ನಾನು ಕ್ಯಾಚ್ ಅನ್ನು ಪೂರ್ಣಗೊಳಿಸಬೇಕೆಂದು ನಿರ್ಧರಿಸಿದೆ. ಗರಿಷ್ಠ ಪ್ರಯತ್ನವನ್ನು ಹಾಕಿ ಚೆಂಡಿನ ಸನಿಹ ಹೋಗಿ ಚೆಂಡನ್ನು ಹಿಡಿಯುವುದು ನನ್ನ ಪಾಲಿಗೆ ದೊಡ್ಡ ಸಂಗತಿಯಾಗಿತ್ತು," ಎಂದು ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್‌ನಲ್ಲಿ ಅವರು ಹೇಳಿದ್ದಾರೆ.
GT vs RCB: ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ ಎಂದ ಆರ್‌ಸಿಬಿ ನಾಯಕ
ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಹೋಲ್ಡರ್
ಅಂದಹಾಗೆ ಜೇಸನ್ ಹೋಲ್ಡರ್ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮೂರು ಕ್ಯಾಚ್‌ಗಳನ್ನು ಪಡೆದಿದ್ದರು. ರಜತ್ ಪಾಟಿದಾರ್, ಟಿಮ್ ಡೇವಿಡ್ ಮತ್ತು ಕೃಣಾಲ್ ಪಾಂಡ್ಯ ಅವರ ಕ್ಯಾಚ್‌ಗಳನ್ನು ಯಶಸ್ವಿಯಾಗಿ ಪಡೆದಿದ್ದರು. ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 29 ರನ್‌ಗಳನ್ನು ಮಾತ್ರ ನೀಡಿ ಜಿತೇಶ್ ಶರ್ಮಾ ಮತ್ತು ರೊಮಾರಿಯೋ ಶೆಪರ್ಡ್ ಎರಡು ಮಹತ್ವದ ವಿಕೆಟ್‌ಗಳನ್ನು ಸಹ ಕಬಳಿಸಿದರು.ಈ ಪ್ರದರ್ಶನದ ಮೂಲಕ ಆತಿಥೇಯ ತಂಡ ಹಾಲಿ ಚಾಂಪಿಯನ್ಸ್ ಅನ್ನು ಕೇವಲ 155 ರನ್‌ಗಳಿಗೆ ನಿಯಂತ್ರಿಸಲು ಮಹತ್ವದ ಕೊಡುಗೆ ನೀಡಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.