ನವದೆಹಲಿ: ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಅವರನ್ನು ಭಾರತ ತಂಡದಲ್ಲಿ ಸತತವಾಗಿ ಕಡೆಗಣಿಸಲಾಗುತ್ತಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಶಮಿ ಭಾರತ ತಂಡದಲ್ಲಿ ಆಡುತ್ತಿಲ್ಲ. ಆದರೆ, ಅವರು ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿ ಬಿಸಿಸಿಐ ಆಯ್ಕೆದಾರರ ಗಮನವನ್ನು ಸೆಳೆದರೂ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ. ಈ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Gaunguly) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಮೊಹಮ್ಮದ್ ಶಮಿ ಅವರ ದೇಶಿ ಕ್ರಿಕೆಟ್‌ನಲ್ಲಿನ ಪ್ರದರ್ಶನವನ್ನು ಶ್ಲಾಘಿಸಿದ ಸೌರವ್ ಗಂಗೂಲಿ, ಒಬ್ಬ ಆಟಗಾರನ ವಯಸ್ಸು ಜಾಸ್ತಿಯಾಗುತ್ತಿದ್ದಂತೆ ಅವರನ್ನು ತಂಡದಲ್ಲಿ ಕಡೆಗಣಿಸುವುದು ಸಾಮಾನ್ಯ ಸಂಗತಿ ಎಂದು ಹೇಳಿದ್ದಾರೆ. ನಾನು ಕೂಡ ಇದೇ ಸಂದರ್ಭಗಳನ್ನು ಎದುರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
Women's Asia Cup: ಶಫಾಲಿ ವರ್ಮಾ ಮಿಂಚು, ಬಾಂಗ್ಲಾ ಎದುರು ಗೆದ್ದು ಫೈನಲ್‌ಗೇರಿದ ಭಾರತ ವನಿತೆಯರು!
"ಇಲ್ಲಿ ಮೊಹಮ್ಮದ್ ಶಮಿ ಅವರನ್ನು ಕಡೆಗಣಿಸಲಾಗುತ್ತಿಲ್ಲ. ಅವರು ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಅವರು ನಿಸ್ಸಂಶಯವಾಗಿ ಚಾಂಪಿಯನ್ ಬೌಲರ್. ಆದರೆ, ನೀವು ಹಿರಿಯ ಆಟಗಾರನಾಗಿ, ನಿಮ್ಮ ವಯಸ್ಸು ಜಾಸ್ತಿಯಾಗುತ್ತಿದ್ದಂತೆ, ಈ ಸಂಗತಿಗಳು ನಡೆಯುವುದು ಸಾಮಾನ್ಯ. ನಾನು ಕೂಡ ನನ್ನ ವೃತ್ತಿ ಜೀವನದಲ್ಲಿ ಒಮ್ಮೆ 10,000 ರನ್‌ಗಳನ್ನು ಕಲೆ ಹಾಕಿದ್ದರೂ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದೆ. ಹಾಗಾಗಿ ಈ ಎಲ್ಲಾ ಸಂಗತಿಗಳು ಪ್ರತಿಯೊಬ್ಬರ ವೃತ್ತಿ ಜೀವನದಲ್ಲಿ ನಡೆಯಲಿವೆ," ಎಂದು ಸೌರವ್ ಗಂಗೂಲಿ ಸುದ್ದಿಗಾರರಿಗೆ ತಿಳಿಸಲಿದ್ದಾರೆ.
ನಾನು ಪ್ರತಿಕ್ರಿಯೆ ನೀಡುವುದಿಲ್ಲ: ಸೌರವ್ ಗಂಗೂಲಿ
ಮುಂದಿನ ವರ್ಷ ನಡೆಯಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿಗೆ ಅವಕಾಶ ಸಿಗಲಿದೆಯಾ ಎಂದು ಕೇಳಿದ ಪ್ರಶ್ನೆಗೆ ದಾದಾ ಪ್ರತಿಕ್ರಿಯೆ ನೀಡಿದ್ದಾರೆ. "ಈ ಟೂರ್ನಿಗೆ ಇನ್ನೂ ಹೆಚ್ಚಿನ ಅವಧಿ ಬಾಕಿ ಇದೆ. ಹಾಗಾಗಿ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಏಕದಿನ ವಿಶ್ವಕಪ್ ಟೂರ್ನಿ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿದೆ. ಇದಕ್ಕೆ ಇನ್ನೂ ತುಂಬಾ ಸಮಯವಿದೆ," ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಹೇಳಿದ್ದಾರೆ.
ಕೌಂಟಿ ಪಂದ್ಯದಲ್ಲಿ 10 ವಿಕೆಟ್ ಕಿತ್ತು ಗೌತಮ್ ಗಂಭೀರ್‌ಗೆ ಬಲವಾದ ಸಂದೇಶ ರವಾನಿಸಿದ ಕುಲ್ದೀಪ್ ಯಾದವ್!
ದೇಶಿ ಕ್ರಿಕೆಟ್‌ಮಲ್ಲಿ ಮೊಹಮ್ಮದ್ ಶಮಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ 37 ವಿಕೆಟ್‌ಗಳು ಹಾಗೂ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ 15 ವಿಕೆಟ್‌ಗಳು ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ದುಲೀಪ್ ಟ್ರೋಫಿ ಟೂರ್ನಿಯಲ್ಲಿಯೂ ಅವರು ತಮ್ಮ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಆದರೂ ಅವರನ್ನು ಭಾರತ ತಂಡಕ್ಕೆ ಬಿಸಿಸಿಐ ಆಯ್ಕೆದಾರರು ಪರಿಗಣಿಸಿಲ್ಲ.
ದುಲೀಪ್ ಟ್ರೋಫಿ ಫೈನಲ್ ಬಳಿಕ ಮಾತನಾಡಿದ್ದ ಮೊಹಮ್ಮದ್ ಶಮಿ, "ನಿಮ್ಮ ಪ್ರದರ್ಶನವನ್ನು ನೋಡಿದರೆ, ನೀವು ಪ್ರೇರಣೆಯಿಂದ ಉಳಿಯಲು ಇವುಗಳು ನಿಮಗೆ ಕಾರಣವಾಗಬಹುದು. ಈ ಹಂತದಲ್ಲಿ ನಿಮ್ಮನ್ನು ನೀವು ಪ್ರೇರೇಪಿಸದಿದ್ದಲ್ಲಿ, ನಿಮ್ಮ ಪ್ರಯತ್ನ ತಪ್ಪು ಎಂದು ಅರಿವಾಗುತ್ತದೆ. ನೀವು ಸದ್ಯ ಯಾವ ಹಂತದಲ್ಲಿದ್ದೀರಿ ಎಂಬುದು ಮುಖ್ಯವಲ್ಲ, ಆದರೆ ನೀವು ಮುಂದಿನ ಹಂತದಲ್ಲಿ ಆಡಲು ಸದಾ ಸಿದ್ದರಾಗಿರಬೇಕಾಗುತ್ತದೆ," ಎಂದು ಹೇಳಿದ್ದಾರೆ.