ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ನಿಮ್ಮ ಮೇಲೆ ಮಾನಹಾನಿ ಕೇಸ್ ಹಾಕ್ತೀನಿ'- ಯೋಗರಾಜ್ ಸಿಂಗ್‌ಗೆ ಪೃಥ್ವಿ ಶಾ ಖಡಕ್‌ ವಾರ್ನಿಂಗ್‌!

ಪೃಥ್ವಿ ಶಾ ಅವರ ವೃತ್ತಿಜೀವನ ಕುಸಿತಕ್ಕೆ ಪಾರ್ಟಿ, ಮದ್ಯಪಾನ ಹಾಗೂ ಕೆಟ್ಟ ಸಹವಾಸವೇ ಕಾರಣ ಎಂದು ಯೋಗರಾಜ್ ಸಿಂಗ್ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಶಾ, ಸುಳ್ಳು ಆರೋಪಗಳ ಮೂಲಕ ಮಾನಹಾನಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಯೋಗರಾಜ್‌ ಸಿಂಗ್‌ಗೆ ಪೃಥ್ವಿ ಶಾ ಖಡಕ್‌ ವಾರ್ನಿಂಗ್‌.

ಮುಂಬೈ: ಟೀಮ್ ಇಂಡಿಯಾದ ಯುವ ಬ್ಯಾಟರ್ ಪೃಥ್ವಿ ಶಾ (Prithvi Shah) ತಮ್ಮ ಕ್ರಿಕೆಟ್ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಕುರಿತು ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ (Yograj Singh) ಮಾಡಿರುವ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ. ತಮ್ಮ ಹೆಸರನ್ನು ಬಳಸಿಕೊಂಡು ಸುಳ್ಳು ಮಾಹಿತಿ ಹರಡುವುದು, ವ್ಯಕ್ತಿತ್ವಕ್ಕೆ ಧಕ್ಕೆ ತರುವುದು ಹಾಗೂ ಪ್ರಚಾರ ಪಡೆಯಲು ಪ್ರಯತ್ನಿಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಇಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಸೌರವ್ ಯದುವಂಶಿ ನಿರೂಪಣೆಯ 'ಸ್ಪೋರ್ಟ್ಸ್ ಲಾಂಚ್‌ಪ್ಯಾಡ್' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಯೋಗರಾಜ್ ಸಿಂಗ್, ಪೃಥ್ವಿ ಶಾ ಅವರ ಕ್ರಿಕೆಟ್ ವೃತ್ತಿಜೀವನ ಕುಸಿಯಲು ಅವರ ಜೀವನಶೈಲಿಯೇ ಕಾರಣ ಎಂದು ಆರೋಪಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ವೃತ್ತಿಜೀವನದ ಉದಾಹರಣೆಯನ್ನೂ ನೀಡಿದ್ದರು.

"ಪೃಥ್ವಿ ಶಾ ಅವರ ವೃತ್ತಿಜೀವನ ಏಕೆ ಕುಸಿಯಿತು? ಇದಕ್ಕೂ ಮೊದಲು ವಿನೋದ್ ಕಾಂಬ್ಳಿ ಅವರಿಗೂ ಇದೇ ರೀತಿಯಾಗಿತ್ತು. ಪಾರ್ಟಿಗಳು, ಮಹಿಳೆಯರ ಸಹವಾಸ, ಸಿಗರೇಟ್ ಮತ್ತು ಮದ್ಯಪಾನ ಇವೆಲ್ಲವೂ ಇದಕ್ಕೆ ಕಾರಣ. ಒಂದು ಕಾಲದಲ್ಲಿ ಕಾಂಬ್ಳಿ ಅವರ ಬಳಿ ಹೋಗಿ, ಇಷ್ಟೊಂದು ಪ್ರತಿಭೆ ಇಟ್ಟುಕೊಂಡಿರುವ ನೀನು ಏನು ಮಾಡುತ್ತಿದ್ದೀಯ ಎಂದು ಪ್ರಶ್ನಿಸಿದ್ದೆ," ಎಂದು ಯೋಗರಾಜ್ ಹೇಳಿದ್ದಾರೆ.

IND vs NZ: ʻ ಚೆಂಡಿಗೆ ಎಂಜಲು ಬಳಸಲು ಅನುಮತಿ ನೀಡಿʼ-ಐಸಿಸಿಗೆ ಮನವಿ ಮಾಡಿದ ಶುಭಮನ್‌ ಗಿಲ್‌!

"ಅವರು ರಾತ್ರಿ 2.30ಕ್ಕೆ ತಮ್ಮ ಕೊಠಡಿಗೆ ಬರುತ್ತಿದ್ದರು. ಆಗ ನಾನು ಪ್ರಶ್ನಿಸಿದಾಗ, ನಿಮ್ಮ ಕಾಲ ಮುಗಿದಿದೆ, ಈಗ ನಾವು ವಿಭಿನ್ನ ರೀತಿಯ ಕ್ರಿಕೆಟ್ ಆಡುತ್ತಿದ್ದೇವೆ ಎಂದು ಉತ್ತರಿಸಿದ್ದರು. ಮರುದಿನ ಬೆಳಗ್ಗೆ ಕರ್ಟ್ನಿ ವಾಲ್ಷ್ ಅವರ ಬೌಲಿಂಗ್‌ನಲ್ಲಿ ಔಟಾದರು ಮತ್ತು ಭಾರತ ಪಂದ್ಯ ಸೋತಿತು. ಬಳಿಕ ಅವರೊಂದಿಗಿದ್ದ ಹುಡುಗಿ ಕೂಡ ಅವರನ್ನು ಬಿಟ್ಟು ಹೋದಳು. ಅವರಿಗೆ ಸಿಗರೇಟ್ ಮತ್ತು ಮದ್ಯ ನೀಡುವವರೂ ಇರಲಿಲ್ಲ. ಪೃಥ್ವಿ ಶಾ ವಿಚಾರದಲ್ಲೂ ಇದೇ ರೀತಿಯಾಗಿದೆ. ಕೆಟ್ಟ ಸಹವಾಸ, ಪಾರ್ಟಿ, ಮದ್ಯಪಾನ ಇವುಗಳ ಹಿಂದೆ ಹೋದರೆ ಇದೇ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ," ಎಂದು ಯೋಗರಾಜ್ ಸಿಂಗ್‌ ಆರೋಪಿಸಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ಪೃಥ್ವಿ ಶಾ ಖಡಕ್ ಎಚ್ಚರಿಕೆ

ಯೋಗರಾಜ್ ಸಿಂಗ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಪೃಥ್ವಿ ಶಾ, ತಮ್ಮ ಹಿಂದಿನ ಜೀವನದ ಬಗ್ಗೆ ಮುಚ್ಚಿಡುವಂತಹದ್ದೇನೂ ಇಲ್ಲ ಎಂದು ಹೇಳಿದ್ದಾರೆ. ಆದರೆ ತಮ್ಮ ವೈಯಕ್ತಿಕ ವಿಚಾರಗಳನ್ನು ಬಳಸಿಕೊಂಡು ಉದ್ದೇಶಪೂರ್ವಕವಾಗಿ ಸುಳ್ಳು ಆರೋಪಗಳನ್ನು ಮಾಡುವುದು ಹಾಗೂ ಮಾನಹಾನಿ ಮಾಡುವುದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"ನನ್ನ ಹಿಂದಿನ ಜೀವನ ನನ್ನ ಬದುಕಿನ ಒಂದು ಭಾಗವಾಗಿದೆ. ಅದನ್ನು ಮುಚ್ಚಿಡಲು ಅಥವಾ ಅದರ ಬಗ್ಗೆ ನಾಚಿಕೆಪಡಲು ನನಗೆ ಯಾವುದೇ ಕಾರಣವಿಲ್ಲ. ಆದರೆ ನನ್ನ ಹೆಸರು, ವೈಯಕ್ತಿಕ ಜೀವನ ಅಥವಾ ಹಿಂದಿನ ಘಟನೆಗಳನ್ನು ಬಳಸಿಕೊಂಡು ನಕಾರಾತ್ಮಕತೆ ಹರಡುವುದು, ಅನಗತ್ಯ ವಿವಾದ ಸೃಷ್ಟಿಸುವುದು, ನನ್ನ ಗೌರವಕ್ಕೆ ಧಕ್ಕೆ ತರುವುದು ಅಥವಾ ನನ್ನ ಮೂಲಕ ಪ್ರಚಾರ ಪಡೆಯಲು ಪ್ರಯತ್ನಿಸುವುದನ್ನು ನಾನು ಸಹಿಸುವುದಿಲ್ಲ," ಎಂದು ಶಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಶಾಲೆಗೆ ಚಕ್ಕರ್‌ ಹಾಕಿ ಭಾರತ vs ನ್ಯೂಜಿಲೆಂಡ್‌ ಟೆಸ್ಟ್‌ ನೋಡಲ ಬಂದು ತಗಲಾಕಿಕೊಂಡ ವಿದ್ಯಾರ್ಥಿಗಳು! ವಿಡಿಯೊ

"ಒಂದು ಅಭಿಪ್ರಾಯ ವ್ಯಕ್ತಪಡಿಸುವುದಕ್ಕೂ ಉದ್ದೇಶಪೂರ್ವಕವಾಗಿ ಸುಳ್ಳು, ತಪ್ಪುದಾರಿಗೆಳೆಯುವ, ಮಾನಹಾನಿಕರ ಅಥವಾ ದುರುದ್ದೇಶಪೂರಿತ ವಿಚಾರಗಳ ಮೂಲಕ ವ್ಯಕ್ತಿಯೊಬ್ಬರನ್ನು ಗುರಿಯಾಗಿಸುವುದಕ್ಕೂ ಸ್ಪಷ್ಟ ವ್ಯತ್ಯಾಸವಿದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವ ವ್ಯಕ್ತಿಗಳು ಅಥವಾ ವೇದಿಕೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಸ್ಪಷ್ಟ ಮತ್ತು ಅಂತಿಮ ಎಚ್ಚರಿಕೆ," ಎಂದು ಹೇಳಿದ್ದಾರೆ.

ನನ್ನ ಮೌನವನ್ನು ದೌರ್ಬಲ್ಯ ಎಂದು ಭಾವಿಸಬೇಡಿ

ತಮ್ಮ ಗೌರವ, ಖಾಸಗಿತನ ಮತ್ತು ಪ್ರತಿಷ್ಠೆಯನ್ನು ರಕ್ಷಿಸಿಕೊಳ್ಳಲು ಲಭ್ಯವಿರುವ ಎಲ್ಲ ಕಾನೂನು ಮಾರ್ಗಗಳನ್ನು ಬಳಸಿಕೊಳ್ಳುವ ಹಕ್ಕು ತಮಗಿದೆ ಎಂದು ಪೃಥ್ವಿ ಶಾ ಹೇಳಿದ್ದಾರೆ.

"ನನ್ನ ಗೌರವ, ಖಾಸಗಿತನ ಮತ್ತು ಪ್ರತಿಷ್ಠೆಯನ್ನು ರಕ್ಷಿಸಿಕೊಳ್ಳಲು ಲಭ್ಯವಿರುವ ಎಲ್ಲ ಕಾನೂನು ಪರಿಹಾರಗಳನ್ನು ಪಡೆಯುವ ಹಕ್ಕನ್ನು ನಾನು ಕಾಯ್ದಿರಿಸಿದ್ದೇನೆ. ನನ್ನ ಮೌನವನ್ನು ಎಂದಿಗೂ ದೌರ್ಬಲ್ಯ ಎಂದು ಭಾವಿಸಬೇಡಿ. ನಾನು ಗೌರವದಿಂದ ಮುಂದುವರಿಯಲು ಬಯಸುತ್ತೇನೆ. ಆದರೆ ನನ್ನ ಪರವಾಗಿ ಧ್ವನಿ ಎತ್ತಲು ಎಂದಿಗೂ ಹಿಂಜರಿಯುವುದಿಲ್ಲ," ಎಂದು ಎಚ್ಚರಿಕೆ ನೀಡಿದ್ದಾರೆ.