ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ (IND vs AFG) ಸಂಜು ಸ್ಯಾಮ್ಸನ್(sanju Samson) ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿ, ಬಳಿಕ ಸ್ಫೋಟಕ ಆಟವಾಡಿದ್ದಕ್ಕೆ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ (Sunil gavaskar) ಸಂತಸ ವ್ಯಕ್ತಪಡಿಸಿದ್ದಾರೆ. ಸ್ಯಾಮ್ಸನ್ ಅವರ ಈ ರೀತಿಯ ಬ್ಯಾಟಿಂಗ್ ವಿಧಾನವು ಸ್ಥಿರತೆ ಕಂಡುಕೊಳ್ಳಲು ನೆರವಾಗಲಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ಸ್ಯಾಮ್ಸನ್, ಮಂಗಳವಾರ ದೆಹಲಿಯಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಆರಂಭದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಆಡಿದರು. ಒಂದು ಹಂತದಲ್ಲಿ ಅವರು 12 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದರು. ಆದರೆ ಆತ್ಮವಿಶ್ವಾಸ ಗಳಿಸಿಕೊಂಡ ನಂತರ ಅಫ್ಘಾನಿಸ್ತಾನದ ಬೌಲರ್‌ಗಳ ಮೇಲೆ ದಾಳಿ ನಡೆಸಿದ ಸ್ಯಾಮ್ಸನ್, ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಒಟ್ಟಾರೆ 22 ಎಸೆತಗಳಲ್ಲಿ 57 ರನ್ ಸಿಡಿಸಿದ ಸ್ಯಾಮ್ಸನ್, 259.09ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಅವರ ಈ ಸ್ಫೋಟಕ ಇನಿಂಗ್ಸ್‌ನ ನೆರವಿನಿಂದ ಭಾರತ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿತು. ಇದೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 19 ಎಸೆತಗಳಲ್ಲಿ 39 ರನ್ ಗಳಿಸಿದ್ದರು.
ಮೂರನೇ ಟಿ20ಐನಲ್ಲಿ ವೈಭವ್ ಸೂರ್ಯವಂಶಿ ಆಡ್ತಾರಾ? ಬಿಗ್ ಅಪ್‌ಡೇಟ್ ನೀಡಿದ ಶ್ರೇಯಸ್ ಅಯ್ಯರ್!
ಕಾಮೆಂಟರಿ ವೇಳೆ ಮಾತನಾಡಿದ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್, ಸಂಜು ಸ್ಯಾಮ್ಸನ್‌ಗೆ ಬ್ಯಾಟಿಂಗ್‌ನಲ್ಲಿ ಬೇಕಾಗಿರುವುದು ಸ್ಥಿರತೆ ಎಂದು ಹೇಳಿದರು. ಚೇಸ್ ದೊಡ್ಡ ಮೊತ್ತದ್ದಾಗಿರದ ಸಂದರ್ಭದಲ್ಲಿ ಇದೇ ರೀತಿಯಲ್ಲಿ ಆರಂಭದಲ್ಲಿ ಸಮಯ ತೆಗೆದುಕೊಂಡು ನಂತರ ಆಕ್ರಮಣಕಾರಿ ಆಟವಾಡಿದರೆ, ಸ್ಯಾಮ್ಸನ್ ನಿರಂತರವಾಗಿ ರನ್ ಗಳಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
"ನಿಮಗೆ ಕೆಲವೊಮ್ಮೆ ಬೇಕಾಗಿರುವುದು ಸ್ಥಿರತೆ. 20 ಓವರ್‌ಗಳ ಪಂದ್ಯದಲ್ಲಿ ಆರಂಭಿಕ ಬ್ಯಾಟರ್‌ಗಳು ಹೆಚ್ಚಿನ ಎಸೆತಗಳನ್ನು ಎದುರಿಸುವ ಅವಕಾಶ ಪಡೆಯುತ್ತಾರೆ. ಆದರೆ ಇಂದು ಸ್ಯಾಮ್ಸನ್ ಆರಂಭದಲ್ಲಿ ತಮ್ಮನ್ನು ತಾವು ಹೊಂದಿಸಿಕೊಂಡು, ನಂತರ ಚೆಂಡನ್ನು ಬೌಂಡರಿ-ಸಿಕ್ಸರ್‌ಗಳಿಗೆ ಅಟ್ಟಿದರು. ಅವರು ಇದೇ ರೀತಿಯಲ್ಲಿ ಮುಂದುವರಿದರೆ, ಅವರು ವಿಫಲರಾಗುತ್ತಾರೆ ಎಂದು ನನಗೆ ಅನಿಸುವುದಿಲ್ಲ. ಪ್ರತಿಬಾರಿಯೂ 50 ಮತ್ತು 60 ರನ್‌ಗಳನ್ನು ಗಳಿಸುತ್ತಲೇ ಇರುತ್ತಾರೆ," ಎಂದು ಸುನೀಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.
ʻವೈಫೈ ಸ್ವಿಚ್ ಆಫ್ ಮಾಡಿದ್ದೆʼ-ಹೊರಗಡೆ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬಾರದೆಂದ ಸಂಜು ಸ್ಯಾಮ್ಸನ್!
ಸ್ಯಾಮ್ಸನ್ ಆರಂಭದಿಂದಲೇ ದೊಡ್ಡ ಹೊಡೆತಗಳಿಗೆ ಮುಂದಾಗುವ ಸಂದರ್ಭಗಳಲ್ಲಿ ವಿಕೆಟ್ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಗವಾಸ್ಕರ್ ಹೇಳಿದ್ದಾರೆ.
"ಮೊದಲ ಎಸೆತದಿಂದಲೇ ಬೌಂಡರಿ ಬಾರಿಸಲು ಪ್ರಯತ್ನಿಸಿದಾಗ ಮಾತ್ರ ಅವರು ಕೆಲವೊಮ್ಮೆ ರನ್ ಗಳಿಸಲು ವಿಫಲರಾಗುತ್ತಾರೆ. ಆದರೆ ನೀವು 190 ಅಥವಾ 200 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದರೆ, ಆರಂಭದಿಂದಲೇ ಆಕ್ರಮಣಕಾರಿ ಆಟವಾಡುವುದು ಅನಿವಾರ್ಯ. ಆದರೆ ಸ್ಯಾಮ್ಸನ್ ಅದ್ಭುತ ಆಟಗಾರ," ಎಂದು ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಸ್ಯಾಮ್ಸನ್ ಆಡಿದ ಈ ಸ್ಫೋಟಕ ಇನಿಂಗ್ಸ್ ಭಾರತದ ಗೆಲುವಿಗೆ ಪ್ರಮುಖ ಕಾರಣವಾಗಿದ್ದು, ಇದರೊಂದಿಗೆ ಭಾರತ ತಂಡ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.