ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ʻನಿಮಗೆ ಆಯಾಸವಾಗಿದ್ರೆ ಆಡಬೇಡಿʼ-ಅರ್ಷದೀಪ್‌ ಸಿಂಗ್‌ಗೆ ಬದ್ರಿನಾಥ್‌ ವಾರ್ನಿಂಗ್‌!

ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಗುತ್ತಿರುವ ಪಂಜಾಬ್‌ ಕಿಂಗ್ಸ್‌ ತಂಡದ ವೇಗದ ಬೌಲರ್‌ ಅರ್ಷದೀಪ್‌ ಸಿಂಗ್‌ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಆಟಗಾರ ಎಸ್‌ ಬದ್ರಿನಾಥ್‌ ಎಚ್ಚರಿಕೆಯನ್ನು ನೀಡಿದ್ದಾರೆ. ನಿಮಗೆ ಆಯಾಸವಿದ್ದರೆ ಕ್ರಿಕೆಟ್‌ ಆಡದೇ ವಿಶ್ರಾಂತಿಯನ್ನು ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.

ಅರ್ಷದೀಪ್‌ ಸಿಂಗ್‌ಗೆ ಎಚ್ಚರಿಕೆ ನೀಡಿದ ಎಸ್‌ ಬದ್ರಿನಾಥ್‌.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಯುವ ವೇಗಿ ಅರ್ಷದೀಪ್‌ ಸಿಂಗ್‌ (Arshdeep Singh) ಅವರ ಕಳಪೆ ಫಾರ್ಮ್‌ಗೆ ಆಯಾಸ ಎಂಬುದನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಆಟಗಾರ ಎಸ್‌ ಬದ್ರಿನಾಥ್‌ (S Badrinath) ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಇಲ್ಲಿಯವರೆಗೂ ಆಡಿದ 11 ಪಂದ್ಯಗಳಿಂದ ಅರ್ಷದೀಪ್‌ ಸಿಂಗ್‌ ಅವರು ಕೇವಲ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅವರು 10 ಪಂದ್ಯಗಳ ಪೈಕಿ 9ರಲ್ಲಿ ಆಡಿದ್ದರು. ಆ ಮೂಲಕ ಭಾರತ ತಂಡ ಮೂರನೇ ಟಿ20 ವಿಶ್ವಕಪ್‌ ಗೆಲುವಿಗೆ ಅರ್ಷದೀಪ್‌ ಕೂಡ ನೆರವು ನೀಡಿದ್ದರು. ಟಿ20 ವಿಶ್ವಕಪ್‌ ಬಳಿಕ ಆಯಾಸವಾಗಿದ್ದರೆ, ಅರ್ಷದೀಪ್‌ ಸಿಂಗ್‌ ಕ್ರಿಕೆಟ್‌ ಆಡದೆ ವಿಶ್ರಾಂತಿ ಪಡೆಯಲಿ ಎಂದು ಬದ್ರಿನಾಥ್‌ ಸಲಹೆ ನೀಡಿದ್ದಾರೆ.

ಎಸ್‌ ಬದ್ರಿನಾಥ್‌ ಅವರು ಪಂಜಾಬ್‌ ಕಿಂಗ್ಸ್‌ ತಂಡದ ವೇಗಿ ಅರ್ಷದೀಪ್‌ ಸಿಂಗ್‌ ಅವರ ಫಾರ್ಮ್ ತಂಡದ ಯಶಸ್ಸಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

“ಅವರ ಫಾರ್ಮ್ ಪಂಜಾಬ್ ಕಿಂಗ್ಸ್‌ ತಂಡದ ಅವಕಾಶಗಳಿಗೆ ಬಹಳ ಮುಖ್ಯ. ನಾನು ‘ದಣಿವು’ ಎಂಬ ಕಲ್ಪನೆಯ ಬಗ್ಗೆ ನಂಬಿಕೆ ಇಡುವುದಿಲ್ಲ. ನೀವು ದಣಿದಿದ್ದರೆ ಆಡಬೇಡಿ. ವೃತ್ತಿಪರ ಕ್ರೀಡಾಪಟುವಾಗಿ ಮೈದಾನಕ್ಕೆ ಬಂದಾಗ 100% ಕೊಡುಗೆ ನೀಡಬೇಕು. ಇದು ಉನ್ನತ ಮಟ್ಟದ ಕ್ರೀಡೆಯ ಸ್ವಭಾವ. ದಣಿವು ಇದ್ದರೆ ವಿಶ್ರಾಂತಿ ಪಡೆಯಬೇಕು. ಇದು ಕೇವಲ ಅರ್ಷದೀಪ್‌ಗೆ ಮಾತ್ರವಲ್ಲ, ಕ್ರಿಕೆಟ್‌ನಲ್ಲಿರುವ ಎಲ್ಲರಿಗೂ ಅನ್ವಯಿಸುತ್ತದೆ,” ಎಂದು ಬದ್ರಿನಾಥ್ ಹೇಳಿದ್ದಾರೆ.

IPL 2026 ಟೂರ್ನಿಯ ಬಳಿಕ ನಾಯಕತ್ವ ಕಳೆದುಕೊಳ್ಳಬಲ್ಲ ಮೂವರು ಆಟಗಾರರು!

ಅವರು ಮುಂದುವರಿದು, "ಅರ್ಷದೀಪ್ ಸಿಂಗ್‌ ಈ ಸೀಸನ್‌ನಲ್ಲಿ ಸ್ಥಿರತೆ ಕಳೆದುಕೊಂಡಿರುವ ರೀತಿ ಬೌಲಿಂಗ್‌ ಪ್ರದರ್ಶನವನ್ನು ತೋರುತ್ತಿದ್ದಾರೆ. ಸ್ವಿಂಗ್ ಮೂಲಕ ಎರಡೂ ದಿಕ್ಕಿನಲ್ಲಿ ಚೆಂಡನ್ನು ಚಲಿಸುವ ಸಾಮರ್ಥ್ಯ ಹೊಂದಿರುವ ಅವರು, ಲಯ ಸಿಕ್ಕಾಗ ಸಂಪೂರ್ಣ ವಿಭಿನ್ನ ಬೌಲರ್ ಆಗುತ್ತಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಉತ್ತಮ ಅವಕಾಶ. ಜೊತೆಗೆ, ಅವರು ಈ ತಂಡದ ವಿರುದ್ಧ ಹಿಂದೆ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು," ಎಂದು ಬದ್ರಿನಾಥ್ ತಿಳಿಸಿದ್ದಾರೆ.

ಪಂಜಾಬ್‌ ಕಿಂಗ್ಸ್‌ ತಂಡ, ಟೂರ್ನಿಯ ಮೊದಲಾರ್ಧದಲ್ಲಿ ಸಂಪೂರ್ಣ ಪ್ರಭುತ್ವ ಸಾಧಿಸಿದರೂ, ಇದೀಗ ಸತತ ನಾಲ್ಕು ಸೋಲುಗಳನ್ನು ಅನುಭವಿಸಿದೆ. ಇದರ ಪರಿಣಾಮವಾಗಿ, ಪ್ಲೇಆಫ್ ಪೈಪೋಟಿಯಲ್ಲಿ ತಂಡದ ಸ್ಥಿತಿ ಸಂಕಷ್ಟಕರವಾಗಿದೆ. ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಉಳಿಸಿಕೊಳ್ಳಬೇಕೆಂದರೆ ಕೊನೆಯ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡರಲ್ಲಿ ಗೆಲುವು ಅಗತ್ಯವಾಗಿದೆ. ಅದರಂತೆ ಮುಂಬೈ ಇಂಡಿಯನ್ಸ್‌ ವಿರುದ್ಧ ಗೆಲುವು ಅಗತ್ಯವಾಗಿದೆ.

IPL 2027: ʻನಮಗೆ ನೀವು ಥ್ಯಾಂಕ್ಸ್‌ ಹೇಳಬೇಕುʼ-ಆರ್‌ಸಿಬಿ ಸಕ್ಸಸ್‌ಗೆ ನಾವೇ ಕಾರಣ ಎಂದ ಅಂಬಾಟಿ ರಾಯುಡು!

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಸೋಲಿನ ಬಳಿಕ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಅವರು, ತಮ್ಮ ತಂಡದ ಈ ಸಂಕಷ್ಟಕರ ಪರಿಸ್ಥಿತಿಗೆ ತಾವೇ ಕಾರಣ ಎಂದು ಹೇಳಿಕೊಂಡಿದ್ದರು. ಸೀಸನ್‌ನ ಮೊದಲಾರ್ಧದಲ್ಲಿ ಫಾರ್ಮ್‌ನಲ್ಲಿದ್ದ ಬ್ಯಾಟಿಂಗ್ ಘಟಕವು ಬೌಲಿಂಗ್ ವಿಭಾಗದ ದುರ್ಬಲತೆಯನ್ನು ಮುಚ್ಚಿಹಾಕಿತ್ತು. ಆದರೆ ಇತ್ತೀಚಿನ ಪಂದ್ಯಗಳಲ್ಲಿ, ಸ್ವತಃ ಅಯ್ಯರ್‌ ಅವರೇ ಹೇಳುವಂತೆ, ಉತ್ತಮ ಸ್ಕೋರ್ ಗಳಿಸಿದರೂ ಸಹ ಗೆಲುವು ಸಾಧಿಸಲು ಅದು ಸಾಕಾಗುತ್ತಿಲ್ಲ.

ಶ್ರೇಯಸ್‌ ಅಯ್ಯರ್ ಮತ್ತು ತಂಡದ ಸಹ ಆಟಗಾರರು ಸೀಮಿಂಗ್ ಪಿಚ್‌ನಲ್ಲಿ ಪಂದ್ಯವನ್ನು ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿದ್ದರೂ, ಅಂತಿಮ ಐದು ಓವರ್‌ಗಳಲ್ಲಿ ವೇಗದ ಬೌಲರ್‌ಗಳು ಸರಿಯಾದ ಲೆನ್ತ್‌ ಹಾಕುವಲ್ಲಿ ವಿಫಲರಾಗಿದ್ದರು.

ಅರ್ಷದೀಪ್‌ ಸಿಂಗ್‌ ಅವರ ನೇತೃತ್ವದ ಪಂಜಾಬ್ ಕಿಂಗ್ಸ್ ವೇಗದ ಬೌಲಿಂಗ್ ದಾಳಿ ಈ ಸೀಸನ್‌ನಲ್ಲಿ 10 ಪಂದ್ಯಗಳಲ್ಲಿ ಅತ್ಯಂತ ಕೆಟ್ಟ ಇಕಾನಮಿ ರೇಟ್ ಹೊಂದಿರುವ ಘಟಕವಾಗಿ ಗುರುತಿಸಲಾಗಿದೆ. ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಈ ಬೌಲಿಂಗ್ ದುರ್ಬಲತೆ ನಿರ್ಣಾಯಕ ಹಂತಗಳಲ್ಲಿ ದೊಡ್ಡ ಹೊಡೆತ ನೀಡುತ್ತಿದೆ.