ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND A vs UAE A: 52 ಎಸೆತಗಳಲ್ಲಿ ಡಬಲ್‌ ಸೆಂಚುರಿ, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅವರು ಯುಎಇ ವಿರುದ್ದದ ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟೂರ್ನಿಯ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದಾರೆ. ಆ ಮೂಲಕ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆಯನ್ನು 15ರ ವಯಸ್ಸಿನ ವೈಭವ್‌ ಬರೆದಿದ್ದಾರೆ.

ದೋಹಾ: ಭಾರತೀಯ ಕ್ರಿಕೆಟ್‌ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತೊಮ್ಮೆ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಅವರು, ಇದೀಗ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುಎಇ ವಿರುದ್ದದದ ಪಂದ್ಯದಲ್ಲಿ ಅವರು ಈ ದಾಖಲೆಯನ್ನು ಬರೆದಿದ್ದಾರೆ.

ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026ರ ಟೂರ್ನಿಯಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದ ಪರ ಕಣಕ್ಕಿಳಿದ ಸೂರ್ಯವಂಶಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದ್ದಾರೆ. ಅವರ ಈ ಇನಿಂಗ್ಸ್‌ನಲ್ಲಿ ಬರೋಬ್ಬರಿ 28 ಸಿಕ್ಸರ್‌ಗಳು ಸೇರಿವೆ. ಈ ದ್ವಿಶತಕದ ಮೂಲಕ ಅವರು ಯಶಸ್ವಿ ಜೈಸ್ವಾಲ್‌ ಅವರನ್ನು ವೈಭವ್‌ ಹಿಂದಿಕ್ಕಿದ್ದಾರೆ.

ಕೇವಲ 28 ಎಸೆತಗಳಲ್ಲಿ ಲಿಸ್ಟ್ ಎ ಶತಕ; ವಿಶ್ವ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

28 ಎಸೆತಗಳಲ್ಲಿ ಶತಕ, 52 ಎಸೆತಗಳಲ್ಲಿ ದ್ವಿಶತಕ!

ದೋಹಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಯುಎಇ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ಎ ತಂಡಕ್ಕೆ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರು.

ಯುಎಇ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ಅವರು ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನ ಅತ್ಯಂತ ವೇಗದ ಶತಕದ ದಾಖಲೆಯನ್ನೂ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಗರ್ಕ್ 29 ಎಸೆತಗಳಲ್ಲಿ ಶತಕ ಸಿಡಿಸಿದ್ದು ದಾಖಲೆಯಾಗಿತ್ತು. ಇದೀಗ ಸೂರ್ಯವಂಶಿ ಆ ದಾಖಲೆಯನ್ನು ಮುರಿದಿದ್ದಾರೆ.



27 ಸಿಕ್ಸರ್‌ಗಳನ್ನು ಸಿಡಿಸಿದ ವೈಭವ್‌

ಶತಕದ ಬಳಿಕವೂ ವೈಭವ್‌ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ವೇಗವನ್ನು ಕಡಿಮೆ ಮಾಡಲಿಲ್ಲ. ಸಿಕ್ಸರ್‌ಗಳ ಸುರಿಮಳೆಗೈದ ಅವರು ಕೇವಲ 52 ಎಸೆತಗಳಲ್ಲಿ ದ್ವಿಶತಕದ ಗಡಿ ತಲುಪಿದರು. ಅವರ ಇನಿಂಗ್ಸ್‌ನಲ್ಲಿ 27 ಸಿಕ್ಸರ್‌ಗಳು ದಾಖಲಾಗಿದ್ದು, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಮತ್ತೊಂದು ಗಮನಾರ್ಹ ದಾಖಲೆ ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಸೂರ್ಯವಂಶಿ ಕೇವಲ ವೈಯಕ್ತಿಕ ದಾಖಲೆಗಳನ್ನು ಮಾತ್ರವಲ್ಲದೆ, ಭಾರತ ಎ ತಂಡದ ಚೇಸ್‌ಗೂ ಭರ್ಜರಿ ವೇಗ ನೀಡಿದರು. 15ನೇ ವಯಸ್ಸಿನಲ್ಲೇ ಇಂತಹ ಸಾಧನೆ ಮಾಡಿರುವುದು ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸೂರ್ಯವಂಶಿಯ ದಾಖಲೆಗಳು

- ಕೇವಲ 28 ಎಸೆತಗಳಲ್ಲಿ ಶತಕ

- ಕೇವಲ 52 ಎಸೆತಗಳಲ್ಲಿ ದ್ವಿಶತಕ

- ಒಂದೇ ಇನಿಂಗ್ಸ್‌ನಲ್ಲಿ 27 ಸಿಕ್ಸರ್‌ಗಳು

- ಲಿಸ್ಟ್ ಎ ಕ್ರಿಕೆಟ್‌ನ ಅತ್ಯಂತ ವೇಗದ ಶತಕದ ದಾಖಲೆ

- ಲಿಸ್ಟ್ ಎ ಕ್ರಿಕೆಟ್‌ನ ಅತ್ಯಂತ ವೇಗದ ದ್ವಿಶತಕದ ದಾಖಲೆ