ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs AFG: ವಿರಾಟ್‌ ಕೊಹ್ಲಿಯನ್ನು ಕ್ಲೀನ್‌ ಬೌಲ್ಡ್‌ ಮಾಡಿದ್ದ ಪ್ರಿನ್ಸ್‌ ಯಾದವ್‌ಗೆ ಭಾರತ ತಂಡದಲ್ಲಿ ಸ್ಥಾನ!

ದೇಶಿ ಕ್ರಿಕೆಟ್‌ ಹಾಗೂ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಬಳಿಕ ಯುವ ವೇಗಿ ಪ್ರಿನ್ಸ್‌ ಯಾದವ್‌ ಅವರಿಗೆ ಭಾರತದ ಏಕದಿನ ತಂಡದಲ್ಲಿ ಚೊಚ್ಚಲ ಸ್ಥಾನ ನೀಡಲಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪಂದ್ಯದಲ್ಲಿ ವಿರಾಟ್‌ ಕೊಹ್ಲಿಯನ್ನು ಕ್ಲೀನ್‌ ಬೌಲ್ಡ್‌ ಮಾಡಿದ ಪ್ರಿನ್ಸ್‌ ಯಾದವ್‌ ಎಲ್ಲರ ಗಮನವನ್ನು ಸೆಳೆದಿದ್ದರು. ಇದಾದ ಬಳಿಕ ವಿರಾಟ್‌ ಕೊಹ್ಲಿ ಕೂಡ ಎಲ್‌ಎಸ್‌ಜಿ ವೇಗಿಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದರು.

ವಿರಾಟ್‌ ಕೊಹ್ಲಿಯಿಂದ ಸಲಹೆ ಪಡೆದಿದ್ದ ಪ್ರಿನ್ಸ್‌ ಯಾದವ್‌ಗೆ ಭಾರತ ತಂಡದಲ್ಲಿ ಸ್ಥಾನ.

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಯನ್ನು (Virat Kohli) ಕ್ಲೀನ್‌ ಬೌಲ್ಡ್‌ ಮಾಡಿದ ಹಾಗೂ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ತಮ್ಮ ಮಾರಕ ಬೌಲಿಂಗ್‌ ಮೂಲಕ ಎಲ್ಲರ ಗಮನ ಸೆಳೆದಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡದ ವೇಗಿ ಪ್ರಿನ್ಸ್‌ ಯಾದವ್‌ಗೆ ಭಾರತ ಏಕದಿನ ತಂಡದಲ್ಲಿ ಚೊಚ್ಚಲ ಅವಕಾಶವನ್ನು ನೀಡಲಾಗಿದೆ. ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ದೆಹಲಿಯ ನಝಫ್‌ಗಡದ ವೇಗಿಗೆ ಚೊಚ್ಚಲ ಅವಕಾಶವನ್ನು ನೀಡಲಾಗಿದೆ. ಐಪಿಎಲ್‌ ಟೂರ್ನಿಯಲ್ಲಿ ಮಾತ್ರವಲ್ಲದೆ ದೇಶಿ ಕ್ರಿಕೆಟ್‌ನಲ್ಲಿಯೂ ವಿರಾಟ್‌ ಕೊಹ್ಲಿಯನ್ನು ಪ್ರಿನ್ಸ್‌ ಯಾದವ್‌ ಬೌಲ್ಡ್‌ ಮಾಡಿದ್ದರು.

ಪ್ರಿನ್ಸ್‌ ಯಾದವ್‌ ಅವರು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ ಟೂರ್ನಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದಿದ್ದಾರೆ. ಅವರು 24ರ ಸರಾಸರಿಯೊಂದಿಗೆ ಈ ಸೀಸನ್‌ನ ಗಮನಾರ್ಹ ಉದಯೋನ್ಮುಖ ವೇಗಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ನಿರಂತರ ಪ್ರದರ್ಶನವು ಎಲ್‌ಎಸ್‌ಜಿ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಮಹತ್ವದ ಬಲ ನೀಡಿದೆ.

IND vs AFG: ರಿಷಭ್‌ ಪಂತ್‌ಗೆ ಕೊಕ್‌, ಅಫ್ಘಾನಿಸ್ತಾನ ವಿರುದ್ದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ!

ಐಪಿಎಲ್ ಹೊರತಾಗಿ ದೇಶಿ ಕ್ರಿಕೆಟ್‌ನಲ್ಲಿಯೂ ಪ್ರಿನ್ಸ್‌ ಯಾದವ್ ಉತ್ತಮ ಪ್ರದರ್ಶನ ನೀಡಿದ್ದಾರೆ. 2025–26ರ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಅವರು 18 ವಿಕೆಟ್‌ಗಳನ್ನು ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಅಗ್ರ ಐವರ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಅವರು 19.27ರ ಸರಾಸರಿಯಲ್ಲಿ ರನ್‌ಗಳೊಂದಿಗೆ ಅವರು ಪರಿಣಾಮಕಾರಿ ಪ್ರದರ್ಶನ ನೀಡಿದ್ದು, ಎಲ್ಲಾ ಸ್ವರೂಪಗಳಲ್ಲಿಯೂ ವಿಶ್ವಾಸಾರ್ಹ ವಿಕೆಟ್ ಪಡೆಯುವ ಬೌಲರ್‌ ಆಗಿ ಹೆಸರು ಮಾಡಿದ್ದಾರೆ.

ಪ್ರಿನ್ಸ್‌ ಯಾದವ್‌ರನ್ನು ಶ್ಲಾಘಿಸಿದ್ದ ವಿರಾಟ್‌ ಕೊಹ್ಲಿ

ಭಾರತದ ಹಿರಿಯ ಬ್ಯಾಟರ್ ವಿರಾಟ್‌ ಕೊಹ್ಲಿ ಅವರು ದೇಶಿ ಕ್ರಿಕೆಟ್ ವೇಳೆ ಯುವ ವೇಗಿ ಪ್ರಿನ್ಸ್‌ ಯಾದವ್‌ ಅವರೊಂದಿಗೆ ನಡೆಸಿದ್ದ ಸಂಭಾಷಣೆ ಹಾಗೂ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಂಡಿದ್ದಾರೆ. ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ಪ್ರಿನ್ಸ್‌ ಯಾದವ್ ಅವರ ಮೈದಾನದ ಹೊರಗಿನ ಸ್ವಭಾವ ಮತ್ತು ಅವರ ಜೊತೆಗಿನ ಸಂವಹನದ ಬಗ್ಗೆ ಹಂಚಿಕೊಂಡರು.

IPL 2026: ಪ್ರಿನ್ಸ್‌ ಯಾದವ್‌ಗೆ ಕ್ಲೀನ್‌ ಬೌಲ್ಡ್‌ ಆದ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ಕಿಂಗ್‌ ವಿರಾಟ್‌ ಕೊಹ್ಲಿ!

“ನಾನು ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡಲು ಹೋದಾಗ, ಪ್ರಿನ್ಸ್‌ ಯಾದವ್‌ ಯಾರೆಂದು ನನಗೂ ಹಾಗೂ ಜನರಿಗೂ ಗೊತ್ತಿಲ್ಲ. ಆದರೆ ಮೈದಾನದಲ್ಲಿ ಅವರು ತುಂಬಾ ಉದ್ದೇಶೀತವಾಗಿ ಕಾಣಿಸುತ್ತಾರೆ, ಆದರೆ ಅವರು ತುಂಬಾ ಮೃದು ಸ್ವಭಾವದ ಹುಡುಗ ಮತ್ತು ತುಂಬಾ ಹಾಸ್ಯಪ್ರಿಯ. ಇಶಾಂತ್ ಕೂಡ ಅಲ್ಲಿದ್ದ, ಇಶಾಂತ್ ಅವರನ್ನು ಚೆನ್ನಾಗಿ ತಿಳಿದಿದ್ದರಿಂದ ನಾನು ಅವರಿಗೆ ಹತ್ತಿರವಾದೆ ಮತ್ತು ಅವರು ನನ್ನೊಂದಿಗೆ ಚೆನ್ನಾಗಿ ಮನಸು ಬಿಚ್ಚಿ ಮಾತನಾಡಿದ," ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

“ಆ ವಿಜಯ್ ಹಝಾರೆ ಪಂದ್ಯಗಳಲ್ಲಿಯೇ ನಾನು ಅವರಿಗೆ ಮಿಡ್-ಆಫ್, ಕವರ್ಸ್ ಎಲ್ಲೆಲ್ಲಿ ನಿಲ್ಲಬೇಕು, ಏನು ಮಾಡಬೇಕು, ಎಲ್ಲಿ ಬೌಲ್‌ ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತಿದ್ದೆ,” ಎಂದು ಅವರು ಸೇರಿಸಿದ್ದರು.



ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ಶುಭಮನ್‌ ಗಿಲ್‌ (ನಾಯಕ), ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ (ಫಿಟ್ನೆಸ್‌), ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ನಿತೀಶ್‌ ಕುಮಾರ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌, ಕುಲ್ದೀಪ್‌ ಯಾದವ್‌, ಪ್ರಸಿಧ್‌ ಕೃಷ್ಣ, ಅರ್ಷದೀಪ್‌ ಸಿಂಗ್‌, ಪ್ರಿನ್ಸ್‌ ಯಾದವ್‌, ಗುರ್ನೂರ್‌ ಬ್ರಾರ್‌ ಹಾಗೂ ಹರ್ಷ್‌ ದುಬೇ