ನವದೆಹಲಿ: ಆಸ್ಟ್ರೇಲಿಯಾ ವಿರುದ್ದದ ಏಕದಿನ ಹಾಗೂ ಟಿ20ಐ ಸರಣಿಗಳಿಗೆ (IND vs AUS) ಬಿಸಿಸಿಐ ಅಕ್ಟೋಬರ್ 4 ರಂದು ಭಾರತ ತಂಡಗಳನ್ನು (India's Squad) ಪ್ರಕಟಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಏಕದಿನ ತಂಡಕ್ಕೆ ಮರಳಿದ್ದಾರೆ. ಆದರೆ, ಭಾರತ ಏಕದಿನ ತಂಡದ ನಾಯಕತ್ವವನ್ನು ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ಗೆ (Shubman Gill) ನೀಡಲಾಗಿದೆ ಹಾಗೂ ಉಪ ನಾಯಕತ್ವವನ್ನು ಶ್ರೇಯಸ್ ಅಯ್ಯರ್ ಕೊಡಲಾಗಿದೆ. ಭಾರತ ತಂಡಕ್ಕೆ ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್ ಶರ್ಮಾ (Rohit Sharma) ಅವರನ್ನು ಒಡಿಐ ನಾಯಕತ್ವದಿಂದ ಕೆಳಗೆ ಇಳಿಸಲಾಗಿದೆ. ಬಿಸಿಸಿಐನ ಈ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳಿಗೆ ಹಾಗೂ ಮಾಜಿ ಕ್ರಿಕೆಟಿಗರಿಗೆ ಶಾಕ್ ಆಗಿದೆ.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ರೋಹಿತ್ ಶರ್ಮಾ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಟೆಸ್ಟ್ ಕ್ರಿಕೆಟ್‌ಗೂ ನಿವೃತ್ತಿಯನ್ನು ಘೋಷಿಸಿದ್ದರು. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನಿಮಿತ್ತ 50 ಓವರ್‌ಗಳ ಸ್ವರೂಪದಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ವಿರಾಟ್ ಕೊಹ್ಲಿ ಕೂಡ ಇದೇ ಹಾದಿಯಲ್ಲಿದ್ದಾರೆ. ಅಂದ ಹಾಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. ಇದಾದ ಬಳಿಕ ರೋಹಿತ್, ತಮ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತಕ್ಕೆ ಗೆದ್ದುಕೊಟ್ಟಿದ್ದರು. ಅದರಂತೆ 2027ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದುಕೊಡಲು ಎದುರು ನೋಡುತ್ತಿದ್ದರು. ಆದರೆ, ಇದೀಗ ಗಿಲ್‌ಗೆ ನಾಯಕತ್ವ ನೀಡುವ ಮೂಲಕ ರೋಹಿತ್‌ಗೆ ಬಿಸಿಸಿಐ ನಿರಾಶೆ ಮೂಡಿಸಿದೆ.
IND vs AUS: ಆಸ್ಟ್ರೇಲಿಯಾ ವೈಟ್‌ಬಾಲ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಏಕದಿನ ತಂಡಕ್ಕೆ ಶುಭಮನ್ ಗಿಲ್ ನಾಯಕ!
ಒಡಿಐ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ಕೈ ಬಿಡಲು ಕಾರಣವೇನು?
2027ರ ಐಸಿಸಿ ಏಕದಿನ ವಿಶ್ವಕಪ್ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಅವರಿಗೆ ಸ್ಥಾನ ಇನ್ನೂ ಖಚಿತವಿಲ್ಲ. ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನೂ ಎರಡು ವರ್ಷಗಳ ಕಾಳ ಸಮಯವಿದೆ. ಅಲ್ಲಿಯವರೆಗೂ ರೋಹಿತ್ ಶರ್ಮಾ ತಮ್ಮ ಫಿಟ್‌ನೆಸ್ ಹಾಗೂ ಫಾರ್ಮ್ ಅನ್ನು ಉಳಿಸಿಕೊಳ್ಳಲಿದ್ದಾರೆಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಹಾಗಾಗಿ ಹೊಸ ನಾಯಕನನ್ನು ನೇಮಿಸಿದರೆ, ಅವರಿಗೆ ಒಡಿಐ ವಿಶ್ವಕಪ್ ಒಳಗಾಗಿ ತಯಾರಿ ನಡೆಸಲು ಹೆಚ್ಚಿನ ಅವಕಾಶ ಸಿಗಲಿದೆ. ಈ ಕಾರಣದಿಂದಲೇ ಬಿಸಿಸಿಐ ಭಾರತ ಏಕದಿನ ತಂಡದ ನಾಯಕತ್ವವನ್ನು ಶುಭಮನ್ ಗಿಲ್‌ಗೆ ನೀಡಿದೆ ಎಂದು ಹೇಳಬಹುದು. ಆ ಮೂಲಕ ರೋಹಿತ್ ಶರ್ಮಾ ಅವರನ್ನು ಹಿರಿಯ ಆಟಗಾರನನ್ನಾಗಿ ಉಳಿಸಿಕೊಳ್ಳಲಿದೆ.
ರೋಹಿತ್ ಶರ್ಮಾ ಬಗ್ಗೆ ಅಜಿತ್ ಅಗರ್ಕರ್ ಹೇಳಿದ್ದೇನು?
ಭಾರತ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೈ ಬಿಟ್ಟ ನಿರ್ಧಾರವನ್ನು ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಸಮರ್ಥಿಸಿಕೊಂಡಿದ್ದಾರೆ. ಮೂರೂ ಸ್ವರೂಪಗಳಿಗೆ ವಿಭಿನ್ನ ನಾಯಕರನ್ನು ಹೊಂದಿರುವುದು ತುಂಬಾ ಕಠಿಣ ಹಾಗೂ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಜಿತ್ ಅಗರ್ಕರ್ ತಿಳಿಸಿದ್ದಾರೆ.
"2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಬಗ್ಗೆ ಯೋಚನೆ ಮಾಡುವ ಸಂದರ್ಭದಲ್ಲಿ ಮೂರೂ ಸ್ವರೂಪದ ತಂಡಗಳಿಗೆ ವಿಭಿನ್ನ ನಾಯಕರನ್ನು ಹೊಂದಿರುವುದು ಪ್ರಾಯೋಗಿಕವಾಗಿ ಸಾಧ್ಯವಾಗುವುದಿಲ್ಲ,"ಎಂದು ಭಾರತ ತಂಡವನ್ನು ಪ್ರಕಟಿಸಿದ ಬಳಿಕ ಬಿಸಿಸಿಐ ಚೀಫ್ ಸೆಲೆಕ್ಟರ್ ಸ್ಪಷ್ಟನೆ ನೀಡಿದ್ದರು.
IND vs WI: ವಿಂಡೀಸ್ ಬ್ಯಾಟಿಂಗ್ ವೈಫಲ್ಯ, ಇನಿಂಗ್ಸ್ ಅಂತರದಲ್ಲಿ ಮೊದಲನೇ ಟೆಸ್ಟ್ ಗೆದ್ದ ಭಾರತ!
ರೋಹಿತ್ ಶರ್ಮಾ ಅವರು ಭಾರತ ಏಕದಿನ ತಂಡದ ನಾಯಕನಾಗಿ 56 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 42ರಲ್ಲಿ ಗೆಲುವು ಪಡೆದಿದ್ದರೆ 12ರಲ್ಲಿ ಸೋಲು ಅನುಭವಿಸಿದ್ದಾರೆ. ಇದರಲ್ಲಿ ಒಂದು ಪಂದ್ಯ ಟೈ ಆಗಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಶರ್ಮಾ ಒಡಿಐ ಕ್ರಿಕೆಟ್‌ಗೆ ವಿದಾಯ ಹೇಳಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಅವರು ನಿವೃತ್ತಿಯ ಎಲ್ಲಾ ಊಹಾಪೋಹಗಳನ್ನು ರೋಹಿತ್ ಶರ್ಮಾ ಗಟ್ಟಿ ಮುರಿದಂತೆ ತಳ್ಳಿ ಹಾಕಿದ್ದರು.